ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಟಿಲೇಟರ್ ಸಿಗದೆ ಗರ್ಭಿಣಿ ಸಾವು

ವೈದ್ಯರ ನಿರ್ಲಕ್ಷ್ಯ ಆರೋಪ* ಜಿಲ್ಲಾಸ್ಪತ್ರೆ ಎದುರು ಸಂಬಂಧಿಕರ ರೋದನ
Last Updated 4 ಫೆಬ್ರುವರಿ 2020, 12:44 IST
ಅಕ್ಷರ ಗಾತ್ರ

ದಾವಣಗೆರೆ: ಸೂಕ್ತ ಸಮಯಕ್ಕೆ ವೆಂಟಿಲೇಟರ್ ಸಿಗದ ಹಿನ್ನೆಲೆಯಲ್ಲಿ ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರು ಸಾವನ್ನಪ್ಪಿದ್ದಾರೆ.

ಚಿತ್ರದುರ್ಗದ ಹುಲ್ಲೂರು ಗ್ರಾಮದ ಭವಾನಿ (25) ಮೃತಪಟ್ಟವರು. ಗರ್ಭಿಣಿ ಸಾವಿಗೆ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಆಕೆಯ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಕರುಳು ಒಂದಕ್ಕೊಂದು ಅಂಟಿಕೊಂಡಿರುವ (ಇಂಟೆಸ್ಟಿನಲ್ ಅಬ್ಟ್ರಕ್ಷನ್) ಸಮಸ್ಯೆಯಿಂದ ಭವಾನಿಯವರನ್ನು ಆರಂಭದಲ್ಲಿ ಚಿತ್ರದುರ್ಗ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರು ದಾವಣಗೆರೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ಹೋಗಲು ಸೂಚಿಸಿದ್ದಾರೆ. ಅಲ್ಲಿ ಚಿಕಿತ್ಸೆ ಕೈಗೆಟುಕದ ಹಿನ್ನೆಲೆಯಲ್ಲಿ ಸಂಬಂಧಿಕರು ಸೋಮವಾರ ಸಿಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಭವಾನಿ ಅವರಿಗೆ ಉಸಿರಾಟದ ತೊಂದರೆ ಇದ್ದು, ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. ಈ ವೇಳೆ ವೆಂಟಿಲೇಟರ್‌ ಕೆಟ್ಟುಹೋಗಿದೆ. ವೆಂಟಿಲೇಟರ್‌ ಇಲ್ಲದ ಕಾರಣ ವೈದ್ಯರು ಪಕ್ಕದಲ್ಲೇ ಇದ್ದ ಬಾಪೂಜಿ ಆಸ್ಪತ್ರೆಗೆ ಹೋಗಿ ಎಂದು ರೆಫರ್ ಮಾಡಿದ್ದಾರೆ. ಆದರೆ ಅಷ್ಟರೊಳಗೆ ಭವಾನಿ ಮೃತಪಟ್ಟಿದ್ದರು.

‘ನನ್ನ ಮಗಳಿಗೆ ಸೂಕ್ತ ಚಿಕಿತ್ಸೆ ನೀಡಿಲ್ಲ. ಆಸ್ಪತ್ರೆಗೆ ದಾಖಲಿಸಿದಾಗ ಮೊದಲು ಸ್ಕ್ಯಾ‌ನಿಂಗ್‌ಗೆ ಬರೆದು ಕೊಟ್ಟರು. ಜ್ವರ ಬಂದರೂ ಸರಿಯಾಗಿ ತಪಾಸಣೆ ಮಾಡಿಲ್ಲ. ಸ್ಕ್ಯಾನಿಂಗ್ ಮಾಡಿಸಿ ತಂದು ರಿಪೋರ್ಟ್‌ ತಂದುಕೊಟ್ಟರೂ ವೈದ್ಯರು ತಡವಾಗಿ ಗಮನಿಸಿದರು. ಚಿಕಿತ್ಸೆ ನೀಡುವಲ್ಲಿ ವಿಳಂಬ ಮಾಡಿದ್ದರಿಂದ ನನ್ನ ಮಗಳಿಗೆ ಈ ಗತಿ ಬಂತು. ವೆಂಟಿಲೇಟರ್ ಇದ್ದಿದ್ದರೆ ನನ್ನ ಮಗಳು ಬದುಕುತ್ತಿದ್ದಳು ’ ಎಂದು ಭವಾನಿ ಅವರ ತಾಯಿ ಭಾಗ್ಯಮ್ಮ ಅಳಲು ತೋಡಿಕೊಂಡರು.

ವೈದ್ಯರ ಪ್ರತಿಭಟನೆ

ವೆಂಟಿಲೇಟರ್‌ ಇಲ್ಲದ ಕಾರಣ ಗರ್ಭಿಣಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಭವಾನಿ ಸಂಬಂಧಿಕರು ನಮ್ಮ ಮೇಲೆ ದೌರ್ಜನ್ಯ ನಡೆಸಿ ಹಲ್ಲೆ ನಡೆಸಿದ್ದಾರೆ. ರೋಗಿಯ ಸಂಬಂಧಿಕರಿಗೆ ಪರಿಸ್ಥಿತಿ ಅರಿವು ಮೂಡಿಸಿದರೂ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ನಾವು ನಿರ್ಲಕ್ಷ ವಹಿಸಿಲ್ಲ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳು ಹಾಗೂ ಶುಶ್ರೂಷಕರ ಸಮಸ್ಯೆಯೇ ಈ ಘಟನೆಗೆ ಕಾರಣ. ನಾವು ಭಯಬೀತರಾಗಿದ್ದು, ನಮಗೆ ರಕ್ಷಣೆ ನೀಡಿ ಎಂದು ವೈದ್ಯ ವಿದ್ಯಾರ್ಥಿಗಳು, ಹಿರಿಯ ವೈದ್ಯರೊಂದಿಗೆ ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.

ಸಂಬಂಧಿಕರ ಆಕ್ರೋಶ

ವೆಂಟಿಲೇಟರ್‌ ಅವಶ್ಯಕತೆ ಇದ್ದರೂ ನೀಡಿಲ್ಲ. ವೈದ್ಯರು ಬೇಕೆಂದೇ ನಿರ್ಲಕ್ಷ್ಯ ತೋರಿದ್ದಾರೆ. ಭವಾನಿಯನ್ನು ಸರಿಯಾಗಿ ನೋಡಿಕೊಂಡಿಲ್ಲ. ಕೇವಲ ಕಾಲಹರಣ ಮಾಡುವುದರಲ್ಲಿಯೇ ನಿರತರಾಗಿದ್ದರು. ಜ್ವರ ಬಂದರೂ ಸರಿಯಾಗಿ ತಪಾಸಣೆ ಮಾಡಿಲ್ಲ, ಕೇಳಿದರೆ ನಮ್ಮನ್ನೇ ಬೈದು ಹೊರಗಟ್ಟಿದ್ದಾರೆ’ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.

ಕರುನಾಡ ಸಮರ ಸೇನೆ, ದಲಿತ ಸಂಘಟನೆಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿ ಇನ್ನೆರಡು ದಿನದಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯವಹಿಸಿದ ವೈದ್ಯರನ್ನು ಅಮಾನತು ಮಾಡದೇ ಹೋದಲ್ಲಿ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

‘ನಿರ್ಲಕ್ಷ್ಯ ವಹಿಸಿಲ್ಲ

‘ಯಾವುದೇ ಕಾರಣಕ್ಕೂ ವೈದ್ಯರು ನಿರ್ಲಕ್ಷ್ಯ ವಹಿಸಿಲ್ಲ. ಆದರೂ ರೋಗಿಯ ಸಂಬಂಧಿಕರು ನಮ್ಮ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಇದು ಸಾರ್ವಜನಿಕ ಆಸ್ಪತ್ರೆ ಆದ್ದರಿಂದ 24 ಗಂಟೆಯೂ ವೆಂಟಿಲೇಟರ್‌ಗಳ ಬಳಕೆಯಾಗುತ್ತದೆ. ತೊಂದರೆ ಬಂದಾಗ ತಕ್ಷಣವೇ ರಿಪೇರಿ ಮಾಡಿಸಲಾಗುತ್ತದೆ’ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜು ಹೇಳಿದರು.

ಪ್ರಕರಣ ಸಂಬಂಧ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಎಸ್‌ಪಿ ರಾಜೀವ್‌, ಡಿವೈಎಸ್ಪಿ ನಾಗೇಶ್‌ ಐತಾಳ್‌, ಸಿಪಿಐ ತಿಮ್ಮಣ್ಣ, ಪಿಎಸ್‌ಐ ವೀರಬಸಪ್ಪ ಕುಸಲಾಪುರ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT