ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಸಾರಿಗೆ ವಿಸ್ತರಣೆಗೆ ರಸ್ತೆಗಳೇ ತೊಡಕು

ಆಟೊ, ಸ್ವಂತ ವಾಹನಗಳಿಗೆ ಮೊರೆ ಹೋದ ಜನ
Last Updated 22 ಏಪ್ರಿಲ್ 2022, 5:28 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದ ಹೃದಯ ಭಾಗದಲ್ಲಿರುವ ‘ಸ್ಮಾರ್ಟ್‌ ಸಿಟಿ’ ದಾವಣಗೆರೆ ನಗರ ದಿನೇ ದಿನೇ ಬೆಳೆಯುತ್ತಿದ್ದು, ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ನಗರ ಸಾರಿಗೆ ಮಾತ್ರ ವಿಸ್ತರಣೆಯಾಗಿಲ್ಲ. ರಸ್ತೆಗಳು ಅಭಿವೃದ್ಧಿಯಾಗದೇ ಇರುವುದು ನಗರ ಸಾರಿಗೆ ವಿಸ್ತರಣೆಗೆ ತೊಡಕಾಗಿದೆ.

ನಗರಕ್ಕೆ ಹೊಂದಿಕೊಂಡಿರುವ ಹಲವು ಬಡಾವಣೆಗಳಲ್ಲಿ ರಸ್ತೆಗಳು ಚೆನ್ನಾಗಿಲ್ಲ. ಇದರಿಂದಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಲು ಹಿಂದೇಟು ಹಾಕುತ್ತಿವೆ. ಇದಲ್ಲದೇ ಹೆಚ್ಚಿನ ಜನರ ಬಳಿ ಸ್ವಂತ ವಾಹನಗಳು ಇರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಜನ ಕೆಎಸ್‌ಆರ್‌ಟಿಸಿ ಬಸ್‌ ಹತ್ತುವುದಿಲ್ಲ. ಹೀಗಾಗಿ ಕೆಲವು ಬಡಾವಣೆಗಳಿಗೆ ಕೆಎಸ್‌ಆರ್‌ಟಿಸಿ ಕನಿಷ್ಠ ಸೌಲಭ್ಯ ಒದಗಿಸಿ ಕೈತೊಳೆದುಕೊಳ್ಳುತ್ತಿದೆ.

ಪಿ.ಬಿ. ರಸ್ತೆಗೆ ಅಂಟಿಕೊಂಡಿರುವ ಹಳೇ ಕುಂದವಾಡ, ಹೊಸಕುಂದವಾಡ ಗ್ರಾಮಗಳಲ್ಲಿ ಬಸ್‌ ಬೆಳಿಗ್ಗೆ ಹಾಗೂ ಸಂಜೆ ಒಂದು ಟ್ರಿಪ್‌ ಹೋಗುತ್ತಿದೆ. ಅದೂ ಶಾಲಾ–ಕಾಲೇಜು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗಾಗಿ. ಹಳೇ ಕುಂದವಾಡಕ್ಕೆ ಬಸ್‌ ಚಲಿಸಲು ಸೂಕ್ತ ರಸ್ತೆ ಇಲ್ಲದೇ ಇರುವುದರಿಂದ ಬಸ್‌ಗಳು ಬರುತ್ತಿಲ್ಲ. ಇದರಿಂದಾಗಿ ಇಲ್ಲಿನ ನಿವಾಸಿಗಳು ಆಟೊ, ಬೈಕ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಬಸಾಪುರ ಗ್ರಾಮದಲ್ಲೂ ಇದೇ ಪರಿಸ್ಥಿತಿ ಇದೆ.

‘ತುಂಗಭದ್ರಾ ಬಡಾವಣೆಗೂ ಬಸ್ ಸೌಲಭ್ಯವಿಲ್ಲ. ಬನಶಂಕರಿ ಬಡಾವಣೆಗೆ ಹೋಗಲು ರಸ್ತೆಯೇ ಸರಿ ಇಲ್ಲ. ರಾಷ್ಟ್ರೀಯ ಹೆದ್ದಾರಿಯ ಮೂಲಕ ಹೋಗಿ ಸರ್ವೀಸ್ ರಸ್ತೆಯ ಮೂಲಕ ಹೋದರೆ 3 ಕಿ.ಮೀ. ಹೆಚ್ಚುವರಿಯಾಗುತ್ತದೆ. ಗಾಜಿನ ಮನೆಗೆ ಬೈಪಾಸ್‌ನಿಂದ ಬರಲು ರಸ್ತೆಯೇ ಇಲ್ಲ. ವಿನೋಬನಗರದಲ್ಲೂ ನಗರಸಾರಿಗೆ ಬಸ್ ಸೌಲಭ್ಯ ಇಲ್ಲದಂತಾಗಿದೆ’ ಎಂದು ಜನರು ದೂರುತ್ತಾರೆ.

‘ದಾವಣಗೆರೆ ನಗರ ಅಭಿವೃದ್ಧಿಯಾಗುತ್ತಿರುವುದರಿಂದ ನಮಗೆ ಹೊಸದಾಗಿ ಮಾರ್ಗಗಳನ್ನು ವಿಸ್ತರಿಸಲು ಅವಕಾಶವಿದೆ. ನಗರಸೇವೆ ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಹೆಚ್ಚಿನ ರೂಟ್‌ಗಳಿಗೆ ಬೇಡಿಕೆ ಇಟ್ಟಿದ್ದೇವೆ. ಕೊರೊನಾ ಕಾರಣದಿಂದ ಎರಡು ವರ್ಷಗಳಿಂದ ಪ್ರೊಕ್ಯೂರ್‌ಮೆಂಟ್ ಆಗಿಲ್ಲ. ನಗರದ ಎಲ್ಲಾ ಬಡಾವಣೆಗಳಿಗೆ ಬಸ್ ಸೌಲಭ್ಯ ಕಲ್ಪಿಸಿದ್ದೇವೆ. ಖಾಸಗಿಯವರು ಹಾಗೂ ನಾವೂ ಸೇರಿ ಇಬ್ಬರೂ ಸೇವೆ ನೀಡುತ್ತಿದ್ದೇವೆ’ ಎನ್ನುತ್ತಾರೆ ಕೆಎಸ್ಆರ್‌ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಸಿದ್ದೇಶ್ವರ ಎನ್. ಹೆಬ್ಬಾಳ್.

‘ಕೆಲವು ಗ್ರಾಮಗಳಲ್ಲಿ ಜನರು ನಿರಂತರವಾಗಿ ಸಂಚರಿಸುವುದಿಲ್ಲ. ಅಲ್ಲಿಗೆ ಕನಿಷ್ಠ ಸೇವೆ ಕೊಟ್ಟರೆ ಸಾಕು. ಡೀಸೆಲ್ ದರ ₹ 96 ಇದ್ದು, ಬೆಲೆ ಹೆಚ್ಚಳದಿಂದಾಗಿ ಹೊರೆಯಾಗಿದೆ. ಒಂದು ಕಿ.ಮೀ.ಗೆ ₹ 20ರಷ್ಟುಡೀಸೆಲ್ ಖರ್ಚಾಗುತ್ತಿದೆ. ಒಂದು ಲೀಟರ್ ಡೀಸೆಲ್‌ಗೆ 5 ಕಿ.ಮೀ. ಮೈಲೇಜ್ ಸಿಗುತ್ತಿದ್ದು, ಕನಿಷ್ಠ ಆದಾಯ ಬರಲೇಬೇಕು. ಪ್ರಸ್ತುತ ಒಂದು ಕಿ.ಮೀ.ಗೆ ₹ 32 ಆದಾಯವಿದೆ. ಡೀಸೆಲ್, ಸಾರಿಗೆ ನೌಕರರ ಸಂಬಳ ಎಲ್ಲವೂ ಸೇರಿ ಒಂದು ಕಿ.ಮೀ.ಗೆ ₹ 40 ಖರ್ಚು ಬೀಳುತ್ತಿದೆ. ಅಷ್ಟು ಬಂದರೆ ನಿರ್ವಹಣೆ ಮಾಡಬಹುದು’ ಎನ್ನುತ್ತಾರೆ ಅವರು.

ಪ್ರಮುಖ ಮಾರ್ಗಗಳು: ಸರಸ್ವತಿನಗರ–ಹೊಂಡದ ಸರ್ಕಲ್; ಅಖ್ತರ್ ರಜಾ ಸರ್ಕಲ್‌–ಶಾಮನೂರು; ವಿದ್ಯಾನಗರ–ಹೈಟೆಕ್ ಆಸ್ಪತ್ರೆ, ಶಾಮನೂರು–ರಾಮನಗರ; ಬಿಐಇಟಿ–ಅರಳೀಮರ ಸರ್ಕಲ್‌.

ಇಂಟೆಲೆಜೆನ್ಸ್ ಟ್ರಾನ್ಸ್‌ಪೋರ್ಟ್ ಸಿಸ್ಟಂನಿಂದ ಮಾಹಿತಿ ಸುಲಭ

ಸಾರ್ವಜನಿಕರಿಗೆ ಬಸ್‌ ಮಾರ್ಗಗಳ ಮಾಹಿತಿ ಒದಗಿಸಲು ಸ್ಮಾರ್ಟ್‌ ಸಿಟಿಯಿಂದ ಇಂಟೆಲಿಜೆನ್ಸ್ ಟ್ರಾನ್ಸ್‌ಪೋರ್ಟ್ ಸಿಸ್ಟಂ ಅನ್ನು ಜಾರಿಗೆ ತರಲಾಗುತ್ತಿದೆ.

‘ಈ ವ್ಯವಸ್ಥೆ ಜಾರಿಗೆ ಬಂದರೆ ಪ್ರಯಾಣಿಕರಿಗೆ ಬಸ್‌ ಮಾರ್ಗ ಸಂಖ್ಯೆ, ಹೆಸರು, ಬಸ್ ಬರುವ, ಹೋಗುವ ಸಮಯ ಎಲ್ಲವೂ ಬಸ್‌ ನಿಲ್ದಾಣದ ಸಾರ್ವಜನಿಕ ಮಾಹಿತಿ ಫಲಕದಲ್ಲಿ (ಡಿಸ್‌ಪ್ಲೇ ಬೋರ್ಡ್‌) ಕಾಣಿಸುತ್ತದೆ. ಸ್ಮಾರ್ಟ್‌ ಸಿಟಿಯಿಂದ 104 ಬಸ್‌ ಶೆಲ್ಟರ್ ನಿರ್ಮಾಣವಾಗಿದ್ದು, 52ರಲ್ಲಿ ಈಗಾಗಲೇ ಡಿಸ್‌ಪ್ಲೇ ಬೋರ್ಡ್ ಅಳವಡಿಸಲಾಗಿದೆ. ಅಲ್ಲಿ ಮಾಹಿತಿ ಬಿತ್ತರವಾಗುತ್ತದೆ’ ಎನ್ನುತ್ತಾರೆ ಸ್ಮಾರ್ಟ್‌ ಸಿಟಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಸುನಿಲ್.

‘ಸ್ಮಾರ್ಟ್‌ ಸಿಟಿಯಿಂದ ‘ಒನ್‌ ಸಿಟಿ, ಒನ್‌ ಮೊಬೈಲ್’ ಆ್ಯಪ್ ಬಿಡುಗಡೆ ಮಾಡಲಾಗುತ್ತಿದೆ. ಸಾರ್ವಜನಿಕರು ಎಲ್ಲಿ ನಿಂತಿದ್ದಾರೋ ಹತ್ತಿರದ ಬಸ್ ನಿಲ್ದಾಣವನ್ನು ಈ ಆ್ಯಪ್ ತೋರಿಸುತ್ತದೆ. ಕೆಎಸ್‌ಆರ್‌ಟಿಸಿಯವರು ತಮ್ಮ ಬಸ್‌ಗಳು ಸರಿಯಾದ ಮಾರ್ಗದಲ್ಲಿ ಸಂಚರಿಸುತ್ತಿವೆಯಾ ಎಂಬುದನ್ನು ಇದರಲ್ಲಿ ಪರಿಶೀಲಿಸಬಹುದು. ಮೇ 15ರೊಳಗೆ ಈ ಕಾಮಗಾರಿ ಮುಗಿಯುತ್ತಿದೆ’ ಎಂದು ಮಾಹಿತಿ ನೀಡಿದರು.

‘ನಗರ ಸಾರಿಗೆಗೆ ಬೇಕು ಪ್ರತ್ಯೇಕ ನಿಲ್ದಾಣ’

ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಬೇಕು ಎಂದರೆ ನಗರ ಸಾರಿಗೆಗೆ ಪ್ರತ್ಯೇಕ ಬಸ್‌ ನಿಲ್ದಾಣ ಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್.

‘ನಗರ ಹಾಗೂ ಹೊರ ಜಿಲ್ಲೆಯ ಬಸ್‌ಗಳು ಒಂದೇ ನಿಲ್ದಾಣದಲ್ಲಿ ನಿಲ್ಲುವುದರಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಹೈಸ್ಕೂಲ್ ಮೈದಾನದಲ್ಲಿ ಬಸ್ ನಿಲ್ದಾಣವಿದ್ದು, ಅಲ್ಲಿನ ರಸ್ತೆ ಕಿಷ್ಕಿಂಧೆಯಾಗುತ್ತಿದೆ. ನಾಲ್ಕು ದಿಕ್ಕುಗಳಲ್ಲೂ ಪ್ರತ್ಯೇಕ ನಿಲ್ದಾಣಗಳಿದ್ದರೆ ಸಂಚಾರ ದಟ್ಟಣೆ ಕಡಿಮೆ ಮಾಡಬಹುದು’ ಎಂಬುದು ಅವರ ಸಲಹೆ.

‘ಬಸ್‌ಗಳಲ್ಲಿ ಯಾವ ಮಾರ್ಗದಲ್ಲಿ ಬಸ್‌ ಸಂಚರಿಸುತ್ತವೆ ಎಂಬ ಫಲಕ ಇಲ್ಲ. ಇದರಿಂದ ಬೇರೆ ಊರಿನಿಂದ ಬರುವ ಪ್ರಯಾಣಿಕರಿಗೆ ಗೊಂದಲವಾಗುತ್ತಿದೆ’ ಎಂದು ಹೇಳುತ್ತಾರೆ.

20 ವಾಹನಗಳಿಗೆ ಬೇಡಿಕೆ

ನಗರದಲ್ಲಿ ಸಾರಿಗೆ ಸೇವೆ ವಿಸ್ತರಿಸಲು ಸಾಕಷ್ಟು ಮಾರ್ಗಗಳು ಇದ್ದು, ಹೊಸದಾಗಿ 20 ಬಸ್‌ಗಳಿಗೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ. ಮುಂದಿನ ಪ್ರೊಕ್ಯೂರ್‌ಮೆಂಟ್‌ನಲ್ಲಿ ಸಿಗುವ ವಿಶ್ವಾಸವಿದೆ. ಬಾಲಾಜಿ ಬಡಾವಣೆ, ಜೆ.ಎಚ್. ಬಡಾವಣೆಗೆ ಬಸ್‌ ಸೌಲಭ್ಯ ಒದಗಿಸಲು, ಶಾಮನೂರಿನಿಂದ ಜೆ.ಎಚ್. ಬಡಾವಣೆಗೆ ಸೇವೆಯನ್ನು ವಿಸ್ತರಿಸಲು ಚಿಂತನೆ ನಡೆಸಲಾಗಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ಹೇಳುತ್ತಾರೆ.

‘ವಿದ್ಯಾರ್ಥಿಗಳ ಪಾಸ್ ಇರುವುದರಿಂದ ಸೇವೆಯ ದೃಷ್ಟಿಯಿಂದ ಕೊಡಲೇಬೇಕು. ಜನರು ಸಾರಿಗೆ ಬಸ್‌ಗಳನ್ನು ಹೆಚ್ಚು ಬಳಸಿದಷ್ಟೂ ಸಂಸ್ಥೆಗೆ ಲಾಭದಾಯಕವಾಗುತ್ತದೆ. ಇನ್ನಷ್ಟು ಹೆಚ್ಚು ಸೇವೆ ಒದಗಿಸಬಹುದು’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT