ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಪಾಲಿಕೆ ಚುನಾವಣೆ: ‘ಕೈ’ ‘ಕಮಲ’ ಬಂಡಾಯ ಜೆಡಿಎಸ್‌ಗೆ ಲಾಭ

ರಂಗೇರಿದ ಪಾಲಿಕೆ ಚುನಾವಣೆ: ಅಸಮಾಧಾನ ಶಮನಕ್ಕೆ ನಾಯಕರ ಕಸರತ್ತು
Last Updated 1 ನವೆಂಬರ್ 2019, 11:18 IST
ಅಕ್ಷರ ಗಾತ್ರ

ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಗುರುವಾರ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಟಿಕೆಟ್‌ ವಂಚಿತ ಕೆಲವು ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ. ಇನ್ನೊಂದೆಡೆ 32 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವ ಜೆಡಿಎಸ್‌, ಇದರ ಲಾಭ ಪಡೆಯಲು ಹೊಂಚು ಹಾಕುತ್ತಿದೆ.

ಪಕ್ಷದ ಒಳ ರಾಜಕೀಯದಿಂದಾಗಿ ಟಿಕೆಟ್‌ ತಪ್ಪಿಸಿ ತಮ್ಮ ಸಂಬಂಧಿ ಕೆ.ಎಂ. ವೀರೇಶ್‌ ಅವರಿಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಅಸಮಾಧಾನಗೊಂಡ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್‌, ಸರಸ್ವತಿನಗರದಿಂದ (ವಾರ್ಡ್‌ 33) ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ನಾಯಕರ ವಿರುದ್ಧ ಸಿಡಿದೆದ್ದಿದ್ದಾರೆ. ಇನ್ನೊಂದೆಡೆ ನಿಟುವಳ್ಳಿ, ಚಿಕ್ಕನಹಳ್ಳಿ ಬಡಾವಣೆಯಲ್ಲಿ (ವಾರ್ಡ್‌ 32) ಪಕ್ಷದ ಅಭ್ಯರ್ಥಿ ರೇಖಾ ಶ್ರೀನಿವಾಸ್‌ ಪೂಜಾರಿ ವಿರುದ್ಧ ಮಾಜಿ ಮೇಯರ್‌ ಉಮಾ ಪ್ರಕಾಶ್‌ ಅವರು ಪಕ್ಷೇತರರಾಗಿ ಕಣಕ್ಕೆ ಇಳಿಯುವ ಮೂಲಕ ಸಡ್ಡು ಹೊಡೆದಿದ್ದಾರೆ. ಎಂ.ಸಿ.ಸಿ. ‘ಎ’ ಬ್ಲಾಕ್‌ ಹಾಗೂ ಪಿ.ಜೆ. ಬಡಾವಣೆಯಲ್ಲಿ (ವಾರ್ಡ್‌ 24) ಪ್ರಬಲ ಆಕಾಂಕ್ಷಿ ಅತೀತ್‌ ಅಂಬರಕರ್‌ ಅವರು ಅಧಿಕೃತ ಅಭ್ಯರ್ಥಿ ಪ್ರಸನ್ನಕುಮಾರ್‌ ಕೆ. ವಿರುದ್ಧ ಪಕ್ಷೇತರರಾಗಿ ಕಣಕ್ಕೆ ಧುಮುಕಿದ್ದಾರೆ.

ಮಾಜಿ ಶಾಸಕ ಗುರುಸಿದ್ಧನಗೌಡ ಅವರು ವಿದ್ಯಾನಗರದಲ್ಲಿ (ವಾರ್ಡ್‌ 39) ಸೊಸೆ ಪ್ರೀತಿ ರವಿಕುಮಾರ್‌ ಅವರಿಗೆ ಟಿಕೆಟ್‌ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ಪ್ರೀತಿ ಬಂಡಾಯದ ಬಾವುಟ ಹಿಡಿದಿದ್ದಾರೆ. ಸೊಸೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುರುಸಿದ್ಧನಗೌಡ, ‘ಬಿಜೆಪಿ ಜಿಲ್ಲಾ ಅಧ್ಯಕ್ಷನಾಗಿ ನಾಲ್ಕು ಬಾರಿ ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲೇ ಮೊದಲ ಬಾರಿಗೆ ಪಾಲಿಕೆಯಲ್ಲಿ ಬಿಜೆಪಿ ಆಡಳಿತಕ್ಕೆ ಬಂದಿತ್ತು. ನನ್ನ ಸೊಸೆ ಸ್ಪರ್ಧಿಸಬೇಕು ಎಂದು ಜನ ಬಯಸುತ್ತಿದ್ದರು. ನನ್ನ ಸೇವಾ ಹಿರಿತನವನ್ನೂ ಪರಿಗಣಿಸಿಲ್ಲ. ಹಾಗಾದರೆ ಅರ್ಹತೆಯ ಮಾನದಂಡ ಏನು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಬಲ ಆಕಾಂಕ್ಷಿಯಾಗಿದ್ದ ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌ ಅವರಿಗೂ ಟಿಕೆಟ್‌ ಲಭಿಸಿಲ್ಲ. ‘ಮೀಸಲಾತಿ ಬದಲಾವಣೆಯಿಂದ ನನ್ನ ವಾರ್ಡ್‌ನಲ್ಲಿ ಸ್ಪರ್ಧಿಸಲಾಗುತ್ತಿಲ್ಲ. ಬೇರೆ ವಾರ್ಡ್‌ಗೆ ಹೋಗಿ ಸ್ಪರ್ಧಿಸಿದರೆ ಅಲ್ಲಿಯೇ ನಿಂತು ಪ್ರಚಾರ ಮಾಡಬೇಕಾಗುತ್ತದೆ. ಅದರ ಬದಲು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ದಕ್ಷಿಣದಲ್ಲಿ ಹೆಚ್ಚಿನ ಸದಸ್ಯರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದೇನೆ’ ಎಂದು ಶಿವಕುಮಾರ್‌ ಪ್ರತಿಕ್ರಿಯಿಸಿದರು.

ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಜಯಮ್ಮ ಅವರಿಗೂ ಟಿಕೆಟ್‌ ಲಭಿಸಿಲ್ಲ. ಇನ್ನೂ ಕೆಲ ವಾರ್ಡ್‌ಗಳಲ್ಲಿ ಟಿಕೆಟ್‌ ವಂಚಿತ ಹಲವು ಆಕಾಂಕ್ಷಿಗಳಲ್ಲಿ ಅಸಮಾಧಾನದ ಹೊಗೆ ಎದ್ದಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿಗಳ ‘ಭವಿಷ್ಯ’ವನ್ನು ಇದು ನಿರ್ಧರಿಸಲಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ.

‘ಕೈ’ ಪಾಳಯದಲ್ಲೂ ತಳಮಳ: ಕಾಂಗ್ರೆಸ್‌ ಪಕ್ಷಕ್ಕೂ ಬಂಡಾಯದ ಬಿಸಿ ತಟ್ಟಿದ್ದು, ಅಧಿಕಾರ ಉಳಿಸಿಕೊಳ್ಳಬೇಕು ಎಂಬ ಕನಸು ಕಾಣುತ್ತಿರುವ ಪಕ್ಷದ ನಾಯಕರಲ್ಲಿ ಇದು ತಳಮಳ ಉಂಟುಮಾಡಿದೆ.

ಸುರೇಶ್‌ ನಗರದಲ್ಲಿ (ವಾರ್ಡ್‌ 8) ಮಾಜಿ ಸದಸ್ಯೆ ಗೌರಮ್ಮ ಚಂದ್ರಪ್ಪ ಅವರಿಗೇ ಮತ್ತೆ ಕಾಂಗ್ರೆಸ್‌ ಟಿಕೆಟ್‌ ನೀಡಿರುವುದಕ್ಕೆ ಲಕ್ಷ್ಮೀದೇವಿ ವೀರಣ್ಣ ಪಕ್ಷೇತರಾಗಿ ಕಣಕ್ಕೆ ಇಳಿದಿದ್ದಾರೆ. ಲಕ್ಷ್ಮೀದೇವಿ ಅವರ ತಮ್ಮ ವಿನಾಯಕ ಬಿ.ಎಚ್‌. ಅವರಿಗೆ ಪಕ್ಕದ ಜಾಲಿನಗರದಲ್ಲಿ (7ನೇ ವಾರ್ಡ್‌) ಕಾಂಗ್ರೆಸ್‌ ಟಿಕೆಟ್‌ ಕೊಡಲಾಗಿದೆ. ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದ ಮಾಜಿ ಸದಸ್ಯ ಬಸಪ್ಪ ಅವರು 7ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ಆವರಗೆರೆಯಲ್ಲಿ (ವಾರ್ಡ್‌ 30) ಕೊನೆ ಕ್ಷಣದಲ್ಲಿ ಲಕ್ಷ್ಮಿಬಾಯಿ ಅವರಿಗೆ ಟಿಕೆಟ್‌ ನೀಡಿರುವುದಕ್ಕೆ ಸಿಡಿದೆದ್ದ ಲಕ್ಷ್ಮಿ ಹನುಮಂತಪ್ಪ ಅವರು ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ. ‘ಎಸ್‌.ಸಿ. ಮಹಿಳೆಗೆ ಮೀಸಲಾತಿ ಇರುವುದರಿಂದ ಈ ಬಾರಿ ಹರಳಯ್ಯ ನಗರದವರಿಗೆ ಟಿಕೆಟ್‌ ನೀಡುವಂತೆ ಕೋರಿದ್ದೆವು. ಬುಧವಾರ ರಾತ್ರಿಯವರೆಗೂ ಲಕ್ಷ್ಮಿ ಹನುಮಂತಪ್ಪ ಅವರಿಗೆ ಟಿಕೆಟ್‌ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯಕ ಅವರ ಶಿಫಾರಸಿನ ಮೇರೆಗೆ ವಾರ್ಡ್‌ನಲ್ಲಿ ಅಪರಿಚಿತರಾಗಿರುವ ಮಹಿಳೆಗೆ ಟಿಕೆಟ್‌ ನೀಡಲಾಗಿದೆ. ಹೀಗಾಗಿ ಬಂಡಾಯ ಅಭ್ಯರ್ಥಿಯಾಗಿ ಲಕ್ಷ್ಮಿ ಹುನುಮಂತಪ್ಪ ಅವರನ್ನು ಕಣಕ್ಕೆ ಇಳಿಸಿದ್ದೇವೆ’ ಎಂದು ಸ್ಥಳೀಯರಾದ ಸದಾನಂದ ಚಿಕ್ಕನಹಳ್ಳಿ ತಿಳಿಸಿದರು.

ಎಸ್‌.ಜೆ.ಎಂ. ನಗರದಲ್ಲಿ (ವಾರ್ಡ್‌ 45) ಅಧಿಕೃತ ಅಭ್ಯರ್ಥಿ ಸಾಗರ ಎಲ್‌.ಎಚ್‌. ವಿರುದ್ಧ ಪಕ್ಷೇತರರಾಗಿ ಆನಂದಪ್ಪ ಕಣಕ್ಕೆ ಇಳಿದಿದ್ದಾರೆ. ಬಂಡಾಯ ಅಭ್ಯರ್ಥಿಗಳ ನಡೆ ಕಾಂಗ್ರೆಸ್‌ ನಾಯಕರಿಗೂ ತಲೆ ನೋವು ತರಿಸಿದೆ.

ನಾಮಪತ್ರ ವಾಪಸ್‌ ತೆಗೆದುಕೊಳ್ಳಲು ನವೆಂಬರ್‌ 4 ಕೊನೆಯ ದಿನವಾಗಿದೆ. ನಾಮಪತ್ರ ಹಿಂದಕ್ಕೆ ಪಡೆಯುವಂತೆ ಬಂಡಾಯ ಅಭ್ಯರ್ಥಿಗಳ ಮನವೊಲಿಸುವ ಪ್ರಯತ್ನವನ್ನು ನಾಯಕರು ಆರಂಭಿಸಿದ್ದಾರೆ.

ಶಾಸಕ ರವೀಂದ್ರನಾಥ ಪುತ್ರಿ ವೀಣಾ ಸ್ಪರ್ಧೆ

ಶಾಸಕ ಎಸ್‌.ಎ. ರವೀಂದ್ರನಾಥ ಅವರ ಪುತ್ರಿ ವೀಣಾ ನಂಜಪ್ಪ ಅವರು ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಆಂಜನೇಯ ಬಡಾವಣೆಯಿಂದ (ವಾರ್ಡ್‌ 40) ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವಾರ್ಡ್‌ನಿಂದ ಮಾಜಿ ಉಪ ಮೇಯರ್‌ ಜ್ಯೋತಿ ಪಾಟೀಲ್‌ ಸೇರಿ ಕೆಲ ಆಕಾಂಕ್ಷಿಗಳು ಬಿಜೆಪಿ ಟಿಕೆಟ್‌ ಬಯಸಿದ್ದರು. ಆದರೆ, ಶಾಸಕರು ತಮ್ಮ ಪ್ರಭಾವ ಬಳಸಿ ಪುತ್ರಿಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ವಾರ್ಡ್‌ನಲ್ಲಿ ಪ್ರಬಲ ಸ್ಪರ್ಧೆ ಒಡ್ಡುವ ಅಭ್ಯರ್ಥಿಗಳು ಇರಲಿಲ್ಲ. ಶಾಸಕಿಯ ಪುತ್ರಿ ಎಂಬ ಕಾರಣಕ್ಕೆ ಜನರ ಗಮನ ಸೆಳೆದು ಗೆಲುವು ಸಾಧಿಸಬಹುದು ಎಂಬ ಕಾರಣಕ್ಕೆ ವೀಣಾ ಅವರಿಗೆ ಟಿಕೆಟ್‌ ಕೊಡಲಾಗಿದೆ’ ಎಂದು ಬಿಜೆಪಿ ಮುಖಂಡರೊಬ್ಬರು ಪ್ರತಿಪಾದಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಅವರ ಪುತ್ರ ರಾಕೇಶ್‌ ಅವರು ಗಣೇಶಪೇಟೆಯಲ್ಲಿ (ವಾರ್ಡ್‌ 10) ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಹೋಟೆಲ್‌ ಉದ್ಯಮಿ ಬಿ.ಜೆ. ಅಜಯ್‌ಕುಮಾರ್‌ ಅವರು ಮೆರವಣಿಗೆಯಲ್ಲಿ ತೆರಳಿ ಪಿ.ಜೆ. ಬಡಾವಣೆ (ವಾರ್ಡ್‌ 17) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಆದರೆ, ಇದೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಶ್ರೆಣಿಕ್‌ ಜೈನ್‌ ಕಣಕ್ಕೆ ಇಳಿದಿದ್ದಾರೆ.

ಕಾಂಗ್ರೆಸ್‌ನಿಂದ ಗಂಡ–ಹೆಂಡತಿ ಕಣಕ್ಕೆ

ಪಾಲಿಕೆಯ ಮಾಜಿ ಸದಸ್ಯ ಜೆ.ಎನ್‌. ಶ್ರೀನಿವಾಸ್‌ ಅವರು ಭಗತ್‌ಸಿಂಗ್‌ ನಗರ (ವಾರ್ಡ್‌ 28) ಹಾಗೂ ಅವರ ಪತ್ನಿ ಕೆ.ಇ.ಬಿ. ಕಾಲೊನಿ (ವಾರ್ಡ್‌ 37) ಶ್ವೇತಾ ಎಸ್‌. ಅವರು ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದಾರೆ.

ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಶ್ರೀನಿವಾಸ್‌ ಅವರು ಕಾಂಗ್ರೆಸ್‌ ನಾಯಕರ ಮೇಲೆ ಒತ್ತಡ ಹಾಕಿ ತಮಗೆ ಹಾಗೂ ಪತ್ನಿಗೆ ಟಿಕೆಟ್‌ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್‌ನಲ್ಲಿ 9 ಮಾಜಿ ಸದಸ್ಯರಿಗೆ ಅವಕಾಶ

ಕಳೆದ ಅವಧಿಯಲ್ಲಿ 36 ಸದಸ್ಯರು ಆಯ್ಕೆಯಾಗುವ ಮೂಲಕ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್‌, ಈ ಚುನಾವಣೆಯಲ್ಲಿ ಒಂಬತ್ತು ಮಾಜಿ ಸದಸ್ಯರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ.

ದಿನೇಶ್‌ ಕೆ. ಶೆಟ್ಟಿ (ವಾರ್ಡ್‌ 17), ಕೆ. ಚಮನ್‌ ಸಾಬ್‌ (ವಾರ್ಡ್‌ 14), ಚಂದ್ರಶೇಖರ್‌ ಪಿ.ಎನ್‌. (ವಾರ್ಡ್‌ 18), ಎ.ಬಿ. ರಹೀಂಸಾಬ್‌ (ವಾರ್ಡ್‌ 3), ಗೌರಮ್ಮ ಚಂದ್ರಪ್ಪ (ವಾರ್ಡ್‌ 8), ಅಬ್ದುಲ್‌ ಲತೀಫ್‌ (ವಾರ್ಡ್‌ 26), ಜೆ.ಎನ್‌. ಶ್ರೀನಿವಾಸ್‌ (ವಾರ್ಡ್‌ 28), ಅನ್ನಪೂರ್ಣ ಬಸವರಾಜ್‌ (ವಾರ್ಡ್‌ 32), ನಾಗರತ್ನಮ್ಮ ವಿಜಯಕುಮಾರ್‌ (ವಾರ್ಡ್‌ 40) ಅವರಿಗೆ ಪಕ್ಷದ ಟಿಕೆಟ್‌ ನೀಡಲಾಗಿದೆ.

ಮಾಜಿ ಮೇಯರ್‌ಗಳಾಗಿದ್ದ ರೇಖಾ ನಾಗರಾಜ್‌ ಅವರ ಪತಿ ಎ. ನಾಗರಾಜ್‌ (ವಾರ್ಡ್‌ 16) ಹಾಗೂ ಅನಿತಾಬಾಯಿ ಅವರ ಪತಿ ಡಿ. ಮಾಲತೇಶ್‌ (ವಾರ್ಡ್‌ 10) ಅವರಿಗೆ ಈ ಬಾರಿ ಅವಕಾಶ ಕಲ್ಪಿಸಲಾಗಿದೆ. ಮಾಜಿ ಸದಸ್ಯ ಲಿಂಗರಾಜ್‌ ಅವರ ಪತ್ನಿ ವಿಜಯಾ ಅವರಿಗೆ 42ನೇ ವಾರ್ಡ್‌ನಲ್ಲಿ ಟಿಕೆಟ್‌ ಕೊಡಲಾಗಿದೆ.

32 ವಾರ್ಡ್‌ಗಳಲ್ಲಿ ಜೆಡಿಎಸ್‌ ಸ್ಪರ್ಧೆ

ಒಟ್ಟು 45 ವಾರ್ಡ್‌ಗಳ ಪೈಕಿ ಈ ಬಾರಿ 32 ವಾರ್ಡ್‌ಗಳಲ್ಲಿ ಜೆಡಿಎಸ್‌ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ದಕ್ಷಿಣ ವಿಧಾನಸಭಾ ಕ್ಷೇತ್ರದ ಬಹುತೇಕ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವ ಜೆಡಿಎಸ್‌, ಈ ಬಾರಿ ಮತ್ತೆ ಖಾತೆ ತೆರೆಯುವ ಉತ್ಸಾಹದಲ್ಲಿದೆ.

*

ಪಕ್ಷದ ಅಭ್ಯರ್ಥಿಗಳ ವಿರುದ್ಧ ಬಂಡಾಯ ಎದ್ದಿರುವ ಅತೃಪ್ತರ ಜೊತೆ ಸಂಸದ ಸಿದ್ದೇಶ್ವರ ಅವರು ಶನಿವಾರ ಮಾತುಕತೆ ನಡೆಸಿ ಮನವೊಲಿಸಲಿದ್ದಾರೆ. ಟಿಕೆಟ್‌ ವಂಚಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು.

– ಯಶವಂತರಾವ್‌ ಜಾಧವ್‌, ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ

*

ಟಿಕೆಟ್‌ ಸಿಕ್ಕಿಲ್ಲ ಎಂಬ ಕಾರಣಕ್ಕೆ ಪಕ್ಷೇತರಾಗಿ ಸ್ಪರ್ಧಿಸಿದವರೊಂದಿಗೆ ಮಾತುಕತೆ ನಡೆಸಲಾಗುವುದು. ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುವಂತೆ ಮನವೊಲಿಸಲಾಗುವುದು.

- ಎಚ್‌.ಬಿ. ಮಂಜಪ್ಪ, ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್‌ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT