ಭಾನುವಾರ, ಜೂನ್ 26, 2022
27 °C
ಪ್ರವಾಹ ಪೀಡಿತ ಬಡಾವಣೆಗಳಿಗೆ ಶಾಸಕ ರಾಮಪ್ಪ ಭೇಟಿ

ಡಿ.ಬಿ. ಕೆರೆ ಕಾಲುವೆಗೆ ತಡೆಗೋಡೆ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ಮಳೆಗಾಲದಲ್ಲಿ ಪ್ರವಾಹದ ನೀರಿನಿಂದ ಜಲಾವೃತವಾಗುವ ಬೆಂಕಿನಗರ, ಕಾಳಿದಾಸ ನಗರ, ಗಂಗಾನಗರ, ಅಂಜುಮನ್ ಶಾದಿ ಮಹಲ್ ಮತ್ತು ಎಪಿಎಂಸಿ ಕಾಳಜಿ ಕೇಂದ್ರಕ್ಕೆ ಶಾಸಕ ಎಸ್. ರಾಮಪ್ಪ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಂಕಿನಗರ ಹಾಗೂ ಕಾಳಿದಾಸ ನಗರದ ಜನತೆ, ‘ಏಳೆಂಟು ವರ್ಷಗಳಿಂದ ಮಳೆಗಾಲದಲ್ಲಿ ಡಿ.ಬಿ. ಕೆರೆ ಕಾಲುವೆ ನೀರು ನಮ್ಮ ಭಾಗಕ್ಕೆ ನುಗ್ಗುತ್ತದೆ. ನೂರಾರು ಮನೆಗಳು ಜಲಾವೃತವಾಗುತ್ತವೆ. ಹಿಂದಿನ ಹಲವು ಶಾಸಕರು, ಜಿಲ್ಲಾಧಿಕಾರಿ, ನಗರಸಭೆ ಅಧಿಕಾರಿಗಳು ಸಮಸ್ಯೆ ಪರಿಹಾರದ ಭರವಸೆ ನೀಡಿ ನಂತರ ಮರೆಯುತ್ತಾರೆ’ ಎಂದು ದೂರಿದರು.

ಆಗ ರಾಮಪ್ಪ, ‘ಕಾಲುವೆ ನೀರು ಬಡಾವಣೆಗಳಿಗೆ ನುಗ್ಗದಂತೆ ತಡೆಗೋಡೆ ನಿರ್ಮಿಸಲು ಜಿಲ್ಲಾಧಿಕಾರಿ ಅವರಿಗೆ ಸೂಚಿಸುತ್ತೇನೆ. ಅವರು ಅನುದಾನ ನೀಡದಿದ್ದರೆ ನಗರಸಭೆ ಅನುದಾನದಲ್ಲೇ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಸೂಳೆಕೆರೆಯ ಹಿನ್ನೀರು ನುಗ್ಗಿ ಅವಾಂತರ ಸೃಷ್ಟಿಸುವ ಎಪಿಎಂಸಿ ಹಿಂಭಾಗದ ಗಂಗಾನಗರಕ್ಕೆ ಭೇಟಿ ನೀಡಿದ ಶಾಸಕರಿಗೆ ಅಲ್ಲಿಯ ನಿವಾಸಿಗಳು, ‘ಒಂದು ದಶಕದಿಂದ ನಮಗೆ ಬೇರೆಡೆ ಮನೆ ನಿರ್ಮಿಸುವ ಭರವಸೆ ನೀಡಲಾಗುತ್ತಿದೆ. ಆದರೆ ಪ್ರತಿ ಮಳೆಗಾಲದಲ್ಲಿ ಕಾಳಜಿಕೇಂದ್ರದ ವಾಸದ ಶಿಕ್ಷೆ ಅನುಭವಿಸಬೇಕು. ಬಡವರ ನೋವು ಯಾರೂ ಕೇಳುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಗ ರಾಮಪ್ಪ, ನಗರಸಭೆ ಪೌರಾಯುಕ್ತ ಬಸವರಾಜ್ ಐ. ಅವರಿಗೆ, ‘ಗಂಗಾನಗರ, ಬೆಂಕಿನಗರ ಮತ್ತು ಕಾಳಿದಾಸ ನಗರಕ್ಕೆ ನೀರು ನುಗ್ಗದಂತೆ ತಡೆಗೋಡೆ ನಿರ್ಮಾಣ ಹಾಗೂ ಗಂಗಾನಗರದ ಜನತೆಗೆ ಮನೆಗಳನ್ನು ನಿರ್ಮಿಸಿಕೊಡಬೇಕು’ ಎಂದು ಸೂಚಿಸಿದರು.

ನಗರಸಭೆ ಅಧ್ಯಕ್ಷರಾದ ಶಾಹೀನಾ ಬಾನು, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಸಂತೋಷ, ಮುಖಂಡ ದಾದಾಪೀರ್ ಬಾನುವಳ್ಳಿ, ಜಫ್ರುಲ್ಲಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.