ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಾಪಟ್ಟಣ: ವಾಹನ ನಿಲ್ದಾಣವಾಗಿರುವ ಸಂತೆ ಮೈದಾನದ ಶೆಡ್

Published 18 ಮೇ 2024, 8:27 IST
Last Updated 18 ಮೇ 2024, 8:27 IST
ಅಕ್ಷರ ಗಾತ್ರ

ಬಸವಾಪಟ್ಟಣ: ಪ್ರತಿ ಸೋಮವಾರ ಇಲ್ಲಿ ನಡೆಯುವ ವಾರದ ಸಂತೆಗಾಗಿ ಎ.ಪಿ.ಎಂ.ಸಿ.ಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಶೆಡ್‌ ಈವರೆಗೆ ಬಳಕೆಯಾಗದೇ ಈಗ ವಾಹನಗಳನ್ನು ನಿಲ್ಲಿಸುವ ತಾಣವಾಗಿದೆ.

‘ನಮ್ಮೂರ ಸಂತೆಗೆ 120 ವರ್ಷಗಳ ಇತಿಹಾಸವಿದೆ. ಕೃಷಿ ಚಟುವಟಿಕೆಗೆ ರಜಾ ದಿನವಾಗುವ ವಾರದ ಸಂತೆಗೆ ಸುತ್ತಲಿನ 22 ಗ್ರಾಮಗಳಿಂದ ವಿವಿಧ ವಸ್ತುಗಳನ್ನು ಖರೀದಿಸಲು ಜನ ಇಲ್ಲಿಗೆ ಬರುತ್ತಾರೆ. ಮಳೆ ಗಾಳಿ ಬಿಸಿಲಿನಿಂದ ವ್ಯಾಪಾರಿಗಳಿಗೂ ಮತ್ತು ಗ್ರಾಹಕರಿಗೂ ರಕ್ಷಣೆ ಒದಗಿಸಲು ಗ್ರಾಮ ಪಂಚಾಯಿತಿಯ ಮನವಿ ಮೇರೆಗೆ ಶೆಡ್‌ ನಿರ್ಮಿಸಿಕೊಡಲಾಗಿದೆ. ಆದರೆ, ವ್ಯಾಪಾರಿಗಳ ಉದಾಸೀನತೆ ಮತ್ತು ಹಠಮಾರಿ ಧೋರಣೆಯ ಕಾರಣ ಸಂತೆಯ ಮಾರಾಟದ ವಸ್ತುಗಳನ್ನು ಅಲ್ಲಿ ಇಟ್ಟುಕೊಂಡು ಮಾರಾಟ ಮಾಡಲಾಗದೇ ಒಂದು ಸುಸಜ್ಜಿತ ಕಟ್ಟಡವನ್ನು ವ್ಯರ್ಥ ಮಾಡುತ್ತಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಡಿ.ಆರ್‌.ಹಾಲೇಶ್‌ ದೂರಿದರು.

‘ತಮಗೆ ವ್ಯಾಪಾರ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ವ್ಯಾಪಾರಿಗಳು ಸಂತೆಗೆ ಮೀಸಲಿರಿಸಿರುವ ನಿವೇಶನವನ್ನು ಬಿಟ್ಟು ರಸ್ತೆಯ ಎರಡೂ ಪಕ್ಕದಲ್ಲಿ ತರಕಾರಿ ಮತ್ತು ಇತರ ವಸ್ತುಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಇದರಿಂದ ರಸ್ತೆ ಅಪಘಾತ ಸಂಭವಿಸಬಹುದು ಎಂಬುದನ್ನು ಅರಿತು ಇದನ್ನು ಒಂದು ವರ್ಷದಿಂದ ತಡೆದಿದ್ದೇವೆ. ಸಂತೆಗಾಗಿಯೇ ನಿರ್ಮಿಸಿರುವ ಈ ಶೆಡ್‌ನಲ್ಲಿ ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡಬೇಕು ಎಂದು ಎಷ್ಟು ಬಾರಿ ಹೇಳಿದರೂ ವ್ಯಾಪಾರಿಗಳು ನಮ್ಮ ಮಾತು ಕೇಳುತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಪಿಡಿಒ ಅನಿಲ್‌ಕುಮಾರ್‌ ತಿಳಿಸಿದರು.

ಸಂತೆ ಮೈದಾನದಲ್ಲಿ ನಿರ್ಮಿಸಿರುವ ಶೆಡ್‌, ಜನನಿಬಿಡ ರಸ್ತೆಯಿಂದ 20 ಮೀಟರ್‌ ದೂರದಲ್ಲಿದ್ದು, ವ್ಯಾಪಾರಿಗಳಿಗೂ ಗ್ರಾಹಕರಿಗೂ ಸುರಕ್ಷಿತವಾಗಿದೆ. ತರಕಾರಿಗಳನ್ನು ಕೊಳ್ಳಲು ಸಂತೆಗೆ ಬರುವ ಗ್ರಾಹಕರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರೇ ಆಗಿರುವುದರಿಂದ ತರಕಾರಿ ಅಂಗಡಿಗಳನ್ನು ಶೆಡ್‌ಗೆ ಸ್ಥಳಾಂತರಿಸಿದರೆ ಒಳ್ಳೆಯದು. ಅಲ್ಲದೇ ಶೆಡ್‌ ಅನ್ನು ಬಳಸಿಕೊಂಡಲ್ಲಿ ಪ್ರತಿ ಸೋಮವಾರ ಮಧ್ಯಾಹ್ನದಿಂದ ಸಂಜೆಯವರೆಗೂ ಸಂತೆ ಮೈದಾನದ ಮುಂದಿನ ರಸ್ತೆಯಲ್ಲಿ ಸಂಭವಿಸುವ ವಾಹನದಟ್ಟಣೆಯನ್ನು ತಡೆಯಬಹುದು. ಶೆಡ್‌ ಬಳಕೆ ಮಾಡಿಕೊಳ್ಳುವಂತೆ ಗ್ರಾಮ ಪಂಚಾಯಿತಿ ಆಡಳಿತ ಕಟ್ಟುನಿಟ್ಟಾದ ಆದೇಶ ಹೊರಡಿಸಬೇಕು’ ಎಂದು ಗೃಹಿಣಿಯರಾದ ಹಾಲಮ್ಮ ಮತ್ತು ವೀರಮ್ಮ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT