ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಯೋಗಿಕ ಶಿಕ್ಷಣಕ್ಕೆ ಆದ್ಯತೆ

ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ) ಪ್ರೊ. ಕೆ.ಜೆ. ಸುರೇಶ್ ಸಲಹೆ
Last Updated 5 ಆಗಸ್ಟ್ 2019, 17:05 IST
ಅಕ್ಷರ ಗಾತ್ರ

ದಾವಣಗೆರೆ: ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಯುಗದ ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಪೂರಕ ಶೈಕ್ಷಣಿಕ ಪಠ್ಯಕ್ರಮ ರೂಪಿಸುವ ಜೊತೆಗೆ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ) ಪ್ರೊ. ಕೆ.ಜೆ. ಸುರೇಶ್ ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ನಡೆದ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪಠ್ಯಕ್ರಮ ಸಿದ್ಧತೆ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿ, ‘ಯಾವುದೋ ಕಾಲಘಟ್ಟದಲ್ಲಿ ಸಿದ್ಧಪಡಿಸಿದ ಪಠ್ಯಕ್ರಮವನ್ನೇ ಈಗಲೂ ಓದುವುದರಲ್ಲಿ ಅರ್ಥವಿಲ್ಲ. ಕಾಲಮಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಜೊತೆಗೆ ಪ್ರಾಧ್ಯಾಪಕರ ಅಧ್ಯಯನ ಕ್ರಮವೂ ಬದಲಾಗಬೇಕು’ ಎಂದರು.

ನಿರಂತರ ಓದು, ಅಧ್ಯಯನ, ಸಂಶೋಧನೆ, ಕಲಿಯುವ ಮತ್ತು ಕಲಿಸುವ ಇಚ್ಛಾಶಕ್ತಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಲ್ಲಿ ಇದ್ದರೆ ಮಾತ್ರ ಪದವಿಯ ಉದ್ದೇಶ ಸಾರ್ಥಕ ಎನಿಸುತ್ತದೆ. ಆದರೆ ಇತ್ತೀಚೆಗೆ ಕಲಿಕೆಯ ಆಸಕ್ತಿಯ ಪರಿಣಾಮ ಬೋಧನೆ ಮತ್ತು ಅಧ್ಯಯನದ ಮೇಲೆ ಬೀರುತ್ತಿದೆ. ಇದರಿಂದಾಗಿ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಪೈಪೋಟಿ ಎದುರಿಸಲು ಸಾಧ್ಯವಾಗದೆ ಹಿಂದುಳಿಯುವಂತಾಗಿದೆ. ಇದೇ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ನಿರುದ್ಯೋಗ ಭೂತ ಕಾಡುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

‘ಪಠ್ಯಕ್ರಮದಲ್ಲಿಯೇ ಭಾಷಾ ಜ್ಞಾನ ಅಳವಡಿಸುವ ಕೆಲಸ ಆಗಬೇಕು. ಇಂಗ್ಲಿಷ್ ಜ್ಞಾನ ಅನಿವಾರ್ಯ.ಇದರೊಂದಿಗೆ ಕಂಪ್ಯೂಟರ್ ಶಿಕ್ಷಣ, ಸಂವಹನ ಕೌಶಲ, ವೃತ್ತಿ ಕೌಶಲ ಮತ್ತು ಆತ್ಮವಿಶ್ವಾಸ ರೂಢಿಸುವ ಪ್ರಯತ್ನವೂ ಆಗಬೇಕು. ಯಾವುದೇ ವಿಷಯದ ಬಗ್ಗೆ ಆಳವಾದ ಅಧ್ಯಯನಕ್ಕೆ ಅವಕಾಶ ನೀಡಿ, ಪ್ರಭುತ್ವ ಸಾಧಿಸುವಂತಾಗಬೇಕು. ಆಗಲೇ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಗುರುತಿಸಿಕೊಂಡು ಬೆಳೆಯಲು ಸಾಧ್ಯವಾಗುತ್ತದೆ’ ಎಂದು ಪ್ರೊ. ಸುರೇಶ್ ನುಡಿದರು.

‘ಸಮಾಜ ವಿಜ್ಞಾನವನ್ನು ವಾಣಿಜ್ಯ ಮತ್ತು ವಿಜ್ಞಾನದಿಂದ ದೂರ ಇಡುವ ಪ್ರಯತ್ನ ನಡೆಯುತ್ತಲೇ ಇದೆ. ಇಂಥ ವಾತಾವರಣ ಕೊನೆಗೊಳ್ಳಬೇಕು. ಸಮಾಜ ವಿಜ್ಞಾನ ವಿಭಾಗದ ವಿದ್ಯಾರ್ಥಿಯೂ ಕಂಪ್ಯೂಟರ್ ವಿಜ್ಞಾನ ಕಲಿಯಬೇಕು. ಆಸಕ್ತಿಯ ಇನ್ನೂ ಬೇರೆ ವಿಷಯಗಳನ್ನು ತಿಳಿಯಬೇಕು. ಅದಕ್ಕೆ ಅಗತ್ಯವಿರುವ ಪಠ್ಯಕ್ರಮ ಸಿದ್ಧವಾಗಬೇಕು. ಮಡಿವಂತಿಕೆ ಬಿಟ್ಟು ವಿದ್ಯಾರ್ಥಿಗಳಿಗೆ ಮುನ್ನುಗ್ಗುವಂತೆ ಪ್ರೇರೇಪಿಸಿದಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ದಾವಣಗೆರೆ ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಸಿ.ಎಚ್. ಮುರುಗೇಂದ್ರಪ್ಪ, ‘ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲವಾಗುವ ಯಾವುದೇ ಒಳ್ಳೆಯ ಕೆಲಸಕ್ಕೆ ಪ್ರೋತ್ಸಾಹ ಇರುತ್ತದೆ. ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಸಮಸ್ಯೆಗೆ ಸ್ಪಂದಿಸಿ, ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಸಮಾಜ ವಿಜ್ಞಾನ ವಿಭಾಗದ ಡೀನ್ ಪ್ರೊ. ಕೆ.ಬಿ.ರಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಮುನ್ನ ಪ್ರಾಧ್ಯಾಪಕರು ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿಕೊಳ್ಳುವುದು ಅಗತ್ಯ. ಆಗ ಮಾತ್ರ ಉತ್ತಮ ವಿದ್ಯಾರ್ಥಿಯನ್ನು ರೂಪಿಸಲು ಸಾಧ್ಯ. ಅಧ್ಯಯನ, ಸಂಶೋಧನೆಯಲ್ಲಿ ಪ್ರಾಧ್ಯಾಪಕರು ಯಾವುದೇ ರಾಜೀ ಮಾಡಿಕೊಳ್ಳಬಾರದು’ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಪ್ರೊ. ಎಂ.ಆರ್. ಹಲಸಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವಣಗೆರೆ ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ಅಧ್ಯಾಪಕರ ವೇದಿಕೆ ಅಧ್ಯಕ್ಷ ಪ್ರೊ ಎಂ.ಬಿ. ಹನುಮಂತಪ್ಪ, ಉಪಾಧ್ಯಕ್ಷ ಸಿ.ಎಸ್. ಸೋಮಶೇಖರ್, ಕಾರ್ಯದರ್ಶಿ ಪ್ರೊ. ಕೆ. ರಂಗಸ್ವಾಮಿ, ಖಜಾಂಚಿ ಪ್ರೊ. ಶೈಲಜಾ ಉಪಸ್ಥಿತರಿದ್ದರು. ಡಾ. ಬಿ.ವಿ. ಧನಂಜಯಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಚಾರ್ಯ ಬಿ.ವಿ. ವೀರಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT