ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಕ್ಷೇತ್ರ: 25 ಅಭ್ಯರ್ಥಿಗಳು ಕಣದಲ್ಲಿ

1977–2014ರವರೆಗಿನ ಚುನಾವಣೆ ಎದುರಿಸಿದ್ದು 124 ಅಭ್ಯರ್ಥಿಗಳು
Last Updated 10 ಏಪ್ರಿಲ್ 2019, 10:46 IST
ಅಕ್ಷರ ಗಾತ್ರ

ದಾವಣಗೆರೆ: ಚಿತ್ರದುರ್ಗದ ಲೋಕಸಭಾ ಕ್ಷೇತ್ರದಿಂದ ಪ್ರತ್ಯೇಕಗೊಂಡ ಸ್ವತಂತ್ರ ಕ್ಷೇತ್ರವಾದ ಬಳಿಕ 2009ರಲ್ಲಿ 28 ಹುರಿಯಾಳುಗಳು ಕಣದಲ್ಲಿದ್ದುದೇ ಈವರೆಗಿನ ದಾಖಲೆಯಾಗಿ ಉಳಿದಿದೆ. ಈ ಬಾರಿ ಚುನಾವಣೆಯಲ್ಲಿ 25 ಮಂದಿ ಕಣದಲ್ಲಿದ್ದು, ಅತಿ ಹೆಚ್ಚು ಮಂದಿ ಸ್ಪರ್ಧೆಗೆ ಇಳಿದ ದಾಖಲೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ.

1977ರಲ್ಲಿ ನಡೆದ ಭಾರತದ 6ನೇ ಮಹಾಚುನಾವಣೆಯು ದಾವಣಗೆರೆ ಕ್ಷೇತ್ರದ ಮೊದಲ ಚುನಾವಣೆಯಾಗಿತ್ತು. ಮೂವರು ಕಣಕ್ಕಿಳಿದಿದ್ದು, ಒಬ್ಬರು ಠೇವಣಿ ಕಳೆದುಕೊಂಡಿದ್ದರು. ದಾವಣಗೆರೆ ಕ್ಷೇತ್ರದಲ್ಲಿ ಅತಿ ಕಡಿಮೆ ಹುರಿಯಾಳುಗಳಿದ್ದ ಚುನಾವಣೆ ಅದೇ ಆಗಿತ್ತು.

1977ರಿಂದ 2014ರವರೆಗೆ ಒಟ್ಟು 11 ಚುನಾವಣೆಗಳನ್ನು ಈ ಕ್ಷೇತ್ರ ಕಂಡಿದೆ. ಅದರಲ್ಲಿ ಒಟ್ಟು 124 ಮಂದಿ ಸ್ಪರ್ಧೆಗೆ ಇಳಿದಿದ್ದರು. ಚುನಾವಣೆಯ ನಿಯಮಗಳ ಪ್ರಕಾರ ಚಲಾವಣೆಯಾದ ಒಟ್ಟು ಮತಗಳಲ್ಲಿ 6ನೇ ಒಂದು ಭಾಗದಷ್ಟು ಮತ ಪಡೆಯಲು ಸಾಧ್ಯವಾಗದೇ ಇದ್ದರೆ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಹಾಗಾಗಿ 124 ಸ್ಪರ್ಧಿಗಳಲ್ಲಿ 99 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. 11 ಮಂದಿ ಗೆದ್ದಿದ್ದರೆ 14 ಮಂದಿಯಷ್ಟೇ ಠೇವಣಿ ಉಳಿಸಿಕೊಳ್ಳಲು ಸಫಲರಾಗಿದ್ದರು.

1977ರಲ್ಲಿ ಒಬ್ಬರು, 1980ರಲ್ಲಿ ಮೂವರು, 1984ರಲ್ಲಿ 9 ಮಂದಿ, 1989ರಲ್ಲಿ ಮೂವರು, 91ರಲ್ಲಿ 10 ಮಂದಿ, 96ರಲ್ಲಿ 21 ಮಂದಿ, 98ರಲ್ಲಿ 6 ಮಂದಿ, 99ರಲ್ಲಿ ಇಬ್ಬರು, 2004ರಲ್ಲಿ ಮೂವರು, 2009ರಲ್ಲಿ 26 ಹಾಗೂ 2014ರಲ್ಲಿ 15 ಮಂದಿ ಠೇವಣಿ ಉಳಿಸಿಕೊಂಡಿಲ್ಲ.

6 ಚುನಾವಣೆಗಳಲ್ಲಿ ಹುರಿಯಾಳುಗಳ ಸಂಖ್ಯೆ ಒಂದಂಕಿ ದಾಟಿಲ್ಲ. ಎರಡು ಬಾರಿಯಷ್ಟೇ 20ರ ಗಡಿ ದಾಟಿತ್ತು. ಮೂರನೇ ಬಾರಿಗೆ ಈ ಸಲ 20ರ ಗಡಿ ದಾಟಿದೆ.

1977ರಲ್ಲಿ ಮೂವರು, 1999ರಲ್ಲಿ ನಾಲ್ವರು, 1989ರಲ್ಲಿ ಐವರು, 1980 ಮತ್ತು 2004ರಲ್ಲಿ ಆರು ಮಂದಿಯಷ್ಟೇ ಕಣದಲ್ಲಿ ಇದ್ದರು. 1996ರಲ್ಲಿ 44 ಮಂದಿ ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ 20 ಮಂದಿ ನಾಮಪತ್ರ ವಾಪಸ್‌ ತೆಗೆದುಕೊಂಡಿದ್ದರು.

ಈ ಬಾರಿ ಒಟ್ಟು 28 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅವರ ಪೈಕಿ ಇಬ್ಬರ ನಾಮಪತ್ರ ತಿರಸ್ಕೃತಗೊಂಡಿತ್ತು. ಒಬ್ಬರು ಉಮೇದುವಾರಿಕೆಯಿಂದ ಹಿಂದಕ್ಕೆ ಸರಿದಿದ್ದಾರೆ. 25 ಮಂದಿ ಕಣದಲ್ಲಿದ್ದರೂ ಇಬ್ಬರ ನಡುವೆಯೇ ನೇರ ಸ್ಪರ್ಧೆ ಕಾಣಿಸುತ್ತಿರುವುದರಿಂದ ಉಳಿದವರು ಠೇವಣಿ ಉಳಿಸಿಕೊಳ್ಳುವುದು ಈ ಬಾರಿಯೂ ಅನುಮಾನ ಎಂಬಂತಾಗಿದೆ.

ಮುಸ್ಲಿಂ ಸಮುದಾಯದ 9 ಮಂದಿಸ್ಪರ್ಧೆ
ಈ ಬಾರಿ ಮುಸ್ಲಿಂ ಸಮುದಾಯದಿಂದ 9 ಮಂದಿ ಸ್ಪರ್ಧೆಗೆ ಇಳಿದಿದ್ದು, ಅಷ್ಟು ಮಂದಿಯೂ ಪಕ್ಷೇತರರಾಗಿದ್ದಾರೆ.

ಎಸ್.ಕೆ. ಅಫ್ಜಲ್‌ಖಾನ್‌, ಅಬ್ದುಲ್ ನಜೀರ್ ಸಾಬ್, ಆಲೀಂವುಲ್ಲಾ, ವಿ. ಇಕ್ಬಾಲ್ ಅಹಮ್ಮದ್, ಎ.ಟಿ. ದಾದಾ ಖಲಂದರ್, ಬರ್ಕತ್ ಅಲಿ, ಮಹಮ್ಮದ್ ಹಯಾತ್, ಸುಭಾನ್ ಖಾನ್, ಸೈಯದ್‌ ಜಬೀವುಲ್ಲಾ ಕೆ. ಕಣದಲ್ಲಿ ಇರುವವರು.

ಈ ಸಮುದಾಯದ ಮತಗಳನ್ನು ಒಡೆಯಲು ಕೆಲವರನ್ನು ಕಾಂಗ್ರೆಸ್‌ ವಿರೋಧಿಗಳೇ ನಿಲ್ಲಿಸಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ.

ಸಾಂಪ್ರದಾಯಿಕ ಎದುರಾಳಿಗಳಾಗಿರುವ ಬಿಜೆಪಿ (ಎಚ್‌.ಬಿ. ಮಂಜಪ್ಪ) , ಕಾಂಗ್ರೆಸ್‌ (ಜಿ.ಎಂ. ಸಿದ್ದೇಶ್ವರ) ಅಲ್ಲದೇ ಇನ್ನೂ ಐದು ಪಕ್ಷಗಳು ಹುರಿಯಾಳುಗಳನ್ನು ಇಳಿಸಿವೆ. ಜೆಡಿಎಸ್‌ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದೆ. ಸಿಪಿಐ ಮೈತ್ರಿ ಮಾಡಿಕೊಂಡಿಲ್ಲವಾದರೂ ಅಭ್ಯರ್ಥಿಗಳನ್ನು ಇಳಿಸದೇ ಬೆಂಬಲವನ್ನು ನೀಡಿದೆ. ಸೋಷಿಯಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾದಿಂದ (ಕಮ್ಯುನಿಸ್ಟ್‌) ಟಿ.ಜಿ. ಮಧು ಸ್ಪರ್ಧಿಸಿ ಅಚ್ಚರಿ ಮೂಡಿಸಿದ್ದಾರೆ.

ಇವರಲ್ಲದೇ ಬಿಎಸ್‌ಪಿಯಿಂದ ಬಿ.ಎಚ್‌. ಸಿದ್ದಪ್ಪ, ಇಂಡಿಯಾ ಪ್ರಜಾ ಬಂಧು ಪಾರ್ಟಿಯಿಂದ ಎಚ್‌. ಈಶ್ವರಪ್ಪ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಬಿ.ಎ. ಗಣೇಶ್‌, ಇಂಡಿಯನ್‌ ಲೇಬರ್‌ ಪಾರ್ಟಿ– ಅಂಬೇಡ್ಕರ್‌ ಫುಲೆ ಪಕ್ಷದಿಂದ ಎನ್‌. ರವೀಂದ್ರ ಕಣಕ್ಕಿಳಿದಿದ್ದಾರೆ. ಇವರ ಜತೆಗೆ ಪಕ್ಷೇತರರಾಗಿ ಆಲೂರು ಎಂ.ಜಿ ಸ್ವಾಮಿ, ಬಿ.ವಿ. ತಿಪ್ಪೇಸ್ವಾಮಿ, ಮಂಜುನಾಥ ಎ.ಕೆ, ಸಿ.ಎಂ. ಮಂಜುನಾಥ, ವಿ. ಮಂಜುನಾಥಾಚಾರ್, ಎಂ.ಬಿ. ವೀರಭದ್ರಪ್ಪ, ಆರ್.ಎನ್. ಶಶಿಕುಮಾರ್, ಡಾ. ಶ್ರೀಧರ ಉಡುಪ, ಎಚ್.ಆರ್. ಹರೀಶ್ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT