ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಂತಿಸಾಗರ ಪ್ರವಾಸಿ ತಾಣವಾಗಿಸಲು ಬದ್ಧ’

ಚನ್ನಗಿರಿ: ಶಾಂತಿಸಾಗರದಲ್ಲಿ ದೋಣಿವಿಹಾರ ಮತ್ತು ಜಲ ಸಾಹಸ ಕ್ರೀಡೆ ಆರಂಭ
Last Updated 18 ನವೆಂಬರ್ 2019, 9:54 IST
ಅಕ್ಷರ ಗಾತ್ರ

ಚನ್ನಗಿರಿ: ‘ಏಷ್ಯಾ ಖಂಡದಲ್ಲಿಯೇ 2ನೇ ಅತಿ ದೊಡ್ಡ ಕೆರೆ ಶಾಂತಿಸಾಗರ. ಅದರ ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಶಾಂತಿಸಾಗರ ಪ್ರಸಿದ್ಧ ಪ್ರವಾಸಿ ತಾಣವಾಗಬೇಕೆಂಬುದು ನಮ್ಮೆಲ್ಲರ ಗುರಿಯಾಗಲಿ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ತಾಲ್ಲೂಕಿನ ಶಾಂತಿಸಾಗರ ಕೆರೆಯ ಬಳಿ ಭಾನುವಾರ ನಡೆದ ದೋಣಿವಿಹಾರ ಕೇಂದ್ರ, ಜಲ ಸಾಹಸ ಕ್ರೀಡೆಗೆ ಚಾಲನೆ ಹಾಗೂ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶಾಂತಿಸಾಗರದ ಸರ್ವೆ ಕಾರ್ಯದ ಬಗ್ಗೆ ನನ್ನದೇನೂ ತಕರಾರು ಇಲ್ಲ. ಖಡ್ಗ ಸಂಸ್ಥೆಯವರ ಹೋರಾಟದಿಂದ ರಾಜ್ಯ ಸರ್ಕಾರ ಕೆರೆ ಸರ್ವೆ ಕಾರ್ಯಕ್ಕೆ ₹ 11 ಲಕ್ಷ ಬಿಡುಗಡೆಯಾಗಿದೆ. ಶಾಂತಿಸಾಗರ ಕೆರೆ ಚಿತ್ರದುರ್ಗ, ಹೊಳಲ್ಕೆರೆ, ಜಗಳೂರು, ಭೀಮಸಮುದ್ರ, ಸಿರಿಗೆರೆ ಹಾಗೂ ಚನ್ನಗಿರಿ ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ಪ್ರಮುಖವಾಗಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇಂತಹ ಕೆರೆಗೆ ಶಾಶ್ವತವಾಗಿ 2 ಟಿಎಂಸಿ ನೀರನ್ನು ತುಂಗಭದ್ರಾ ನದಿಯಿಂದ ಹರಿಸುವ ಯೋಜನೆ ಆರಂಭಕ್ಕೆ ನಾನು ಮತ್ತು ಶಾಸಕರು ಪ್ರಯತ್ನ ನಡೆಸಿದ್ದೇವೆ. ಈ ಯೋಜನೆಯ ಬಗ್ಗೆ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಶಾಂತಿಸಾಗರದಲ್ಲಿ ಸದಾ ನೀರು ತುಂಬಿದ್ದರೆ ಯಾವುದೇ ತೊಂದರೆಯಾಗುವುದಿಲ್ಲ’ ಎಂದರು.

‘2009ರಲ್ಲಿ ಆಗಿನ ಆಡಳಿತ ಪಕ್ಷದ ಸಂಸದ ಶಾಂತಿಸಾಗರ ಕೆರೆಯ ನೀರನ್ನು ಭೀಮಸಮುದ್ರ ಕೆರೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಅಪ್ರಚಾರ ನಡೆಸಿದ್ದರು. 25 ವರ್ಷಗಳಿಂದ ಭೀಮಸಮುದ್ರದ ಕೆರೆ ಖಾಲಿಯಾಗಿದೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆ ಮುಕ್ತಾಯಗೊಂಡರೆ ರೈತರ ಬದುಕು ಹಸನಾಗಲಿದೆ’ ಎಂದು ಹೇಳಿದರು.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ‘ಶಾಂತಿಸಾಗರ ಸೇರಿ ತಾಲ್ಲೂಕಿನ ಹೊದಿಗೆರೆ ಸಮಾಧಿ ಸ್ಥಳ, ಅಮ್ಮನಗುಡ್ಡ, ಮಾವಿನಹೊಳೆ, ದೇವರಹಳ್ಳಿ ಕ್ಷೇತ್ರಗಳನ್ನು ಪ್ರವಾಸಿ ತಾಣಗಳನ್ನಾಗಿ ಮಾಡಲು ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಗೆ ₹ 56 ಕೋಟಿ ಬಿಡುಗಡೆಗಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಎರಡ್ಮೂ ಮೂರು ತಿಂಗಳಲ್ಲಿ ಅನುದಾನ ಬಿಡುಗಡೆಯಾಗಲಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ದೋಣಿವಿಹಾರ ಕೇಂದ್ರ ಹಾಗೂ ಜಲ ಸಾಹಸ ಕ್ರೀಡೆಗಳ ವ್ಯವಸ್ಥೆಗಾಗಿ ಮಾನಸ ಅಡ್ವೆಂಚರ್ಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಪ್ರಸ್ತುತ 5 ದೋಣಿಗಳ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ’ ಎಂದು ತಿಳಿಸಿದರು.

‘ಚನ್ನಗಿರಿ ಪಟ್ಟಣದ ಚಿಕ್ಕೂಲಿಕೆರೆ ಗ್ರಾಮದ ಬಳಿ ಕೆಎಸ್ಆರ್‌ಟಿಸಿ ಬಸ್ ಡಿಪೊ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ 4 ಎಕರೆ ಜಮೀನಿನನ್ನು ಮಂಜೂರು ಮಾಡಿಸಲಾಗಿದೆ. ಮುಂದಿನ 3.5 ವರ್ಷದಲ್ಲಿ ಈ ತಾಲ್ಲೂಕನ್ನು ಮಾದರಿ ತಾಲ್ಲೂಕನ್ನಾಗಿ ಮಾಡಲು ಬದ್ಧ’ ಎಂದು ಹೇಳಿದರು.

ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ, ಜಿಲ್ಲಾಧಿಕಾರಿ ಮಹಾತೇಂಶ್ ಬೀಳಗಿ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಸದಸ್ಯರಾದ ಪಿ. ವಾಗೀಶ್, ಸಾಕಮ್ಮ, ಎನ್. ಲೋಕೇಶ್ವರ್, ಫಕ್ಕೀರಪ್ಪ, ಮಂಜುಳ ಟಿ.ವಿ. ರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಉಷಾ ಶಶಿಕುಮಾರ್, ತಹಶೀಲ್ದಾರ್ ಎನ್.ಜೆ. ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT