ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿತರಕರೇ ಪತ್ರಿಕೆಯ ಬೆನ್ನೆಲುಬು: ಸಂಸದ ಜಿ.ಎಂ. ಸಿದ್ದೇಶ್ವರ

ಪತ್ರಿಕಾ ವಿತರಕರ ಸಮಾವೇಶ ಹಾಗೂ ಕಾರ್ಯಕಾರಣಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ
Last Updated 4 ಏಪ್ರಿಲ್ 2022, 4:39 IST
ಅಕ್ಷರ ಗಾತ್ರ

ದಾವಣಗೆರೆ: ಓದುಗರ ಮನೆ ಬಾಗಿಲಿಗೆ ಪತ್ರಿಕೆ ತಲುಪಿಸುವ ವಿತರಕರು ಪತ್ರಿಕೆ ಬೆನ್ನೆಲುಬು ಎಂದು ಸಂಸದ ಡಾ.ಜಿ.ಎಂ. ಸಿದ್ದೇಶ್ವರ ಹೇಳಿದರು.

ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ದಾವಣಗೆರೆ ನಗರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘಗಳ ಆಶ್ರಯದಲ್ಲಿ ಭಾನುವಾರ ನಗರದ ಐಟಿಐ ಕಾಲೇಜು ಆವರಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಪತ್ರಿಕಾ ವಿತರಕರ ಸಮಾವೇಶ ಹಾಗೂ ಕಾರ್ಯಕಾರಣಿ ಉದ್ಘಾಟಿಸಿ ಅವರು ಮಾತನಾಡಿದರು.

‘ಪತ್ರಿಕೆಗಳ ವಿತರಕರು ಪತ್ರಿಕೋದ್ಯಮದಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. ಕೋವಿಡ್ ವೇಳೆ ಜೀವದ ಹಂಗು ತೊರೆದು ಓದುಗರಿಗೆ ಪತ್ರಿಕೆಗಳನ್ನು ತಲುಪಿಸಿದ್ದರು. ಅಂಥ ವಿತರಕರಿಗೆ ಯಾರೂ ಸಹಕಾರ ನೀಡಲಿಲ್ಲ. ನಮ್ಮ ಸರ್ಕಾರವು ನಿಮ್ಮ ಮನವಿಯ ಮೇರೆಗೆ ನಿಮ್ಮನ್ನು ಅಸಂಘಟಿತ ಕಾರ್ಮಿಕರನ್ನಾಗಿ ಪರಿಗಣಿಸಿದೆ’ ಎಂದು ತಿಳಿಸಿದರು.

‘ಮುಂಜಾನೆ ಪತ್ರಿಕೆ ವಿತರಣೆಗೆ ಸರಿಯಾದ ಸ್ಥಳ ನಿಗದಿ ಮಾಡಬೇಕು. ಪತ್ರಿಕಾ ವಿತರಕರು ಅಪಘಾತಕ್ಕೆ ಉತ್ತಾದರೆ ₹ 2 ಲಕ್ಷ, ಮರಣ ಹೊಂದಿದರೆ ₹ 5 ಲಕ್ಷ ಪರಿಹಾರ ನೀಡಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಧನ ನೀಡಬೇಕು ಇನ್ನಿತರೇ ಬೇಡಿಕೆಗಳಿವೆ. ಅವುಗಳನ್ನು ಈಡೇರಿಸುವ ಪ್ರಯತ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಶಾಸಕ ಎಸ್.ಎ. ರವೀಂದ್ರನಾಥ ಮಾತನಾಡಿ, ‘ಬೇಕಾದವರಿಗೆ ಬೇಗನೇ ಪತ್ರಿಕೆಗಳನ್ನು ತಲುಪಿಸುತ್ತೀರಿ. ಬೇಡವಾದವರಿಗೆ ಸುತ್ತಿಕೊಂಡು ಬಂದು ಕೊನೆಗೆ ಪತ್ರಿಕೆ ಹಾಕುತ್ತೀರಿ. ಹೀಗೆ ತಾರತಮ್ಯ ಮಾಡದೆ ಎಲ್ಲರಿಗೆ ನ್ಯಾಯಯುತವಾಗಿ ಪತ್ರಿಕೆಗಳನ್ನು ತಲುಪಿಸಬೇಕು. ನೀವು ಸಂಘಟಿತರಾಗಿ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆದು ನ್ಯಾಯ ಪಡೆಯಬೇಕು’ ಎಂದು ಸಲಹೆ ನೀಡಿದರು.

ಪಾಲಿಕೆ ಮಾಜಿ ಮೇಯರ್ ಎಸ್.ಟಿ. ವೀರೇಶ್, ‘ಸಮಾಜವನ್ನು ತಿದ್ದುವ ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವ ಪತ್ರಿಕಾ ವಿತರಕರ ವೃತ್ತಿ ಶ್ರೇಷ್ಠವಾದುದು. ಪತ್ರಿಕೆ ವಿತರಣೆ ಮಾಡುವುದು ಕನಿಷ್ಠ ಎಂಬ ಕೀಳರಿಮೆಯಿಂದ ಹೊರ ಬರಬೇಕು’ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಕೆ. ಶಂಭುಲಿಂಗ, ‘ರಾಜ್ಯದಲ್ಲಿ 88 ಲಕ್ಷ ಪತ್ರಿಕೆಗಳನ್ನು ಮಳೆ, ಗಾಳಿಯನ್ನು ಲೆಕ್ಕಿಸದೆ ಓದುಗರಿಗೆ ತಲುಪಿಸುತ್ತಾರೆ. ಮನೆಯಲ್ಲಿ ಸಾವು, ನೋವು ಆಗಿದ್ದರೂ ಪತ್ರಿಕೆ ವಿತರಣೆ ನಿಲ್ಲಿಸದೇ ಮುಖ್ಯ ಪಾತ್ರ ವಹಿಸುತ್ತಾರೆ. ಆದರೆ ಅವರು ಮಾತ್ರ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಯಾವುದೇ ನ್ಯಾಯ ಸಿಗುತ್ತಿಲ್ಲ. ಕೋವಿಡ್ ವೇಳೆಯಲ್ಲಿ ನಮ್ಮ ಸಂಕಷ್ಟಗಳಿಗೆ ಯಾರೂ ಸ್ಪಂದಿಸಲಿಲ್ಲ’ ಎಂದು ವಿಷಾದಿಸಿದರು.

ಜನತಾ ವಾಣಿ ಪತ್ರಿಕೆ ಸಂಪಾದಕ ಎಂ.ಎಸ್. ವಿಕಾಸ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ ಹನಗವಾಡಿ, ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಪತ್ರಕರ್ತ ವೀರಪ್ಪ ಎಂ.ಬಾವಿ, ದಾವಣಗೆರೆ ನಗರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಂದ್ರು, ಎಚ್. ಅರುಣ್ ಅವರೂ ಇದ್ದರು.

ಕಾಲ್ನಡಿಗೆ ಜಾಥಾ

ಕಾರ್ಯಕ್ರಮದ ಪ್ರಯುಕ್ತ ಜಯದೇವ ವೃತ್ತದಿಂದ ಕಾಲ್ನಡಿಗೆ ಜಾಥಾ ನಡೆಯಿತು. ಪ್ರವಾಸಿ ಮಂದಿರ ರಸ್ತೆ, ಪಿ.ಬಿ.ರಸ್ತೆ, ಹಳೇ ಬಸ್ ನಿಲ್ದಾಣ, ಗಾಂಧಿ ಸರ್ಕಲ್, ಅಶೋಕ ರಸ್ತೆ, ಹದಡಿ ರಸ್ತೆ ಮೂಲಕ ತೆರಳಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಬಳೀಕ ವಿದ್ಯಾರ್ಥಿಭವನದ ವರೆಗೆ ಸಾಗಿತು.

ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಕೆ. ಶಂಭುಲಿಂಗ, ನಗರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್. ಚಂದ್ರು, ಖಜಾಂಚಿ ಅರುಣಕುಮಾರ, ಬಂಕಾಪುರದ ಚನ್ನಬಸಪ್ಪ, ರಮೇಶ ವತನ್, ನಿಂಗಪ್ಪ, ಕೃಷ್ಣಮೂರ್ತಿ, ಮಂಜುನಾಥ, ಎಸ್.ಕೆ. ಪ್ರಕಾಶ, ದಿನೇಶ ಬಾಬು, ರವಿಪ್ರಸಾದ, ಶಿವು, ಪ್ರಕಾಶ, ಬಸವರಾಜ, ಬಿ.ಲೋಕೇಶ, ಸುಧಾಕರ, ಅಣ್ಣಪ್ಪ, ಹರೀಶ, ಆನಂದ, ಪ್ರದೀಪ, ಪಿ.ಪ್ರಕಾಶ, ಆನಂದ, ಕುಮಾರಸ್ವಾಮಿ, ಶಂಕರ ಸಹಿತ ವಿವಿಧ ಜಿಲ್ಲೆಗಳ ಪತ್ರಿಕಾ ವಿತರಕರು ಜಾಥಾದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT