ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ನೇಮಕಾತಿ ಪರೀಕ್ಷೆ ಸುಸೂತ್ರ

3 ಕೇಂದ್ರಗಳಲ್ಲಿ ನಡೆದ ಪರೀಕ್ಷೆ: 158 ಮಂದಿ ಗೈರು
Last Updated 22 ಮೇ 2022, 2:34 IST
ಅಕ್ಷರ ಗಾತ್ರ

ದಾವಣಗೆರೆ: ಬಿಗಿ ಭದ್ರತೆ ನಡುವೆ ನಗರದ 3 ಕೇಂದ್ರಗಳಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆಗಳು ಸುಗಮವಾಗಿ ನಡೆದವು.

ಪಿಎಸ್‌ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳಿಂದ ಎಚ್ಚೆತ್ತ ಶಿಕ್ಷಣ ಇಲಾಖೆ ಬಿಗಿ ಭದ್ರತೆ ಒದಗಿಸಿತ್ತು. ಪರೀಕ್ಷಾ ಕೇಂದ್ರಗಳ ಆವರಣ ಮತ್ತು ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಲೋಹಶೋಧಕಗಳನ್ನು ಅಳವಡಿಸಲಾಗಿತ್ತು. ಕಿವಿಯಲ್ಲಿ ಯಾವುದಾದರೂ ಉಪಕರಣವಿದೆಯಾ ಎಂಬುದನ್ನು ಪರೀಕ್ಷಿಸಲು ಒಂದೊಂದು ಕೇಂದ್ರಕ್ಕೆ ಇಬ್ಬರು ಇಎನ್‌ಟಿ ವೈದ್ಯರನ್ನು ನಿಯೋಜಿಸಲಾಗಿತ್ತು. ಪ್ರತಿಯೊಬ್ಬ ಅಭ್ಯರ್ಥಿಯನ್ನು ತಪಾಸಣೆ ಬಳಿಕವೇ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಲಾಯಿತು.

ಬೆಳಿಗ್ಗೆ ನಡೆದ ಮೊದಲನೇ ಪತ್ರಿಕೆಗೆ 602 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, 158 ಮಂದಿ ಗೈರು ಹಾಜರಾಗಿದ್ದರು. ಬಾಲಕರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ 202 ಅಭ್ಯರ್ಥಿಗಳ ಪೈಕಿ 57 ಮಂದಿ ಗೈರು ಹಾಜರಾಗಿದ್ದರು. ರಾಜನಹಳ್ಳಿ ಸೀತಮ್ಮ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ 200 ಅಭ್ಯರ್ಥಿಗಳು ಹಾಜರಾಗಬೇಕಿತ್ತು, 37 ಮಂದಿ ಗೈರು ಹಾಜರಾಗಿದ್ದರು.
ಮೋತಿ ವೀರಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 200 ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕಿತ್ತು, ಆ ಪೈಕಿ 64 ಮಂದಿ ಗೈರು ಹಾಜರಾಗಿದ್ದರು.

ಮಧ್ಯಾಹ್ನ ನಡೆದ 2ನೇ ಪತ್ರಿಕೆಗೆ 120 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದು, ಅವರಲ್ಲಿ 41 ಮಂದಿ ಗೈರು ಹಾಜರಾಗಿದ್ದರು.

ಪ್ರವೇಶ ದ್ವಾರದ ಬಳಿ ಸ್ಯಾನಿಟೈಸರ್ ಹಾಕಿ, ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಲಾಯಿತು.
ಅಭ್ಯರ್ಥಿಗಳು ತಂದಿದ್ದ ಬ್ಯಾಗ್, ವಾಚ್, ಮೊಬೈಲ್, ಹಣವನ್ನು ಸಿಬ್ಬಂದಿ ವಶಕ್ಕೆ ಪಡೆದರು. ಪಾದರಕ್ಷೆಗಳನ್ನು ಕೊಠಡಿಯ ಹೊರಗೆ ಬಿಟ್ಟು ಹೋಗುವಂತೆ ಸೂಚಿಸಲಾಗಿತ್ತು.

ನಗರದ ಮೋತಿ ವೀರಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿ ಮಾತನಾಡಿ, ಅಕ್ರಮ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗರಾಜ, ಡಿಡಿಪಿಐ ಜಿ.ಆರ್. ತಿಪ್ಪೇಶಪ್ಪ ಅವರೂ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT