ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಅಪೂರ್ಣ ಕಾಮಗಾರಿ; ರಸ್ತೆ ಸಂಚಾರ ಕಂಟಕ

ಹರಿಹರ: ಅಮರಾವತಿ ಕಾಲೊನಿ ಜನರ ಸಂಕಟ
Published 23 ಡಿಸೆಂಬರ್ 2023, 6:25 IST
Last Updated 23 ಡಿಸೆಂಬರ್ 2023, 6:25 IST
ಅಕ್ಷರ ಗಾತ್ರ

ಹರಿಹರ: ನಗರದ ಹೊರವಲಯದ ಅಮರಾವತಿ ಕಾಲೊನಿಯಿಂದ ಸಾಗುವ ದೊಗ್ಗಳಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಗರಸಭೆಯಿಂದ ಕೈಗೊಂಡಿದ್ದು, ಕಾಮಗಾರಿಗಾಗಿ ಹಳೆ ರಸ್ತೆಯ ಡಾಂಬರನ್ನು ತೆರವುಗೊಳಿಸಲಾಗಿದೆ.

ಏಳೆಂಟು ದಿನಗಳ ಹಿಂದೆ ಡಾಂಬರನ್ನು ತೆರವುಗೊಳಿಸಿ ಹಾಗೇ ಬಿಡಲಾಗಿದೆ. ಈ ರಸ್ತೆಯ ಸುಮಾರು ಅರ್ಧ ಕಿ.ಮೀ.ವರೆಗೆ ದಪ್ಪನೆಯ ಜಲ್ಲಿಕಲ್ಲುಗಳು ಎದ್ದಿದ್ದು, ಜನ ಹಾಗೂ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.

ಈ ರಸ್ತೆಯನ್ನು ಅಮರಾವತಿ ಕಾಲೊನಿ, ಕೆಎಚ್‌ಬಿ ಕಾಲೊನಿ ನಿವಾಸಿಗಳು, ದೊಗ್ಗಳ್ಳಿ ಗ್ರಾಮಸ್ಥರು ಹಾಗೂ ನೂರಾರು ರೈತರು ತಮ್ಮ ಜಮೀನುಗಳಿಗೆ ಹೋಗಲು ಬಳಸುತ್ತಾರೆ. ಇದಲ್ಲದೆ ದಾವಣಗೆರೆ ತಾಲ್ಲೂಕಿನ ಆವರಗೊಳ್ಳ, ಕಕ್ಕರಗೊಳ್ಳ, ಯರಗುಂಟಿ, ದೊಡ್ಡಬಾತಿ ಹಾಗೂ ಇತರೆ ಗ್ರಾಮಗಳಿಗೆ ಹೋಗಿ ಬರುವವರಿಗೂ ಇದು ಸಮೀಪದ ರಸ್ತೆಯಾಗಿದೆ. ಅಮರಾವತಿ ಕಾಲೊನಿಯ ಜನರು ಹರಿಹರ, ದಾವಣಗೆರೆಗೆ ಹೋಗಲು ಈ ರಸ್ತೆಯ ಮೂಲಕವೇ ಸಂಚರಿಸಬೇಕಿದೆ.

ರಸ್ತೆಯ ಸ್ಥಿತಿ ಹೀಗಾಗಿರುವುದರಿಂದ ಆಟೊದವರು ಅಮರಾವತಿ ಕಾಲೊನಿ ಬಾಡಿಗೆ ಹಿಡಿಯಲು ಹಿಂದೇಟು ಹಾಕುತ್ತಿದ್ದಾರೆ. ಶಾಲೆ, ಕಾಲೇಜುಗಳ ಆಟೊ, ವ್ಯಾನ್, ಬಸ್‌ಗಳ ಚಾಲಕರು ಕಾಲೊನಿ ಒಳಕ್ಕೆ ಬಾರದೆ ಬೀರೂರು– ಸಮ್ಮಸಗಿ ಹೆದ್ದಾರಿಯಿಂದಲೇ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು, ಅಲ್ಲಿಯೇ ಇಳಿಸಿ ಹೋಗುತ್ತಿದ್ದಾರೆ.

ಈ ಕಾಲೊನಿಯಲ್ಲಿ ಆರೋಗ್ಯ ಮಾತೆ ಹೆರಿಗೆ ಆಸ್ಪತ್ರೆ ಇದ್ದು ಅಲ್ಲಿಗೆ ಗರ್ಭಿಣಿಯರು, ಬಾಣಂತಿಯರು ಬಂದು ಹೋಗುವುದು ಸಾಮಾನ್ಯವಾಗಿದೆ. ಅನಿವಾರ್ಯವಾಗಿ ಈ ರಸ್ತೆಯಲ್ಲಿ ಸಂಚರಿಸಬೇಕಾದ ಬೈಕ್ ಸವಾರರು ಎದ್ದು, ಬಿದ್ದೂ ಸಾಗುತ್ತಿದ್ದಾರೆ. ಹಾಲು, ದಿನಪತ್ರಿಕೆ ವಿತರಿಸುವವರುರು ತಮ್ಮ ಬೈಕ್‌ಗಳನ್ನು ದೂರ ನಿಲ್ಲಿಸಿ ನಡೆಯುತ್ತಲೇ ಮನೆಗಳಿಗೆ ಸರಬರಾಜು ಮಾಡುತ್ತಿದ್ದಾರೆ.

ರಸ್ತೆ ಕಾಮಗಾರಿ ಆರಂಭಿಸುವಾಗ ಡಾಂಬರ್‌ ತೆರವುಗೊಳಿಸಿದ್ದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿರಲಿಲ್ಲ. ಕಾಮಗಾರಿಗೆ ಹತ್ತಾರು ದಿನ ಮುಂಚೆಯೇ ಡಾಂಬರ್‌ ತೆರವುಗೊಳಿಸಿದ್ದರಿಂದ ಜನರಿಗೆ ಅಡಚಣೆಯಾಗಿದೆ.

-ಅಮರಾವತಿ ಪರಮೇಶ್ವರಪ್ಪ ಬಣಕಾರ್ ಹನಗವಾಡಿ ಮಾಜಿ ಮಂಡಲ ಪ್ರಧಾನರು

ಈ ರಸ್ತೆಯಲ್ಲಿರುವ 16 ಯುಜಿಡಿ ಚೆಂಬರ್‌ಗಳನ್ನು 10 ಇಂಚುಗಳವರೆಗೆ ಎತ್ತರಿಸಬೇಕಿದೆ. ಈ ಕಾರ್ಯ ಎರಡು ದಿನಗಳಲ್ಲಿ ಆರಂಭಿಸುತ್ತೇವೆ. ನಂತರ ರಸ್ತೆ ಕಾಮಗಾರಿ ಆರಂಭಿಸುತ್ತೇವೆ.

-ಐಗೂರು ಬಸವರಾಜ್ ನಗರಸಭೆ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT