ಚನ್ನಗಿರಿ ತಾಲ್ಲೂಕು: ಕೈ ಕೊಟ್ಟ ಮಳೆ, ಮತ್ತೆ ಆತಂಕದಲ್ಲಿ ರೈತರು

7
ಸಮೃದ್ಧವಾಗಿ ಬೆಳೆದು ನಿಂತ ಬೆಳೆಗಳಿಗೆ ಮಳೆ ಅಗತ್ಯ

ಚನ್ನಗಿರಿ ತಾಲ್ಲೂಕು: ಕೈ ಕೊಟ್ಟ ಮಳೆ, ಮತ್ತೆ ಆತಂಕದಲ್ಲಿ ರೈತರು

Published:
Updated:
Deccan Herald

ಚನ್ನಗಿರಿ: ತಾಲ್ಲೂಕಿನಾದ್ಯಂತ ಈ ಬಾರಿ ಮುಂಗಾರು ಮಳೆ ಕೆರೆಕಟ್ಟೆಗಳು ತುಂಬುವಷ್ಟು ಪ್ರಮಾಣದಲ್ಲಿ ಬಾರದೇ ಇದ್ದರೂ, ಬೆಳೆಗಳ ಬೆಳವಣಿಗೆಗೆ ಅಗತ್ಯವಾದ ಪ್ರಮಾಣದಲ್ಲಿ ಮಳೆಯಾಗಿ ಎಲ್ಲಾ ಬೆಳೆಗಳು ಸಮೃದ್ಧವಾಗಿ ಬೆಳೆದು ನಿಂತು ಹಸಿರನ್ನು ಸೂಸುವಂತಿದ್ದವು. ಆದರೆ ಒಂದು ವಾರದಿಂದ  ಮಳೆಯಾಗದೇ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ರೈತರ ಅಳಲು.

ಈ ಬಾರಿ ಮುಂಗಾರು ಹಂಗಾಮಿನಲ್ಲಿ ಭತ್ತ, ಮೆಕ್ಕೆಜೋಳ, ರಾಗಿ ಸೇರಿ 550 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, ತೊಗರಿ 500 ಹೆಕ್ಟೇರ್, ಹುರುಳಿ 15 ಹೆಕ್ಟೇರ್, ಅವರೆ 50 ಹೆಕ್ಟೇರ್, ಅಲಸಂದೆ 50 ಹೆಕ್ಟೇರ್, ಶೇಂಗಾ 20 ಹೆಕ್ಟೇರ್, ಈರುಳ್ಳಿ 150 ಹೆಕ್ಟೇರ್, ಹಸಿಮೆಣಸಿನಕಾಯಿ 250 ಹೆಕ್ಟೇರ್, ಸೂರ್ಯಕಾಂತಿ 40 ಹೆಕ್ಟೇರ್, ಹರಳು 25 ಹೆಕ್ಟೇರ್, ಹೆಸರು 10 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಮುಂಗಾರು ಮಳೆ ತಡವಾಗಿಯಾದರೂ ಉತ್ತಮವಾಗಿ ಬಂದ ಪರಿಣಾಮವಾಗಿ ಎಲ್ಲಾ ಬೆಳೆಗಳು ಸಮೃದ್ಧವಾಗಿ ಬೆಳೆದು ನಿಂತು ಕಣ್ಮನ ಸೆಳೆಯುವಂತಿದ್ದವು.

ಈಗಾಗಲೇ ಶೇ 60ರಷ್ಟು ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆ ಕಾಳುಕಟ್ಟುವ ಹಂತವನ್ನು ತಲುಪಿವೆ. ಇನ್ನು ರಾಗಿ, ಹೈಬ್ರಿಡ್ ಜೋಳ ಬೆಳೆಗಳು ತೆನೆ ಬಿಡುವ ಹಂತದಲ್ಲಿದ್ದು, ಹತ್ತಿ ಗಿಡಗಳಲ್ಲಿ ಕಾಯಿ ಕಟ್ಟಿ ಹತ್ತಿ ಅರಳುವ ಸ್ಥಿತಿಯಲ್ಲಿವೆ. ಇಂಥ ಸ್ಥಿತಿಯಲ್ಲಿ ಈಗ ಬೆಳೆಗಳಿಗೆ ಮಳೆಯ ಅಗತ್ಯ ಇದೆ. ಆದರೆ ವಾರದಿಂದ ತಾಲ್ಲೂಕಿನ ಯಾವ ಭಾಗದಲ್ಲೂ ಮಳೆಯಾಗದೇ ಇರುವ ಕಾರಣದಿಂದ ಮತ್ತೆ ರೈತರು ಮಳೆಗಾಗಿ ಮುಗಿಲು ನೋಡುವಂತಾಗಿದೆ.

ಮುಂಗಾರು ಮಳೆ ಮುಕ್ತಾಯಗೊಂಡಿದ್ದು, ಹಿಂಗಾರು ಮಳೆ ಪ್ರಾರಂಭವಾಗಬೇಕಾಗಿದೆ. ಐದಾರು ದಿನಗಳಲ್ಲಿ ಮಳೆ ಬಿದ್ದರೆ ಎಲ್ಲಾ ಬೆಳೆಗಳು ಉತ್ತಮ ಇಳುವರಿ ನೀಡುವ ನಿರೀಕ್ಷೆ ಇದೆ. ತಡವಾಗಿ ಮಳೆಯಾದರೆ ಇಳುವರಿ ಕುಂಠಿತವಾಗಲಿದೆ. ರೈತರು ಮಳೆಯ ನಿರೀಕ್ಷೆಯಲ್ಲಿ  ಇದ್ದಾರೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ನಾಯ್ಕ ತಿಳಿಸಿದರು.

‘ನಾಲ್ಕು ಎಕರೆ ಜಮೀನಿನಲ್ಲಿ ಈ ಬಾರಿ ರಾಗಿ ಬೆಳೆಯನ್ನು ಬಿತ್ತನೆ ಮಾಡಿದ್ದೇನೆ. ಮುಂಗಾರು ಮಳೆ ಉತ್ತಮವಾಗಿ ಬಿದ್ದ ಪರಿಣಾಮವಾಗಿ ರಾಗಿ ಉತ್ತಮವಾಗಿ ಬೆಳೆದು ನಿಂತು ತೆನೆ ಬಿಡುವ ಹಂತದಲ್ಲಿದೆ. ಕಾಳುಕಟ್ಟುವ ಈ ಹಂತದಲ್ಲಿ ಮಳೆಯ ಅವಶ್ಯಕತೆ ಅತ್ಯಂತ ತುರ್ತಾಗಿ ಬೇಕಾಗಿದೆ. ಆದರೆ ಏಕೋ ಒಂದು ವಾರದಿಂದ ಮಳೆಯಾಗಿಲ್ಲ. ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ಉತ್ತಮ ಇಳುವರಿಗಾಗಿ ದೊಡ್ಡ ಮಳೆಯ ಅಗತ್ಯೆ ಇದೆ’ ಎನ್ನುತ್ತಾರೆ ಗುಳ್ಳೇಹಳ್ಳಿ ಗ್ರಾಮದ ಮಲ್ಲಿಕಾರ್ಜುನ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !