ಬುಧವಾರ, ಜೂನ್ 29, 2022
24 °C

ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆ ಮತ್ತು ನಿರುದ್ಯೋಗ ನಿವಾರಣೆ ಮಾಡುವಲ್ಲಿ ವಿಫಲವಾಗಿರುವುದನ್ನು ಖಂಡಿಸಿ ಸಿಪಿಐ, ಸಿಪಿಐಎಂ ಜಂಟಿಯಾಗಿ ಗುರುವಾರ ಜಯದೇವ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದವು.

ದೇಶದಲ್ಲಿ ಅಗತ್ಯ ವಸ್ತುಗಳಾದ ಅಡುಗೆ ಅನಿಲ, ಅಡುಗೆ ಎಣ್ಣೆ ಇನ್ನಿತರೇ ವಸ್ತುಗಳ ಬೆಲೆಗಳು ನಿತ್ಯ ಏರುತ್ತಿವೆ. ಇದರಿಂದ ದುಡಿಯುವ ವರ್ಗದ ಜನರು ಕೊಳ್ಳುವ ಶಕ್ತಿ ಕಳೆದುಕೊಂಡು ನಲುಗುತ್ತಿದ್ದಾರೆ ಎಂದು ಸಿಪಿಐ ಮುಖಂಡ ಆವರಗೆರೆ ಎಚ್.ಜಿ. ಉಮೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ಆರ್ಥಿಕ ನೀತಿಯಿಂದಾಗಿ ಕೈಗಾರಿಕೆ ನಡೆಸಲಾಗದೇ ಮುಚ್ಚಲಾಗುತ್ತಿದೆ. ಇದರ ಪರಿಣಾಮ ಕಾರ್ಮಿಕರು ಕೆಲಸವನ್ನು ಕಳೆದುಕೊಳ್ಳುತ್ತಿದ್ದಾರೆ. ಯಾವುದೇ ಪದವಿ ಪಡೆದರೂ ಉದ್ಯೋಗ ಸಿಗದೆ ಯುವ ಜನರು ಪರದಾಡುತ್ತಿದ್ದಾರೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರ ಬೆಲೆ ಏರಿಕೆ ಕಡಿವಾಣ ಹಾಕುತ್ತಿಲ್ಲ ಎಂದು ದೂರಿದರು.

ಪೆಟ್ರೋಲಿಯಂ ಉತ್ಪದನಾ ವಸ್ತುಗಳ ಮೇಲಿನ ಎಲ್ಲ ಸರ್ ಚಾರ್ಜ್ ಹಾಗೂ ಸೆಸ್‍ನ್ನು ಹಿಂಪಡೆಯಬೇಕು. ಈ ಹಿಂದೆ ಜಾರಿಯಲ್ಲಿದ್ದ ಅಡುಗೆ ಅನಿಲದ ಸಬ್ಸಿಡಿಯನ್ನು ದುಡಿಯುವ ಎಲ್ಲ ಕುಟುಂಬಗಳಿಗೆ ಪ್ರತಿ ಸಿಲಿಂಡರ್‍ಗೆ ₹ 200 ಸಬ್ಸಿಡಿ ಪುನಃ ಜಾರಿಗೆ ತರಬೇಕು. ಪೆಟ್ರೋಲ್, ಡೀಸೆಲ್‍ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆ ದರದ ಏರಿಕೆ ನೆವ ಕೈಬಿಟ್ಟು ದೇಶದ ರೈತರಿಗೆ, ನಾಗರಿಕರಿಗೆ ಕೈಗೆಟಕುವ ಬೆಲೆಯಲ್ಲಿ ಸರ್ಕಾರ ಪೂರೈಸಬೇಕು ಎಂದು ಒತ್ತಾಯಿಸಿದರು. ಬಳಿಕ ಕಂದಾಯ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಹೋಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಿಪಿಐನ ಆವರಗೆರೆ ಚಂದ್ರು, ಆವರಗೆರೆ ವಾಸು, ಆನಂದರಾಜ್, ಐರಣಿ ಚಂದ್ರು, ಸರೋಜ, ಷಣ್ಮುಖಪ್ಪ, ವಿ. ಲಕ್ಷ್ಮಣ್, ಶಿವಕುಮಾರ್ ಶೆಟ್ಟರ್, ಸಿಪಿಐಎಂನ ಕೆ.ಎಚ್. ಆನಂದರಾಜು, ಸುರೇಶ್ ಯರಗುಂಟೆ, ಬಸವರಾಜು, ಪರಶುರಾಮ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು