ಭಾನುವಾರ, ಆಗಸ್ಟ್ 25, 2019
26 °C
ಕಲ್ಯಾಣ ದರ್ಶನ ಪ್ರವಚನ ಉದ್ಘಾಟನಾ ಸಮಾರಂಭ

ಸಮಕಾಲೀನ ಸಮಸ್ಯೆಗೆ ಬಸವತತ್ವ ಪರಿಹಾರ: ಬಸವಪ್ರಭು ಸ್ವಾಮೀಜಿ

Published:
Updated:
Prajavani

ದಾವಣಗೆರೆ: ‘ಇಂದಿನ ಸಮಕಾಲೀನ ಸಮಸ್ಯೆಗಳಾದ ದ್ವೇಷಾಸೂಯೆ, ಅಸಹಿಷ್ಣುತೆ, ಜಾತೀಯತೆ, ನಿರುದ್ಯೋಗ, ಅಸಮಾನತೆ, ದುಶ್ಚಟಗಳಿಗೆ ಬಸವತತ್ವವೇ ಪರಿಹಾರ’ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ಬಸವಕೇಂದ್ರ, ಮುರುಘರಾಜೇಂದ್ರ ವಿರಕ್ತಮಠ, ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್‌ನಿಂದ ಶುಕ್ರವಾರ ನಡೆದ ಕಲ್ಯಾಣ ದರ್ಶನ ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘12ನೇ ಶತಮಾನದಲ್ಲಿ ಬಸವಣ್ಣನವರು ಕಟ್ಟಿದ ಕಲ್ಯಾಣ ರಾಜ್ಯವು ಪ್ರಸ್ತುತ. ಸರ್ವರಿಗೂ ಒಳಿತನ್ನು ಬಯಸುವುದೇ ಕಲ್ಯಾಣ. ವ್ಯಕ್ತಿಯ ಉದ್ಧಾರ ಹಾಗೂ ಜಗತ್ತು, ಸಮಾಜ, ದೇಶದ ಪ್ರಗತಿಯೇ ಕಲ್ಯಾಣದ ಧ್ಯೇಯ. ಬಸವಾದಿ ಶಿವಶರಣರ ಜೀವನವೇ ಆದರ್ಶ. ಅವರ ಅನುಭವವವೇ ವಚನ ಸಾಹಿತ್ಯವಾಗಿ ಮೂಡಿಬಂದಿದೆ’ ಎಂದು ಹೇಳಿದರು.

‘ಜಾತಿರಹಿತ, ವರ್ಗರಹಿತ, ವರ್ಣರಹಿತ, ಲಿಂಗಬೇಧ ಹಾಗೂ ವಯೋಭೇದವಿಲ್ಲದ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡುವ ಆದರ್ಶ ಸಮಾಜವನ್ನು ಈ ದೇಶದ ನಾಗರಿಕರು ನಿರ್ಮಿಸಬೇಕಿದ್ದು, ಈ ಹಿನ್ನೆಲೆಯಲ್ಲಿ ಕಲ್ಯಾಣ ಪ್ರವಚನ ಏರ್ಪಡಿಸಲಾಗಿದೆ. ಕಲ್ಯಾಣ ಪ್ರವಚನದಿಂದ ಸಂಕುಚಿತ ಮನಸ್ಸು ವಿಶಾಲವಾಗುತ್ತದೆ. ದ್ವೇಷ, ಸ್ವಾರ್ಥ, ಮತ್ಸರ, ಅಹಂಕಾರ ದೂರವಾಗಿ ದಯೆ ಪ್ರೀತಿ, ಶ್ರದ್ಧೆ, ಅರಿವಿನಿಂದ ತುಂಬಿ ತುಳುತ್ತದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಅನುಭಾವಿ ಪ.ಮ. ಗುರುಲಿಂಗಯ್ಯ, ‘ಬಸವತತ್ವಕ್ಕೆ ದಾವಣಗೆರೆ ರಾಜಧಾನಿ, ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ 1913ರಲ್ಲಿ ಬಸವಣ್ಣನ ಜಯಂತಿಯನ್ನು ಆಚರಿಸಿದ್ದು ದಾವಣಗೆರೆಯಲ್ಲಿ. 1911ರಲ್ಲಿ ವಿರಕ್ತ ಮಠದಿಂದ ಆರಂಭವಾದ 109ನೇ ವರ್ಷದ ಶ್ರಾವಣ ಮಾಸದ ಕಾರ್ಯಕ್ರಮ ಇದು’ ಎಂದು ಹೇಳಿದರು.

‘ಕಲ್ಯಾಣದಲ್ಲಿ ಆರಂಭವಾದ ಸಂಸತ್ತು ಜಗತ್ತಿನಲ್ಲೇ ಮೊದಲನೆಯದು. ಅಲ್ಲಿ ಮಹಾರಾಜರಿಂದ ಹಿಡಿದು ಸಾಮಾನ್ಯರೂ ಇದ್ದರು. ಎಲ್ಲಾ ಜಾತಿಯವರು ಪಾಲ್ಗೊಂಡಿದ್ದರು. ಇಲ್ಲಿ ಒಂದು ತಿಂಗಳು ನಡೆಯುವ ಕಲ್ಯಾಣದ ದರ್ಶನವನ್ನು ಶ್ರವಣ ಮಾಡಿ ಮನನ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರವಚನ ನೀಡಿದ ಅಧ್ಯಾತ್ಮ ಚಿಂತಕ ಚನ್ನಬಸವ ಗುರೂಜಿ ‘12ನೇ ಶತಮಾನದಲ್ಲಿ ಶರಣರು ಉತ್ಕೃಷ್ಠ ಸಾಧನೆ ಮಾಡಿದ್ದು, ಶರಣರ ವಚನಗಳು ಬಾಳಿಗೆ ಬೆಳಕಾಗಿವೆ. ಆ ವಚನಗಳು ಹೃದಯ ಮುಟ್ಟುವ ಭಾಷೆಯಲ್ಲಿ ಇದ್ದು, ಅವುಗಳನ್ನು ಓದಬೇಕು’ ಎಂದು ಸಲಹೆ ನೀಡಿದರು.

ದಾವಣಗರೆ ಅರ್ಬನ್‌ ಬ್ಯಾಂಕ್‌ನ ಬೆಳ್ಳೂಡಿ ಮಂಜುನಾಥ್, ದೊಡ್ಡಪ್ಪ, ಜಯಕುಮಾರ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಡಿ.ಬಸವರಾಜ್‌ ಇದ್ದರು. ಎಂ.ಜಿ. ಮುರುಗೇಶ್ ಸ್ವಾಗತಿಸಿದರು.

Post Comments (+)