ಎಲ್ಲಾ ಗ್ರಾ.ಪಂ.ಗಳಿಗೂ ಬ್ರಾಡ್‌ಬ್ಯಾಂಡ್‌ ಸಂಪರ್ಕ ಕಲ್ಪಿಸಿ

7
ಬಿಎಸ್‌ಎನ್‌ಎಲ್‌ ಟೆಲಿಕಾಂ ಸಲಹಾ ಸಮಿತಿ ಅಧ್ಯಕ್ಷ ಜಿ.ಎಂ. ಸಿದ್ದೇಶ್ವರ ಸೂಚನೆ

ಎಲ್ಲಾ ಗ್ರಾ.ಪಂ.ಗಳಿಗೂ ಬ್ರಾಡ್‌ಬ್ಯಾಂಡ್‌ ಸಂಪರ್ಕ ಕಲ್ಪಿಸಿ

Published:
Updated:

ದಾವಣಗೆರೆ: ಚಿತ್ರದುರ್ಗ–ದಾವಣಗೆರೆ ಟೆಲಿಕಾಂ ಜಿಲ್ಲೆ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಇಲ್ಲಿನ ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಟೆಲಿಕಾಂ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್‌ ಸಂಪರ್ಕ ಕಲ್ಪಿಸಿ, ಡಿಜಿಟಲ್‌ ಇಂಡಿಯಾ ನಿರ್ಮಾಣ ಮಾಡುವುದು ಪ್ರಧಾನಿಯ ಕನಸು. ಹೀಗಾಗಿ, ಎಲ್ಲಾ ಪಂಚಾಯಿತಿಗಳಿಗೂ ಅಂತರ್ಜಾಲ ಸಂಪರ್ಕ ಕಲ್ಪಿಸಲು ತುರ್ತು ಕ್ರಮ ಕೈಗೊಳ್ಳಿ’ ಎಂದು ಹೇಳಿದರು.

ಚನ್ನಗಿರಿ ತಾಲ್ಲೂಕಿನ ನೆಲ್ಲಿಹಂಕ್ಲು, ನಲ್ಲೂರು ಪಂಚಾಯಿತಿಗಳಿಗೆ ಇದುವರೆಗೂ ಸಂಪರ್ಕ ಕಲ್ಪಿಸಿಯೇ ಇಲ್ಲ. ದುರ್ವಿಗೆರೆ, ತಣಿಗೆರೆ, ಗುಡ್ಡದಮರಬನಹಳ್ಳಿ, ಕೊರಟಗೆರೆ ಪಂಚಾಯಿತಿಗಳಲ್ಲಿ ಸಂಪರ್ಕ ಕಲ್ಪಿಸಿದ್ದರೂ ನೆಟ್‌ವರ್ಕ್‌ ಸಮಸ್ಯೆ ಇದೆ. ಜಗಳೂರು ತಾಲ್ಲೂಕಿನ ಸಾಲುಕಟ್ಟೆ, ದೊಣೆಹಳ್ಳಿ, ಕಲ್ಲೇದೇವಪುರಗಳಲ್ಲೂ ಸಂಪರ್ಕ ಕಲ್ಪಿಸುವುದು ಬಾಕಿಯಿದೆ. ಹೊನ್ನಾಳಿಯ ಅರಕೆರೆ, ಫಲವನಹಳ್ಳಿ, ಕತ್ತಿಗೆಹಳ್ಳಿ, ಮಾಸಡಿ, ಬನ್ನಿಕೋಡು ಪಂಚಾಯಿತಿಗಳಲ್ಲೂ ಸಮಸ್ಯೆ ಇದೆ. ಇವನ್ನೆಲ್ಲಾ ಶೀಘ್ರ ಪರಿಹರಿಸಬೇಕು ಎಂದು ಸೂಚಿಸಿದರು.

ಚಿತ್ರದುರ್ಗ ಸಂಸದ ಬಿ.ಎನ್‌. ಚಂದ್ರಪ್ಪ, ‘ಚಿತ್ರದುರ್ಗ ಜಿಲ್ಲೆಯ ದೇವರಮನೆಕುಂಟೆ, ಹನುಮನಹಳ್ಳಿ, ನುಂಕಿಮನೆ, ಸಂತೆಗುಡ್ಡ ವ್ಯಾಪ್ತಿಯಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಿಗುವುದೇ ಇಲ್ಲ. ಆಧುನಿಕ ತಂತ್ರಜ್ಞಾನದ ಕಾಲದಲ್ಲೂ ನೆಟ್‌ವರ್ಕ್‌ ಸಮಸ್ಯೆ ಕಾಡಿದರೆ ಹೇಗೆ?’ ಎಂದು ಪ್ರಶ್ನಿಸಿದರು. ‘ಕೆಲಸ ಮಾಡದಿದ್ದರೂ ಸಂಬಳ ಸಿಗುತ್ತದೆ. ಕೆಲಸ ಇನ್ನೇಕೆ ಮಾಡಬೇಕು? ಎಂಬ ಮನೋಭಾವ ಅಧಿಕಾರಿಗಳಲ್ಲಿ ಇರಬಾರದು. ಇನ್ನಾದರೂ ಉತ್ತಮ ಕೆಲಸ ಮಾಡಿ’ ಎಂದು ತರಾಟೆ ತೆಗೆದುಕೊಂಡರು.

ಸಿದ್ದೇಶ್ವರ ಅವರು, ‘ಹೆದ್ದಾರಿಯುದ್ದಕ್ಕೂ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್ ಸಮಸ್ಯೆಯಿದೆ. ಆದರೆ, ಖಾಸಗಿ ಸಂಸ್ಥೆಗಳ ನೆಟ್‌ವರ್ಕ್‌ ಚೆನ್ನಾಗಿಯೇ ಇದೆ. ಈ ವ್ಯತ್ಯಾಸ ಏಕೆ? ಇದನ್ನು ಸರಿಪಡಿಸಲು ಆಗುವುದಿಲ್ಲವೇ? ಖಾಸಗಿ ಸಂಸ್ಥೆಗಳ ಜತೆಗೆ ಅಧಿಕಾರಿಗಳೂ ಶಾಮೀಲಾಗಿದ್ದಾರೆಯೇ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ಸಂಸ್ಥೆಗಳು ದೇಶದ ಎಲ್ಲಾ ಭಾಗಗಳಲ್ಲೂ ಒಂದೇ ರೀತಿಯ ತಂತ್ರಜ್ಞಾನ ಹಾಗೂ ಉಪಕರಣಗಳನ್ನು ಬಳಸಿದ್ದಾರೆ. ಆದರೆ, ಬಿಎಸ್‌ಎನ್‌ಎಲ್‌ನಲ್ಲಿ ‘ಜೆಟ್ಟಿ’ ಮತ್ತು ‘ಹುವಾಯ್‌’ ಕಂಪನಿಗಳ ಸಾಧನಗಳನ್ನು ಬಳಸಲಾಗುತ್ತಿದೆ. ‘ಜೆಟ್ಟಿ’ ಕಂಪನಿ ಆಧುನಿಕ ತಂತ್ರಜ್ಞಾನ ಹೊಂದಿದೆ. ಈ ತಂತ್ರಜ್ಞಾನ ಇರುವೆಡೆ ಸಮಸ್ಯೆ ಇಲ್ಲ ಎಂದು ಬಿಎಸ್‌ಎನ್‌ಎಲ್‌ ಚಿತ್ರದುರ್ಗ–ದಾವಣಗೆರೆ ಜಿಲ್ಲಾ ಪ್ರಧಾನ ವ್ಯವಸ್ಥಾಪಕ ಉಪೇಂದ್ರ ತಿವಾರಿ ಮಾಹಿತಿ ನೀಡಿದರು.

‘ಈ ಜಿಲ್ಲೆಯಲ್ಲೂ ಆಧುನಿಕ ತಂತ್ರಜ್ಞಾನ ಅಳವಡಿಸುವಂತೆ ಪ್ರಸ್ತಾವನೆ ಸಲ್ಲಿಸಿ, ದೂರಸಂಪರ್ಕ ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ನಾವು ಮಂಜೂರಾತಿ ಮಾಡಿಸುತ್ತೇವೆ. ಸಮಸ್ಯೆ ಇದ್ದರೆ ನಮ್ಮ ಗಮನಕ್ಕೆ ತನ್ನಿ. ಸುಮ್ಮನಿದ್ದರೆ ಕೆಲಸ ಆಗುವುದಿಲ್ಲ’ ಎಂದು ಸಿದ್ದೇಶ್ವರ, ಚಂದ್ರಪ್ಪ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.

ಸಲಹಾ ಸಮಿತಿ ಸದಸ್ಯರಾದ ಜೆ. ಬಸವರಾಜಪ್ಪ, ಅಬ್ದುಲ್‌ ರೆಹಮಾನ್, ಕೋಟೆಪ್ಪ, ಶಿವಣ್ಣ, ಎಚ್‌.ಆರ್‌. ಮಹಮದ್, ಮೈಲಪ್ಪ, ಪ್ರಸನ್ನಕುಮಾರ್‌, ಉಪ ಪ್ರಧಾನ ವ್ಯವಸ್ಥಾಪಕ ನರಸಿಂಹಪ್ಪ, ಬಿಎಸ್‌ಎನ್‌ಎಲ್‌ ಅಧಿಕಾರಿಗಳು ಹಾಜರಿದ್ದರು.

ಮನೆಯವರೇ ಹೊರಕ್ಕೆ!

ಬಿಎಸ್‌ಎನ್‌ಎಲ್‌ನ ಶೇ 75ರಷ್ಟು ಟವರ್‌ಗಳಲ್ಲಿ ‘ಜಿಯೊ’ ನೆಟವರ್ಕ್‌ ಉಪಕರಣಗಳನ್ನು ಅಳವಡಿಸಲು ಬಾಡಿಗೆ ನೀಡಲಾಗಿದೆ. ಬಿಎಸ್‌ಎನ್‌ಎಲ್‌ನ 2ಜಿ ನೆಟ್‌ವರ್ಕ್‌ ಸಹ ಸರಿಯಾಗಿ ಸಿಗುವುದಿಲ್ಲ. ಆದರೆ, ಜಿಯೊ 4ಜಿ ನೆಟ್‌ವರ್ಕ್‌ ಬಿಎಸ್‌ಎನ್‌ಎಲ್‌ಗೆ ಸ್ಪರ್ಧೆ ಒಡ್ಡುತ್ತಿದೆ. ಬಾಡಿಗೆಗೆ ಕೊಟ್ಟು ಮನೆಯವರೇ ಹೊರಕ್ಕೆ ಬರುವ ಸ್ಥಿತಿ ಸೃಷ್ಟಿ ಮಾಡಲಾಗಿದೆ ಎಂದು ಸಲಹಾ ಸಮಿತಿ ಸದಸ್ಯ ಮಹಮದ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಇದು ಕೇಂದ್ರ ಸರ್ಕಾರದ ನೀತಿ. ಅದರ ಮಾರ್ಗದರ್ಶನಗಳನ್ನು ನಾವು ಪಾಲಿಸುತ್ತಿದ್ದೇವೆ ಅಷ್ಟೆ’ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.

‘ಸ್ಮಾರ್ಟ್‌ಸಿಟಿ ವೈಫೈ ಮತ್ತೆ ಆರಂಭಿಸಿ’: ಸ್ಮಾರ್ಟ್‌ಸಿಟಿ ಅಧಿಕಾರಿಗಳ ಸೂಚನೆ ಮೇರೆಗೆ ದಾವಣಗೆರೆ ನಗರದ 5 ಸ್ಥಳಗಳಲ್ಲಿ ಆರಂಭಿಸಿದ್ದ ಉಚಿತ ವೈಫೈ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಬಿಎಸ್‌ಎನ್‌ಎಲ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದೇಶ್ವರ, ‘ಈ ಸೇವೆ, ಸ್ಮಾರ್ಟ್‌ಸಿಟಿ ಯೋಜನೆಯ ಪ್ರಮುಖ ಆಶಯ. ವೈಫೈ ಸೇವೆ ನೀಡಲು ನಗರದ 60 ಸ್ಥಳಗಳನ್ನು ಗುರುತಿಸಲಾಗಿತ್ತು. ಆರಂಭದಲ್ಲಿ 5 ಸ್ಥಳಗಳಲ್ಲಿ ಸೇವೆ ಆರಂಭಿಸಲಾಗಿತ್ತು. ಇದನ್ನು ಸ್ಥಗಿತಗೊಳಿಸಿರುವುದು ಸರಿಯಲ್ಲ. ಕೂಡಲೇ ವೈಫೈ ಸೌಲಭ್ಯ ಆರಂಭಿಸಿ’ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.

***

ಕರ್ನಾಟಕದಲ್ಲಿ ಬಿಎಸ್‌ಎನ್‌ಎಲ್‌ ₹ 100 ಕೋಟಿ ಆದಾಯ ಪಡೆಯುತ್ತಿದೆ. ಆದರೂ ಇಲ್ಲಿನ ಬೇಡಿಕೆ ದೆಹಲಿ ತಲುಪುವುದೇ ಇಲ್ಲ. ಸ್ಥಳೀಯ ಜನಪ್ರತಿನಿಧಿಗಳ ನೆರವು ಸಿಕ್ಕರೆ ಉತ್ತಮ ಸೇವೆ ನೀಡಬಹುದು.
–ಉಪೇಂದ್ರ ತಿವಾರಿ, ಬಿಎಸ್‌ಎನ್‌ಎಲ್‌ ಪ್ರಧಾನ ವ್ಯವಸ್ಥಾಪಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !