ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ಪ್ರದರ್ಶಿಸುವ ಕಾಲ ಬರಲಿದೆ: ಶಾಮನೂರು

ಅಖಿಲ ಭಾರತ ವೀರಶೈವ ಮಹಾಸಭಾ ನಗರ ಮಹಿಳಾ ಘಟಕ ಉದ್ಘಾಟನೆ
Last Updated 26 ನವೆಂಬರ್ 2020, 12:43 IST
ಅಕ್ಷರ ಗಾತ್ರ

ದಾವಣಗೆರೆ: ‘ವೀರಶೈವ ಸಮಾಜದ ಶಕ್ತಿ ಏನು ಎಂಬುದನ್ನು ತೋರಿಸುವ ಕಾಲ ಬರಲಿದೆ. ಹೀಗಾಗಿ ಹೆಚ್ಚು ಸಂಘಟನೆ ಮಾಡುವ ಮೂಲಕ ಸಮುದಾಯದ ಬಲ ಪ್ರದರ್ಶಿಸೋಣ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದ ಶ್ರೀಶೈಲ ಮಠದಲ್ಲಿ ಗುರುವಾರ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ನಗರ ಮಹಿಳಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವೀರಶೈವ ಸಮುದಾಯದ ಉಪ ಪಂಗಡಗಳೆಲ್ಲವೂ ಒಂದೇ ಆಗಿವೆ. ಸರ್ಕಾರ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನೂ ಸ್ಥಾಪಿಸಿದೆ. ಹೀಗಾಗಿ ಈಗ ನಮ್ಮ ಸಮುದಾಯವನ್ನು ಇನ್ನಷ್ಟು ಹೆಚ್ಚು ಸಂಘಟಿಸಬೇಕು. ಮಹಿಳಾ ಘಟಕದ ಕಾರ್ಯಕ್ರಮಗಳಲ್ಲಿ ಪುರುಷರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ನಗರದಲ್ಲಿ ವೀರಶೈವ ಮಹಾಸಭಾಕ್ಕೆ ಜಾಗ ಲಭಿಸಿದೆ. ಅಲ್ಲಿ ಕಟ್ಟಡ ನಿರ್ಮಿಸಲು ಸಮುದಾಯದವರಿಂದ ಹಣ ಸಂಗ್ರಹಿಸಬೇಕು’ ಎಂದು ಶಾಮನೂರು ಹೇಳಿದರು.

ಘಟಕವನ್ನು ಉದ್ಘಾಟಿಸಿದ ವೀರಶೈವ ಮಹಾಸಭಾದ ಉಪಾಧ್ಯಕ್ಷ ಅಥಣಿ ವೀರಣ್ಣ, ‘ಲಿಂಗಾಯತ ಸಮುದಾಯದ ಹಲವರು ಮುಖ್ಯಮಂತ್ರಿಯಾಗಿದ್ದರೂ ನಮ್ಮ ಸಮುದಾಯ ಇನ್ನೂ ಹಿಂದುಳಿದಿದೆ. ಶಾಮನೂರು ಶಿವಶಂಕರಪ್ಪ ಅವರು ಮಹಾಸಭಾದ ಅಧ್ಯಕ್ಷರಾದ ಬಳಿಕ ಸಮುದಾಯದ ಕೆಲಸಗಳು ನಡೆಯುತ್ತಿವೆ’ ಎಂದರು.

‘ಸದ್ಯೋಜಾತ ಮಠ ಅಥವಾ ದೊಡ್ಡಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಮಹಿಳಾ ಘಟಕದವರಿಗೆ ಕಾರ್ಯಕ್ರಮ ನಡೆಸಲು ಉಚಿತವಾಗಿ ಸ್ಥಳಾವಕಾಶ ನೀಡಲಾಗುವುದು. ಶಾಮನೂರು ರಸ್ತೆಯಲ್ಲಿ 10 ಸಾವಿರ ಚದರ್‌ ಅಡಿ ಜಾಗ ದೂಢಾದಿಂದ ಮಹಾಸಭಾಕ್ಕೆ ಮಂಜೂರಾಗಿದ್ದು, ಅಲ್ಲಿ ಕಟ್ಟಡ ನಿರ್ಮಿಸಬೇಕು’ ಎಂದು ಹೇಳಿದರು.

ಇನ್ನೊಬ್ಬ ಉಪಾಧ್ಯಕ್ಷ ಅಣಬೇರು ರಾಜಣ್ಣ, ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನು ರಚಿಸಿ, ₹ 500 ಕೋಟಿ ಅನುದಾನ ನೀಡಿದ್ದಾರೆ. ಸಮುದಾಯದವರ ಬೆಳವಣಿಗೆಗೆ ಆ ಹಣವನ್ನು ಬಳಕೆ ಮಾಡಿಕೊಳ್ಳಬೇಕು. ವೀರಶೈವ ಹಾಗೂ ಲಿಂಗಾಯತ ಒಂದೇ ಎಂದುಕೊಂಡಾಗ ನಮ್ಮ ಸಂಘಟನೆಗೆ ಅರ್ಥ ಬರುತ್ತದೆ’ ಎಂದು ಹೇಳಿದರು.

ಮೇಯರ್‌ ಬಿ.ಜಿ. ಅಜಯ್‌ಕುಮಾರ್‌, ‘ವೀರಶೈವ ಧರ್ಮದಲ್ಲಿ ಈ ಹಿಂದೆ ಸಂಘಟನೆಯ ಕೊರತೆ ಇತ್ತು. ಈಗ ಆ ಸಮಸ್ಯೆ ಇಲ್ಲ. ಆದರೆ, ಒಳ ಪಂಗಡಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಒಬ್ಬ ಮೇಲಕ್ಕೆ ಹೋಗುತ್ತಿದ್ದರೆ ಕಾಲು ಎಳೆಯಲು ನೋಡುತ್ತಾರೆ. ಅದರ ಬದಲು ಈತ ನಮ್ಮ ಸಮುದಾಯದವನೇ ಎಂದುಕೊಂಡು ಸಹಕಾರ ನೀಡಿದರೆ ನಮ್ಮ ಸಮುದಾಯವೂ ಬೆಳೆಯುತ್ತದೆ’ ಎಂದರು.

ಮಹಿಳಾ ಘಟಕ ಖಾಸಗಿ ಮಳಿಗೆಯಲ್ಲಿ ಕಚೇರಿ ನಡೆಸುವುದಾದರೆ ಒಂದು ವರ್ಷದ ಬಾಡಿಗೆ ಹಣವನ್ನು ನೀಡುವುದಾಗಿ ಮೇಯರ್‌ ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್‌, ‘ಆಧುನಿಕ ಮಹಿಳೆಯು ತಾಯಿ, ತಂಗಿ, ಪತ್ನಿಯ ಜವಾಬ್ದಾರಿಯ ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಕೊಳ್ಳುತ್ತಿದ್ದಾಳೆ. ಮಹಿಳಾ ಘಟಕವು ಒಳ್ಳೆಯ ಕೆಲಸಗಳನ್ನು ಮಾಡಲಿ’ ಎಂದು ಆಶಿಸಿದರು.

ಪಾಲಿಕೆ ಸದಸ್ಯ ಎಸ್‌.ಟಿ. ವೀರೇಶ್‌, ‘ನಮ್ಮ ಸಮಾಜದ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೂ ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು.

ನಗರ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ವಾಲಿ ಅಧ್ಯಕ್ಷತೆ ವಹಿಸಿದ್ದರು. ಮಹಾಸಭಾದ ಉಪಾಧ್ಯಕ್ಷೆ ವಿನುತಾ ರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನಿ ಶಿವಕುಮಾರ್‌ ಹಾಜರಿದ್ದರು. ರೂಪಾ ಶಿವಕುಮಾರ್‌ ಸ್ವಾಗತಿಸಿದರು. ಮಂಜುಳಾ ಪ್ರಾರ್ಥಿಸಿದರು.

**

ಪ್ರತಿ ನಗರದಲ್ಲೂ ಮಹಾಸಭಾದ ಮಹಿಳಾ ಘಟಕಗಳನ್ನು ಸ್ಥಾಪಿಸಬೇಕು. ಧಾರ್ಮಿಕ ಆಚಾರ–ವಿಚಾರಗಳನ್ನು ಮನೆಯವರಲ್ಲಿ ಹಾಗೂ ಮಕ್ಕಳಲ್ಲಿ ಬಿತ್ತಬೇಕು.

- ಓಂಕಾರ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT