ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಟೂರಪ್ಪ, ಪುಟ್ಟರಾಜು ಕೊಡುಗೆ ಸ್ಮರಣೀಯ: ಪ್ರೊ. ವೃಷಭೇಂದ್ರಪ್ಪ

ಮಕ್ಕಳಲ್ಲಿ ವಿಜ್ಞಾನದ ಆಸಕ್ತಿ ಮೂಡಿಸಿದ ಚೇತನಗಳು: ಪ್ರೊ. ವೃಷಭೇಂದ್ರಪ್ಪ
Last Updated 15 ಅಕ್ಟೋಬರ್ 2020, 16:43 IST
ಅಕ್ಷರ ಗಾತ್ರ

ದಾವಣಗೆರೆ: ‘ದಾವಣಗೆರೆಯಲ್ಲಿ ವಿಜ್ಞಾನದ ಶಿಬಿರದ ಮೂಲಕ ಹಳ್ಳಿ, ಕಾಡು, ಪರಿಸರದ ವಿಚಾರಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಿದ ಎಂ.ಎನ್. ಮುಷ್ಟೂರಪ್ಪ ಮತ್ತು ಡಿ.ಜಿ. ಪುಟ್ಟರಾಜು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಮಾಡಿದ ಕೆಲಸ, ಕೊಡುಗೆ ಸ್ಮರಣೀಯ’ ಎಂದು ಬಿಐಇಟಿ ನಿರ್ದೇಶಕ ಪ್ರೊ. ವೃಷಭೇಂದ್ರಪ್ಪ ಹೇಳಿದರು.

ನಗರದ ಸಿದ್ಧಗಂಗಾ ಶಾಲೆಯಲ್ಲಿ ಗುರುವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಎಂ.ಎನ್. ಮುಷ್ಟೂರಪ್ಪ ಮತ್ತು ಡಿ.ಜಿ. ಪುಟ್ಟರಾಜು ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದಾವಣಗೆರೆಯಲ್ಲಿ ಬೇಸಿಗೆ ಶಿಬಿರವನ್ನು ಪ್ರಥಮ ಬಾರಿಗೆ ಮಾಡಿದ ಕೀರ್ತಿ ಪುಟ್ಟರಾಜು ಅವರಿಗೆ ಸಲ್ಲುತ್ತದೆ.ವಿಜ್ಞಾನವನ್ನು ವಿರೋಧಿಸುವ ಜನರಿರಬೇಕು. ಆಗ ಅದರ ಬೆಳವಣಿಗೆಗೆ ಮತ್ತಷ್ಟು ಹೆಚ್ಚಲಿದೆ. ಇದೇ ವಿಜ್ಞಾನದ ವೈಶಿಷ್ಟ್ಯ. ಪ್ರಸ್ತುತ ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಅಮರತ್ವ ಸಿಕ್ಕಲ್ಲ. ನಾವು ಇರುವಷ್ಟು ದಿನ ಸೀಮಿತವಾದ ಜೀವನದಲ್ಲಿ ನಮ್ಮ ಸಾಧನೆಗಳು ಎತ್ತರವಾಗಿರಬೇಕು. ಅದು ಬಹಳ ಮುಖ್ಯ’ ಎಂದರು.

ನಗರದಲ್ಲಿ ವಿಜ್ಞಾನ ಭವನ ಅಂತಿಮ ಹಂತಕ್ಕೆ ಬಂದು ತಲುಪಿದೆ. ಜಿಲ್ಲಾಡಳಿತ ಅದರ ನಿರ್ಮಾಣಕ್ಕೆ ಸಹಕಾರ ನೀಡಿದೆ. ವಿಜ್ಞಾನ ಪರಿಷತ್ ಕೈಜೋಡಿಸಬೇಕು. ವಿಜ್ಞಾನ ಭವನ ನಿರ್ಮಾಣ ಆದಲ್ಲಿ ವಿಜ್ಞಾನ ಶಿಬಿರಗಳು ಆಯೋಜನೆ ಮಾಡಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಡಯಟ್ ಉಪನಿರ್ದೇಶಕ ಎಚ್.ಕೆ. ಲಿಂಗರಾಜ್, ‘ಮುಷ್ಟೂರಪ್ಪ ಮತ್ತು ಪುಟ್ಟರಾಜು ಸಾಮಾಜಿಕ ಕಳಕಳಿ, ಬದ್ಧತೆ ಉಳ್ಳವರಾಗಿದ್ದರು. ಆರ್ಥಿಕವಾಗಿ ಬಲ ಇಲ್ಲದಿದ್ದರೂ ಛಲ, ಉತ್ಸಾಹದಿಂದ ವಿಜ್ಞಾನಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದರು’ ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಸಹಕಾರ್ಯದರ್ಶಿ ಬಿ.ಎನ್. ಶ್ರೀನಾಥ್, ‘ಇಬ್ಬರಲ್ಲೂ ಕೊನೆಯವರೆಗೂ ವಿಜ್ಞಾನದ ಬಗೆಗಿನ ತುಡಿತ ಇತ್ತು. ಮಕ್ಕಳಿಗೆ ವಿಜ್ಞಾನದ ಅರಿವು ಮೂಡಿಸಬೇಕು. ದಾವಣಗೆರೆಗೆ ವಿಜ್ಞಾನದ ಮೂಲಕ ಕೊಡುಗೆ ನೀಡಬೇಕು ಎಂಬ ಕನಸನ್ನು ಹೊಂದಿದ್ದರು. ಅವರ ಈ ಕನಸನ್ನು ನನಸು ಮಾಡಲು ನಾವೆಲ್ಲ ಶ್ರಮಿಸೋಣ’ ಎಂದು ಹೇಳಿದರು.

ಶಿಕ್ಷಣ ತಜ್ಞ ಡಾ. ಹೆಚ್.ಬಿ. ವಾಮದೇವಪ್ಪ, ದಾವಣಗೆರೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಎಚ್. ವಿಶ್ವನಾಥ, ವಿಜ್ಞಾನ ಪರಿಷತ್‍ನ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಸ್.ಟಿ. ಸ್ವಾಮಿ, ಚಳ್ಳಕೆರೆ ಯರ್ರಿಸ್ವಾಮಿ ನುಡಿ ನಮನ ಸಲ್ಲಿಸಿದರು.

ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಗಿರೀಶ್ ಕಡ್ಲೆವಾಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಡಾ. ಬಿ.ಇ. ರಂಗಸ್ವಾಮಿ, ಗೌರವ ಕಾರ್ಯದರ್ಶಿ ಸಿ. ಕೃಷ್ಣೇಗೌಡ, ಖಚಾಂಜಿ ಈ. ಬಸವರಾಜ, ಸಿದ್ಧಗಂಗಾ ವಿದ್ಯಾಸಂಸ್ಥೆ ನಿರ್ದೇಶಕ ಡಾ. ಡಿ.ಎಸ್. ಜಯಂತ್, ಉದಯರತ್ನ ಕುಮಾರ್, ಪ್ರೊ. ಮರಿಗೌಡ್ರು, ಆರ್.ಬಿ. ವಸಂತ ಕುಮಾರಿ, ಅನಿತಾ ಮುಷ್ಟೂರಪ್ಪ, ಎಂ. ಗುರುಸಿದ್ದಸ್ವಾಮಿ, ಗಿರೀಶ್ ದೇವರಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT