ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆ ಒರೆಗೆ ಹಚ್ಚಿದ ಸಾವಿರಾರು ವಿದ್ಯಾರ್ಥಿಗಳು

ದಾವಣಗೆರೆ ಸಿದ್ದಗಂಗಾ ಶಾಲೆಯಲ್ಲಿ ನಡೆದ ‘ಎಂ.ಎಸ್.ಎಸ್. ಕ್ವಿಜ್’
Last Updated 7 ಏಪ್ರಿಲ್ 2019, 15:12 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಎಂ.ಎಸ್‌. ಶಿವಣ್ಣ ಅವರ ಗೌರವಾರ್ಥ ಭಾನುವಾರ ಹಮ್ಮಿಕೊಂಡಿದ್ದ ‘ಎಂ.ಎಸ್‌.ಎಸ್‌ ಲಿಖಿತ ಕ್ವಿಜ್‌–2019’ಗೆ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದರು.

ರಾಜ್ಯ ಪಠ್ಯದಲ್ಲಿ 10ನೇ ತರಗತಿ ಪರೀಕ್ಷೆ ಬರೆದಿದ್ದ ಆರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ವಿಜ್‌ಗೆ ಹೆಸರು ನೋಂದಾಯಿಸಿಕೊಂಡಿದ್ದರು. ಕಲಬುರ್ಗಿ, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಗದಗ, ತುಮಕೂರು, ಪಾವಗಡ, ಶಿವಮೊಗ್ಗ, ರಾಯಚೂರು, ಬೆಳಗಾವಿ, ಬೆಂಗಳೂರು ಹಾಗೂ ದಾವಣಗೆರೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಮಕ್ಕಳು ಬಂದಿದ್ದರು.

ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಬೆಳಿಗ್ಗೆಯಿಂದಲೇ ಮಕ್ಕಳ ಕಲರವ ಕೇಳಿ ಬಂತು. ಪ್ರಥಮ ಬಹುಮಾನ ₹ 25 ಸಾವಿರ ನಗದು ಗೆಲ್ಲುವ ಕನಸು ಹೊತ್ತು ಬಂದಿದ್ದ ಮಕ್ಕಳು ಕ್ವಿಜ್‌ನಲ್ಲಿ ಪಾಲ್ಗೊಂಡು ತಮ್ಮನ್ನು ಅದೃಷ್ಟದ ಪರೀಕ್ಷೆಗೆ ಒಡ್ಡಿಕೊಂಡರು. ದ್ವಿತೀಯ ಬಹುಮಾನ ₹ 15 ಸಾವಿರ ಹಾಗೂ ತೃತೀಯ ಬಹುಮಾನ ₹ 10 ಸಾವಿರ ಮತ್ತು ತಲಾ ₹ 1,000 ನಗದನ್ನು ಒಳಗೊಂಡ 10 ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ. ಮಕ್ಕಳ ಜೊತೆಗೆ ಬಂದಿದ್ದ ಪಾಲಕರೂ ಕ್ವಿಜ್‌ನ ಚಟುವಟಿಕೆಯನ್ನು ಕುತೂಹಲದಿಂದ ವೀಕ್ಷಿಸಿದರು.

ವಿದ್ಯಾರ್ಥಿಗಳಿಗೆ ಕ್ವಿಜ್‌ನಲ್ಲಿ ಉತ್ತರ ಬರೆಯಲು 80 ಕೊಠಡಿಗಳಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ವಿಜ್ಞಾನ ಹಾಗೂ ಗಣಿತದ ತಲಾ 30 ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಒ.ಆರ್‌.ಎಂ. ಶೀಟ್‌ನಲ್ಲಿ ಉತ್ತರ ಬರೆದರು.

ಕ್ವಿಜ್‌ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಜಯಂತ್‌, ವಿಜ್ಞಾನ ಪ್ರಯೋಗದ ಮೂಲಕ ನೊರೆಯ ಬುಗ್ಗೆ ಉಕ್ಕಿಸಿ ಶುಭ ಕೋರಿದರು. ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕ್ವಿಜ್‌ನ ಯಶಸ್ಸಿಗೆ ಸಹಕರಿಸಿದರು. ಹಿರಿಯ ವಿದ್ಯಾರ್ಥಿ ಡಿ.ಎಸ್‌. ಪ್ರಶಾಂತ್‌ ಅವರು ಕ್ವಿಜ್‌ನ ಮೇಲ್ವಿಚಾರಣೆ ಮಾಡಿದರು. ಶಾಲೆಯ ಪಿಯುಸಿ ವಿದ್ಯಾರ್ಥಿಗಳು ಮೆಮೆಂಟೊಗಳನ್ನು ಹಿಡಿದು ಪಥಸಂಚಲನ ನಡೆಸಿದರು. ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್‌. ಹೇಮಂತ್‌ ಉಪಾಹಾರ ವ್ಯವಸ್ಥೆಯನ್ನು ನಿರ್ವಹಿಸಿದ್ದರು.

ವಿದ್ಯಾರ್ಥಿ ವಿಶ್ವಂಭರ ಹಾಗೂ ಅನುಶ್ರೀ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ಸಂಗೀತ ಶಿಕ್ಷಕ ಮಂಜುನಾಥ ತಬಲಾ ಸಾಥ್‌ ನೀಡಿದರು.

ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಹಾಗೂ ಎಂ.ಎಸ್. ಶಿವಣ್ಣ ಅವರ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು.

ಕ್ವಿಜ್‌ನ ಫಲಿತಾಂಶವನ್ನು ವಾರದೊಳಗೆ ಸಂಸ್ಥೆಯ ವೆಬ್‌ಸೈಟ್‌ www.siddaganga.com ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಡಾ. ಜಯಂತ್‌ ತಿಳಿಸಿದ್ದಾರೆ.

ಏಳನೇ ತರಗತಿ ಪರೀಕ್ಷೆ ಬರೆದ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮ ಮಕ್ಕಳಿಗಾಗಿ ‘ಸುವರ್ಣ ಮಹೋತ್ಸವ ಲಿಖಿತ ಕ್ವಿಜ್‌’ ಅನ್ನು ಏಪ್ರಿಲ್‌ 11ರಂದು ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT