ಕೈಕೊಟ್ಟ ‘ಪುಷ್ಯ’ಮಳೆ: ಬಾಡಿದ ಬೆಳೆಗಳು

7
*ಆತಂಕದಲ್ಲಿ ರೈತರು *ಆಶ್ಲೇಷ ಮಳೆಯೂ ಬಾರದಿದ್ದರೆ ಮೆಕ್ಕೆಜೋಳಕ್ಕೆ ಆಪತ್ತು

ಕೈಕೊಟ್ಟ ‘ಪುಷ್ಯ’ಮಳೆ: ಬಾಡಿದ ಬೆಳೆಗಳು

Published:
Updated:
Deccan Herald

ಮಾಯಕೊಂಡ: ಕಳೆದ ವಾರ ಬಿದ್ದಿದ್ದ ಅಲ್ಪ–ಸ್ವಲ್ಪ ಬಿದ್ದ ಮಳೆಯಿಂದಾಗಿ ರೈತರಲ್ಲಿ ಮೆಕ್ಕೆಜೋಳ ಬೆಳೆಯುವ ಆಸೆ ಹುಟ್ಟಿತ್ತು.  ಆದರೆ ಈ ವಾರ ಕಣ್ಮರೆಯಾಗಿ ರೈತರಲ್ಲಿ ನಿರಾಶೆ ಮೂಡಿಸಿದೆ. ಎದೆಯೆತ್ತರಕ್ಕೆ ಬೆಳದು ನಿಂತ ಮೆಕ್ಕೆಜೋಳ ತೇವಾಂಶದ ಕೊರತೆಯಿಂದ ಬಾಡುತ್ತಿದೆ.

ಕಳೆದ ತಿಂಗಳು ಬಿದ್ದ ಅಷ್ಟಿಷ್ಟು ಮಳೆಗೆ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ಕೆಲ ದಿನ ಮಳೆ ಕಡಿಮೆಯಾಗಿತ್ತಾದರೂ ಪುನರ್ವಸು ಮಳೆ ರೈತರಲ್ಲಿ ಆಸೆ ಮೂಡಿಸಿತ್ತು. ಹೋಬಳಿಯ ಕೆಲವೆಡೆ ಹದ ಮಳೆಯಾಗಿತ್ತು. ಮಳೆ ಬೀಳುವ ನಿರೀಕ್ಷೆಯಿಂದ ರೈತರು ಕಳೆ ಕೀಳಿಸಿ, ಎಡೆಕುಂಟೆ ಹೊಡೆದು, ಯೂರಿಯಾ ಮೇಲು ಗೊಬ್ಬರ ಹಾಕಿದ್ದರು.

ಪ್ರತಿನಿತ್ಯ ಬೆಳಿಗ್ಗೆ 3ರಿಂದ 4 ನಿಮಿಷ ಮಳೆ ಬಂದು, ಜೋಳದ ಗರಿಗಳಲ್ಲಿ ಬಿದ್ದ ಮಳೆ ನೀರು ಬೇರಿಗೆ ಸಿಗುತ್ತಿದ್ದರಿಂದ ಮೆಕ್ಕೆಜೋಳ ಹಸಿರಾಗಿತ್ತು. ಬೀಳುತ್ತಿದ್ದ ಅಲ್ಪ ಮಳೆಯೂ ಈ ವಾರದಲ್ಲಿ ಇಲ್ಲವಾಗಿದೆ. ಶೀತಗಾಳಿಯೂ ಇಲ್ಲದೇ ಬಿರು ಬಿಸಿಲು ಬಂದಿದೆ. ಸಾಕಷ್ಟು ಹಸಿ ಇಲ್ಲದ ಕಾರಣ ಬೆಳೆ ಬಾಡುತ್ತಿದೆ.

‘ಮೆಕ್ಕೆಜೋಳ ತೆನೆ ಹೊರಬರುವ ಹಂತದಲ್ಲಿದ್ದು, ಈ ವೇಳೆ ಸಾಕಷ್ಟು ಹಸಿಯಿದ್ದರೆ ತೆನೆ ಹೊರಬಂದು ಕಾಳುಕಟ್ಟಲು ಅನುಕೂಲವಾಗುತ್ತದೆ. ಇಲ್ಲದಿದ್ದಲ್ಲಿ ತೆನೆ ಹೊರಬರಲು ತೊಡಕಾಗುತ್ತದೆ. ಹೂ ಒಣಗುವುದರಿಂದ ಪರಾಗಸ್ಪರ್ಶವಾಗದೇ ಕಾಳು ಕಟ್ಟುವಿಕೆ ಕಡಿಮೆಯಾಗಿ ಇಳುವರಿ ಕಡಿಮೆಯಾಗುತ್ತದೆ’ ಎಂಬುದು ರೈತರ ಆತಂಕ.

ಹೋಬಳಿಯ ಕೆಲವೆಡೆ ಹತ್ತಿ ಬಿತ್ತನೆ ಮಾಡಲಾಗಿದೆ. ಈಗ ತಾನೆ ಹೂವಾಗಿ ಕಾಯಿ ಕಟ್ಟಲಾರಂಭಿಸಿದ. ಗಿಡಗಳಿಂದ ಹೂ ಉದುರುತ್ತಿವೆ. ಮೊದಲ ಸಾರಿ ಕಾಯಿ ಕಟ್ಟುವ ಬದಲು ಹೂ ಉದುರಿದರೆ ಹತ್ತಿ ಇಳುವರಿ ತೀರಾ ಕಡಿಮೆಯಾಗುತ್ತದೆ. ಹತ್ತಿ, ಮೆಕ್ಕೆಜೋಳ ಬಾಡಲಾರಂಬಿಸಿಂದಂತೆ ರೈತರ ಮುಖಗಳೂ ಬಾಡುತ್ತಿವೆ.

ದುಬಾರಿ ಬೀಜ ಗೊಬ್ಬರ ಹಾಕಿ ಬರಿಗೈಯಾಗಿದ್ದೇವೆ. ಒಳ್ಳೆ ಸಮಯದಲ್ಲಿಯೇ ಮಳೆ ಕೈಕೊಟ್ಟಿದೆ, ಮಳೆ ಬಾರದಿದ್ದರೆ ಇಳುವರಿ ಅರ್ಧದಷ್ಟು ಕಡಿಮೆಯಾಗುತ್ತದೆ. ದೇವರೇ ಕೈಬಿಟ್ಟಂತಾಗಿದೆ ಎಂದು ರೈತರು ನೊಂದುಕೊಳ್ಳುತ್ತಿದ್ದಾರೆ.

 ಮಳೆಗಾಗಿ ದೇವರ ಮೊರೆ

ಮಳೆಗಾಗಿ ರೈತರು ದೇವರ ಮೊರೆಹೋಗಿದ್ದಾರೆ. ಮಾಯಕೊಂಡದ ತಿಮ್ಮಪ್ಪನ ಗುಡ್ಡಕ್ಕೆ ಗ್ರಾಮದ ಹನುಮಪ್ಪ, ದುರುಗಮ್ಮ, ಬೀರಪ್ಪ, ಕಾಳಮ್ಮ ಮತ್ತು ಗುಳ್ಳೆಮ್ಮ ದೇವರುಗಳನ್ನು ಸೋಮವಾರ ಹೊತ್ತೊಯ್ದ ರೈತರು ವೀಶೇಷ ಪೂಜೆ ಸಲ್ಲಿಸಿದರು. ಬುಧವಾರ ಅಲ್ಲಲ್ಲಿ ಚದುರಿದಂತೆ ತುಂತುರು ಮಳೆಯಾಗಿದ್ದರೂ ಮೆಕ್ಕೆಜೋಳಕ್ಕೆ ಜೀವ ವೂಲಿಯುವುದು ಕಷ್ಟ ಎನ್ನುತ್ತಾರೆ ರೈತರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !