ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದ ಮೂಲವಾದ ಕೆರೆಗಳನ್ನು ರಕ್ಷಿಸಿ: ಡಾ.ಎಂ.ಜಿ.ಈಶ್ವರಪ್ಪ ಸಲಹೆ

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಸಲಹೆ
Last Updated 8 ನವೆಂಬರ್ 2021, 7:14 IST
ಅಕ್ಷರ ಗಾತ್ರ

ದಾವಣಗೆರೆ: ಇಂದಿನ ದಿನಗಳಲ್ಲಿ ನಮ್ಮ ನಾಯಕರು ಕೆರೆಗಳನ್ನು ಮುಚ್ಚಿ ಅವುಗಳ ಮೇಲೆ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಕೆರೆಗಳ ನಗರವಾಗಿದ್ದ ಬೆಂಗಳೂರು ಈಗ ಕಟ್ಟಡಗಳ ನಗರವಾಗಿರುವುದೇ ಸಾಕ್ಷಿ ಎಂದು ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧಗಂಗಾ ವಿದ್ಯಾಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಭಾನುವಾರ ನಡೆದ ಲೇಖಕ ಬಸವರಾಜ ಕುಂಚೂರು ಅವರ ‘ನಮ್ಮ ಕೆರೆಗಳು ಸಾಂಪ್ರದಾಯಿಕ ಜಲಕನ್ನಡಿಗಳು’ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಹಿಂದೆ ಊರಿಗೊಂದು ಕೆರೆಗಳು ಇರುತ್ತಿದ್ದವು. ಆದರೆ, ಈಗ ಅವುಗಳನ್ನು ಕಬಳಿಸಿಕೊಂಡು ಮನೆ, ಕಟ್ಟಡಗಳನ್ನು ನಿರ್ಮಿಸಿಕೊಂಡು ಅವುಗಳನ್ನು ಕಾಣದಂತೆ ಮಾಡಿದ್ದಾರೆ. ಕೆರೆಗಳು ಬದುಕು, ಅನ್ನ ಕೊಡುವ ಮೂಲಗಳು ಎಂದರು.

ಈ ಹಿಂದೆ ಕೆರೆಗಳು ಸದಾ ತುಂಬಿರುತ್ತಿದ್ದವು. ಆದರೆ, ಈಗ ಅವುಗಳು ಬರಿದಾಗುತ್ತಿವೆ. ಇದಕ್ಕೆ ಮನುಷ್ಯನ ಸ್ವಾರ್ಥವೇ ಕಾರಣ. ಬೋರ್‌ವೆಲ್‌ಗಳನ್ನು ಕೊರೆದು ಜಲಮೂಲವನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆರೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ, ಪುಸ್ತಕಗಳನ್ನು ಹೊರ ತಂದಿರುವ ಲೇಖಕ ಬಸವರಾಜ ಕುಂಚೂರು ಅವರು ಕೆರೆಯ ಮಹಾಪುರುಷ ಎಂದರೆ, ತಪ್ಪಾಗಲಾರದು. ಇವರು ಕೆರೆಗಳ ಚೌಕಟ್ಟು, ವಿಸ್ತೀರ್ಣ, ಅವುಗಳಅಳತೆ, ನೀರು ಸಂಗ್ರಹಣೆ ಸಾಮರ್ಥ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದು, ವಿವಿಗಳು ಅವರಕಾರ್ಯವನ್ನು ಗುರುತಿಸಬೇಕು ಆಗ್ರಹಿಸಿದರು.

ಪುಸ್ತಕ ಬಿಡುಗಡೆ ಮಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ.ಎಸ್.ಬಿ. ರಂಗನಾಥ್, ‘ಮನುಷ್ಯನ ಮಿತಿಮೀರಿದ ದಾಹ ಗಂಡಾಂತರಗಳಿಗೆ ತಳ್ಳುತ್ತಿದೆ. ಇಂದು ಕುಡಿಯಲು ನೀರು ಸಿಗುತ್ತಿಲ್ಲ. ಮನುಷ್ಯನ ದುರಾಸೆ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಯುದ್ಧವೇ ನಡೆಯಬಹುದು’ ಎಂದು ಎಚ್ಚರಿಸಿದರು.

‘ಉತ್ತರ ಕರ್ನಾಟಕದಲ್ಲಿ ಮಳೆಗಾಲದಲ್ಲಿ ನೆರೆ ಬರುತ್ತದೆ. ಆದರೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಸಾವಿರಾರು ಟಿಎಂಸಿ ನೀರು ವ್ಯರ್ಥವಾಗಿ ಹರಿದುಹೋಗುತ್ತದೆ. ಈ ವ್ಯರ್ಥ ನೀರನ್ನು ಸಂಗ್ರಹಿಸುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ‘ ಎಂದು ವಿಷಾದ ವ್ಯಕ್ತಪಡಿಸಿದರು.

‘ಅನೇಕ ಕೆರೆಗಳ ಒತ್ತುವರಿಯಾಗುತ್ತಿದ್ದು, ಉದ್ಯಾನ ನಗರಗಳೆಲ್ಲಾ ಕಾಂಕ್ರೀಟ್ ನಗರಗಳಾಗಿ ಮಾರ್ಪಾಡಾಗುತ್ತಿದ್ದು, ನೀರನ್ನು ಸಂರಕ್ಷಣೆ ಮಾಡಬೇಕು‘ ಎಂದು ಆಗ್ರಹಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕ ಬಸವರಾಜ ಕುಂಚೂರು, ‘ಕೆರೆಗಳು ದೇಶೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ಕೆರೆ ಹಳ್ಳಿಗರಿಗೆ ಕಾಮಧೇನು ಮತ್ತು ಕಲ್ಪವೃಕ್ಷವಾಗಿದೆ. ಮನೆಗೆ ಮಕ್ಕಳು ಇರಬೇಕು. ಊರಿಗೊಂದು ಕೆರೆ ಬೇಕು’ ಎಂದು ಪ್ರತಿಪಾದಿಸಿದರು.

‘ಹಲವು ಕೃತಿಗಳನ್ನು ರಚಿಸಿದರೂ ದಾವಣಗೆರೆಯ ಸಾಹಿತ್ಯಾಸಕ್ತರು ನನ್ನನ್ನು ಗುರುತಿಸಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ಮಹಿಳಾ ಕಾಂಗ್ರೆಸ್ ಮುಖಂಡರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ‘ವಿಶ್ವವಿದ್ಯಾಲಯಗಳು ಮಾಡುವ ಕೆಲಸವನ್ನು ಬಸವರಾಜ ಕುಂಚೂರು ಅವರು ಮಾಡಿದ್ದಾರೆ. ನೀರನ್ನು ದುರ್ಬಳಕೆ ಮಾಡಬಾರದು. ಕೆರೆಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಪತ್ರಕರ್ತ ಬಿ.ಎನ್‌.ಮಲ್ಲೇಶ್ ಕೆರೆಗಳ ಅಳಿವು–ಉಳಿವು ಕುರಿತು ಮಾತನಾಡಿ, ’ಜಿಲ್ಲೆಯಲ್ಲಿ 112 ಕೆರೆಗಳು ಮಾಯವಾಗಿದ್ದು, ಅವುಗಳ ಕುರಿತು ಸಂಶೋಧನೆಯಾಗಬೇಕಿದೆ. ಮಾಜಿ ಸಚಿವ ಮಲ್ಲಿಕಾರ್ಜುನ್ ಅವರು ಕುಂದವಾಡ ಕೆರೆ ನಿರ್ಮಿಸದಿದ್ದರೆ ದಾವಣಗೆರೆಯಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತಿತ್ತು‘ ಎಂದು ಹೇಳಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ, ‘ಮಲ್ಲಿಕಾರ್ಜುನ ಕಲಮರಹಳ್ಳಿ ಅವರು ಇತಿಹಾಸದ ಕಣ್ಣಲ್ಲಿ ಕೆರೆಗಳು’ ಕುರಿತು ಮಾತನಾಡಿದರು.

ಡಾ.ಬುರುಡೆಕಟ್ಟೆ ಮಂಜಪ್ಪ, ಮಂಜುಳಾ ಡಾ.ಮಂಜುನಾಥಗೌಡ, ಕಸಾಪ ತಾಲ್ಲೂಕು ಮಾಜಿ ಅಧ್ಯಕ್ಷಬಿ.ವಾಮದೇವಪ್ಪ, ಸಾಹಿತಿ ಹಿ.ಗೂ. ದುಂಡ್ಯಪ್ಪ, ಎಸ್.ಬಿ. ರುದ್ರೇಗೌಡ, ನಿವೃತ್ತ ಉಪನ್ಯಾಸಕ ಕೆ.ಸಿದ್ದಪ್ಪಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT