ಭಾನುವಾರ, ಜನವರಿ 24, 2021
17 °C

ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬಾಕಿ ಇರುವ 4 ತಿಂಗಳ ವೇತನ ಶೀಘ್ರ ಬಿಡುಗಡೆ ಮಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ (ಎಐಟಿಯುಸಿ) ನೇತೃತ್ವದಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಇಲ್ಲಿನ ಜಯದೇವ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ 3 ತಿಂಗಳ ವೇತನವನ್ನು ಬಿಡುಗಡೆ ಮಾಡಿರುವುದು ಸ್ವಾಗತಾರ್ಹ. ಅದರಂತೆ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗಿನ ವೇತನವನ್ನೂ ಬಿಡುಗಡೆ ಮಾಡಬೇಕು. ಕನಿಷ್ಠ ಗೌರವಧನಕ್ಕೆ ದುಡಿಯುತ್ತಿರುವ ಕಾರ್ಯಕರ್ತೆಯರು ವೇತನವಿಲ್ಲದೆ ಸಂಕಷ್ಟಪಡುವಂತಾಗಿದೆ. ಶೀಘ್ರ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕಾರ್ಯಕರ್ತೆಯರಿಗೆ ಕನಿಷ್ಠ ಕೂಲಿ ನಿಯಮ ಜಾರಿ ಮಾಡಬೇಕು. ಬಿಸಿಯೂಟ ತಯಾರಕರ ಕಲ್ಯಾಣ ಮಂಡಳಿ ಸ್ಥಾಪಿಸಬೇಕು. ಪಿಎಫ್‌, ಇಎಸ್‌ಐ ಸೌಲಭ್ಯ ಕಲ್ಪಿಸಬೇಕು. ಅಪಘಾತ ಮತ್ತು ಮರಣ ಪರಿಹಾರ ಧನ ₹ 5 ಲಕ್ಷ ನೀಡಲು ಕ್ರಮ ಕೈಗೊಳ್ಳಬೇಕು. 60 ವರ್ಷ ಮೇಲ್ಪಟ್ಟ ಕಾರ್ಯಕರ್ತೆಯರಿಗೆ ಪಿಂಚಣಿ ಸೌಲಭ್ಯ ನೀಡುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಎಐಟಿಯುಸಿ ರಾಜ್ಯ ಗೌರವಾಧ್ಯಕ್ಷ ಎಚ್‌.ಕೆ. ರಾಮಚಂದ್ರಪ್ಪ, ‘ಶ್ರಮಪಟ್ಟು ದುಡಿಮೆ ಮಾಡುವ ನೌಕರರು ತಮ್ಮ ವೇತನಕ್ಕಾಗಿ ಹೋರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಪ್ರಜಾಪ್ರಭುತ್ವದ ವಿಪರ್ಯಾಸ. ಸರ್ಕಾರ ಶೀಘ್ರ ವೇತನ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ರಾಜ್ಯ ಖಜಾಂಚಿ ಬೆಳಲಗೆರೆ ರುದ್ರಮ್ಮ, ಜಿಲ್ಲಾ ಉಪಾಧ್ಯಕ್ಷೆ ಜ್ಯೋತಿಲಕ್ಷ್ಮಿ, ಮಳಲ್ಕೆರೆ ಜಯಮ್ಮ, ಸಿ. ರಮೇಶ, ಲಲಿತಮ್ಮ, ಜಯಮ್ಮ, ಮಂಗಳಗೌರಿ, ರಾಧಮ್ಮ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.