ಮಂಗಳವಾರ, ಮೇ 24, 2022
30 °C
ಜಿ.ಪಂ., ತಾ.ಪಂ. ಮೀಸಲಾತಿ ಕರಡು ಪ್ರಕಟ: ಕಾಂಗ್ರೆಸ್‌, ಬಿಜೆಪಿ ಮುಖಂಡರ ಅಸಮಾಧಾನ

ಪ್ರಬಲ ಹಿಂದುಳಿದ ವರ್ಗಗಳಿಗೆ ಸ್ಥಾನ ಶೂನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾಳಿ: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಕ್ಷೇತ್ರಗಳ ಮೀಸಲಾತಿ ಕರುಡು ಪ್ರಕಟಣೆ ಬಗ್ಗೆ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊನ್ನಾಳಿಯಿಂದ ಬೇರ್ಪಟ್ಟ ನ್ಯಾಮತಿ ತಾಲ್ಲೂಕಿಗೆ 3, ಹೊನ್ನಾಳಿಗೆ 4 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹಂಚಿಕೆಯಾಗಿದ್ದು ಒಟ್ಟು 7 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹಾಗೂ ತಲಾ 11 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಮೀಸಲಾತಿ ಕರುಡು ಪ್ರಕಟಿಸಿದೆ.

ಹೊನ್ನಾಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 7 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಬೇಲಿಮಲ್ಲೂರು– ಎಸ್‍ಟಿ ಮಹಿಳೆ, ಕುಂದೂರು ಮತ್ತು ಜೋಗ– 2 ಸಾಮಾನ್ಯ, ಸೊರಟೂರು ಮತ್ತು ಚೀಲೂರು– ಸಾಮಾನ್ಯ (ಮಹಿಳೆ) ಹಾಗೂ ಸಾಸ್ವೆಹಳ್ಳಿ ಮತ್ತು ಬೆಳಗುತ್ತಿ– ಎಸ್‌ಸಿ (ಮಹಿಳೆ)ಗೆ ಮೀಸಲು ಪ್ರಕಟಿಸಲಾಗಿದೆ. ಇದರಿಂದ ಬಹುಸಂಖ್ಯಾತ ಹಿಂದುಳಿದ ವರ್ಗಗಳಿಗೆ ಒಂದೇ ಒಂದು ಸ್ಥಾನ ಮೀಸಲು ಇಟ್ಟಿಲ್ಲ ಎನ್ನುವುದು ಆಕ್ರೋಶಕ್ಕೆ ಕಾರಣವಾಗಿದೆ.

ಹಿಂದುಳಿದ ಅ ವರ್ಗದ ಅಡಿಯಲ್ಲಿ 107 ಜಾತಿಗಳು ಬರುತ್ತವೆ. ಇವುಗಳಲ್ಲಿ ಅಂದಾಜು 1 ಲಕ್ಷಕ್ಕೂ ಅಧಿಕ ಮತದಾರರು ಇದ್ದಾರೆ. ಹೀಗಿದ್ದೂ ಹಿಂದುಳಿದ ವರ್ಗದವರನ್ನು ಸಂಪೂರ್ಣ ಕಡೆಗಣಿಸಿ ಚುನಾವಣಾ ಆಯೋಗ ಕರಡು ಪಟ್ಟಿ ಪ್ರಕಟಿಸಿದೆ ಎಂಬ ದೂರು ಕ್ಷೇತ್ರದಾದ್ಯಂತ ಕೇಳಿ ಬರುತ್ತಿದೆ.

ಅದೇ ರೀತಿ ತಾಲ್ಲೂಕು ಪಂಚಾಯಿತಿ ಮೀಸಲಾತಿಯಲ್ಲೂ ಹೊನ್ನಾಳಿ ತಾಲ್ಲೂಕಿನ 11 ಕ್ಷೇತ್ರಗಳಲ್ಲಿ ಹಿಂದುಳಿದ ಅ ವರ್ಗದ ಮಹಿಳೆಗೆ ಎಚ್. ಕಡದಕಟ್ಟೆ ಕ್ಷೇತ್ರಕ್ಕೆ ಒಂದು ಸ್ಥಾನ ಮತ್ತು
ನ್ಯಾಮತಿ ತಾಲ್ಲೂಕಿನ 11 ಕ್ಷೇತ್ರಗಳ
ಪೈಕಿ ಬೆಳಗುತ್ತಿ ಕ್ಷೇತ್ರಕ್ಕೆ ಹಿಂದುಳಿದ ವರ್ಗದ ಅ ಮಹಿಳೆಗೆ ಒಂದು ಸ್ಥಾನ ಕಲ್ಪಿಸಿದೆ.

ಆದರೆ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಎರಡರಲ್ಲೂ ಒಂದೇ ಒಂದು ಸ್ಥಾನವನ್ನು ಹಿಂದುಳಿದ ಅ ವರ್ಗದ ಪುರುಷರಿಗೆ ಮೀಸಲಿಟ್ಟಿಲ್ಲ. ಇಟ್ಟಿರುವ ಎರಡೂ ಸ್ಥಾನಗಳು ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಮಾತ್ರ. ಇದರ ಹಿಂದೆ ಷಡ್ಯಂತ್ರ ಇದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ. ಸಿದ್ದಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಒಟ್ಟು 34 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಹಿಂದುಳಿದ ವರ್ಗದ ಇಬ್ಬರು ಮಹಿಳೆಯರಿಗೆ ಹಾಗೂ ಒಂದು ಸ್ಥಾನವನ್ನು ಪುರುಷರಿಗೆ ಮೀಸಲು ಇಡಲಾಗಿದೆ. ಇದರರ್ಥ ಇಡೀ ಜಿಲ್ಲೆಯಲ್ಲಿ ಹಿಂದುಳಿದ ವರ್ಗದವರನ್ನು ತುಳಿಯುವ ಹುನ್ನಾರ ನಡೆದಿದೆ ಎಂದು ಅವರು ದೂರಿದ್ದಾರೆ.

ಪ್ರಬಲ ಜಾತಿಗಳು ಪೈಪೋಟಿ ಮಾಡದಂತೆ ತಡೆಯೊಡ್ಡುವ ಹುನ್ನಾರವನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಉದ್ದೇಶಪೂರ್ವಕವಾಗಿ ಮಾಡಿಸಿದ್ದಾರೆ. ಮೀಸಲಾತಿ
ಯಿಂದ ಎಲ್ಲಾ ವರ್ಗಕ್ಕೂ ನ್ಯಾಯ ಸಿಗಬೇಕು. ಆದರೆ, ಇಲ್ಲಿ ನ್ಯಾಯ ಎಲ್ಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.

‘ಸರ್ಕಾರದ ಒತ್ತಡಕ್ಕೆ ಮಣಿದು ಬೇಕಾಬಿಟ್ಟಿಯಾಗಿ ಮೀಸಲು ನಿರ್ಧಾರ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ, ಇದೇ ಅಂತಿಮವಲ್ಲ. ಇದು ಕೇವಲ ಕರಡು ಪಟ್ಟಿ ಅಷ್ಟೇ.
ಇದಕ್ಕೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. ಕಾದು ನೋಡಬೇಕು’ ಎನ್ನುತ್ತಾರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ.

‘ಮೀಸಲಾತಿ ಕರಡು ಪಟ್ಟಿ ಸಂಪೂರ್ಣ ಲೋಪದೋಷದಿಂದ ಕೂಡಿದೆ. ಸರ್ಕಾರದ ಮಟ್ಟದಲ್ಲಿಯೇ ಇದರ ಬದಲಾವಣೆಯ ಪ್ರಯತ್ನ ನಡೆದಿದೆ. ಇದು ನಮ್ಮ ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲೂ ಆಗಿದೆ. ಬೊಮ್ಮಾಯಿ ಪ್ರತಿನಿಧಿಸುವ ಕ್ಷೇತ್ರದಲ್ಲೂ ಆಗಿದೆ. ಹೀಗಾಗಿ ಇದು ಅಂತಿಮವಲ್ಲ’ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

‘ಪ್ರಸ್ತುತ ಮೀಸಲಾತಿ ಕರಡು ಪಟ್ಟಿಯಿಂದ ಹಿಂದುಳಿದ ವರ್ಗಗಳಿಗೆ ಸಾಕಷ್ಟು ಅನ್ಯಾಯ ಆಗಿದೆ ಎಂದು ಶಾಸಕ ರೇಣುಕಾಚಾರ್ಯ ಅವರ ಗಮನಕ್ಕೆ ತಂದಿದ್ದೇನೆ. ಈ ಕರಡು ಪಟ್ಟಿಗೆ ನಮ್ಮ ಕಾರ್ಯಕರ್ತರೂ ಆಕ್ಷೇಪಣೆ ಸಲ್ಲಿಸಿದ್ದಾರೆ’ ಎಂದು ಬಿಜೆಪಿ ಮುಖಂಡ, ಕೆ.ಪಿ. ಕುಬೇರಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.