ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ ಅಧ್ಯಕ್ಷೆ ವಿರುದ್ಧ ದಿಢೀರ್‌ ಪ್ರತಿಭಟನೆ

ಸಿಇಒ, ಡಿಎಸ್‌ ವಿರುದ್ಧ ಎಸಿಬಿಗೆ ದೂರು: ಗ್ರಾ.ಪಂ. ಪ್ರತಿನಿಧಿಗಳ ಆಕ್ಷೇಪ
Last Updated 14 ಡಿಸೆಂಬರ್ 2018, 16:16 IST
ಅಕ್ಷರ ಗಾತ್ರ

ದಾವಣಗೆರೆ: ಸಿಇಒ, ಡಿಎಸ್‌ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿ ಎಸಿಬಿಗೆ ದೂರು ನೀಡಿರುವ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್‌. ಜಯಶೀಲಾ ವಿರುದ್ಧ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಕೆಲ ಸದಸ್ಯರ ನೇತೃತ್ವದಲ್ಲಿ ಕೂಲಿಕಾರ್ಮಿಕರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಕಚೇರಿಗೆ ದಿಢೀರ್‌ ಬಂದ ನೂರಾರು ಮಂದಿ, ಅಧ್ಯಕ್ಷೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಅಶ್ವತಿ ಅವರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ನಮ್ಮ ಸಮಸ್ಯೆಗಳನ್ನು ಆಲಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿದ್ದಾರೆ. ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದಾರೆ. ಆದರೆ, ಒಮ್ಮೆಯೂ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡದ ಅಧ್ಯಕ್ಷೆ, ಸಿಇಒ ವಿರುದ್ಧ ಏಕಾಏಕಿ ದೂರು ನೀಡಿದ್ದಾರೆ. ರಾಜಕೀಯ ಪ್ರೇರಿತ ದೂರನ್ನು ಎಸಿಬಿ ಅಧಿಕಾರಿಗಳು ಪರಿಗಣಿಸಬಾರದು’ ಎಂದು ಆಗ್ರಹಿಸಿದರು.

‘ಭ್ರಷ್ಟಾಚಾರ ತನಿಖೆ ಕಡೆಗೆ ಅಧಿಕಾರಿಗಳು ಗಮನ ನೀಡುತ್ತಾರೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಅನುಷ್ಠಾನಕ್ಕೆ ತೊಂದರೆಯಾಗಲಿದೆ. ಕೂಲಿ ಕೆಲಸ ಸಿಗದೇ ಬಡ ಜನರು ಗುಳೇ ಹೋಗಬೇಕಾಗುತ್ತದೆ. ನಿಮ್ಮ ರಾಜಕೀಯಕ್ಕಾಗಿ, ನಮ್ಮ ಕೂಲಿ ಕಿತ್ತುಕೊಳ್ಳಬೇಡಿ. ನಮಗೆ ಕೂಲಿ ಕೆಲಸ ನೀಡಿ’ ಎಂದು ಒತ್ತಾಯಿಸಿದರು.

‘ಎಸಿಬಿಗೆ ದೂರು ಕೊಟ್ಟಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಜಯಶೀಲಾ ಅವರು ದೂರು ನೀಡುವ ಮುನ್ನ ಹಳ್ಳಿಗಳಿಗೆ ಭೇಟಿ ನೀಡಬೇಕಿತ್ತು. ನಮ್ಮ ಅಭಿಪ್ರಾಯವನ್ನೂ ಕೇಳಬೇಕಿತ್ತು. ಅಧ್ಯಕ್ಷರೊಬ್ಬರಿಂದಲೇ ಜಿಲ್ಲಾ ಪಂಚಾಯಿತಿ ಯೋಜನೆಗಳ ಅನುಷ್ಠಾನ ಆಗುವುದಿಲ್ಲ. ಅಧಿಕಾರಿಗಳು, ಸ್ಥಳೀಯ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳ ವಿಶ್ವಾಸವನ್ನೂ ಪಡೆದುಕೊಂಡು ಕೆಲಸ ಮುಂದುವರಿಸಬೇಕು’ ಎಂದು ಹೇಳಿದರು.

ಎಸಿಬಿಗೆ ನೀಡಿರುವ ದೂರನ್ನು ಹಿಂಪಡೆಯಬೇಕು. ಅಧಿಕಾರಿಗಳನ್ನು ಶೋಷಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷೆ ಜಯಶೀಲಾ ಸ್ಥಳಕ್ಕೆ ಬರಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡುವುದಾಗಿ ಭರವಸೆ ನೀಡಬೇಕು. ಅಲ್ಲಿಯವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಆದರೆ, ಜಯಶೀಲಾ ಅವರು ಊರಿನಲ್ಲಿ ಇರದ ಕಾರಣ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸೋಮವಾರದ ಒಳಗೆ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.

ಕೂಲಿಕಾರ್ಮಿಕ ಮುಖಂಡರಾದ ಪಲ್ಲಾಗಟ್ಟೆ ನಾಗಪ್ಪ, ಟಿ.ಡಿ. ಪ್ರಕಾಶ್‌ ಪಲ್ಲಾಗಟ್ಟೆ, ದೊಣೆಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಕ್ಕೇಶ್, ಬಸಪ್ಪ, ಪಲ್ಲಾಗಟ್ಟೆ ಮಾರಾನಾಯ್ಕ, ಬಸಾಪುರ ರವಿಚಂದ್ರ, ಬಿದರಕೆರೆ, ದಿದ್ದಿಗೆ, ಬಸವನಕೋಟೆ, ಮಡ್ರಹಳ್ಳಿ, ಹಿಸಕೆರೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಾರ್ಮಿಕರಿಗೆ ತೊಂದರೆ ಆಗಲ್ಲ: ಅಧ್ಯಕ್ಷೆ ಸ್ಪಷ್ಟನೆ
‘ಅಧಿಕಾರಿಗಳು ನಡೆಸಿರುವ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಯಲಿದೆ. ಇದರಿಂದ ಉದ್ಯೋಗ ಖಾತರಿ ಯೋಜನೆಗೆ ತೊಂದರೆ ಆಗದು. ಕಾರ್ಮಿಕರಿಗೆ ಕೆಲಸವೂ ಸಿಗಲಿದೆ. ನಾನು ಯಾವಾಗಲೂ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್‌. ಜಯಶೀಲಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಶುಕ್ರವಾರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರಲ್ಲಿ ಹೆಚ್ಚಿನವರು ಜಗಳೂರಿನವರೇ ಇದ್ದರು. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹೆಚ್ಚು ಭ್ರಷ್ಟಾಚಾರ ನಡೆಸಿರುವುದೂ ಜಗಳೂರು ತಾಲ್ಲೂಕಿನಲ್ಲಿಯೇ. ತನಿಖೆ ನಡೆಯಲಿ, ಸತ್ಯಾಂಶ ಹೊರಬರಲಿ. ರಾಜಕೀಯ ಕಾರಣದಿಂದ ಎಸಿಬಿಗೆ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಇಒ ಮೌನ
ಅಧ್ಯಕ್ಷೆ ಜಯಶೀಲಾ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳ ಜತೆಗೆ ಬಂದ ಸಿಇಒ ಅಶ್ವತಿ, ಡಿಎಸ್‌ ಷಡಕ್ಷರಪ್ಪ ಅವರು ಪ್ರತಿಭಟನಕಾರರ ಅಹವಾಲುಗಳನ್ನು ಆಲಿಸಿದರು. ಆದರೆ, ಯಾವುದಕ್ಕೂ ಉತ್ತರ ನೀಡದೇ ಮೌನದೊಂದಿಗೆ ಹಿಂತಿರುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT