ಮಂಗಳವಾರ, ಜೂಲೈ 7, 2020
28 °C
ನಗರದ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆ: ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ

ಪಿಜಿ ಸಿಇಟಿ ಪರೀಕ್ಷೆ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪದ್ಮ ಬಸವಂತಪ್ಪ

ದಾವಣಗೆರೆ: ನಗರದ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಎಂಬಿಎ, ಎಂಸಿಎ, ಎಂಇ, ಎಂಟೆಕ್ ಮತ್ತು ಮಾಸ್ಟರ್‌ ಆಫ್‌ ಆರ್ಕೆಟೆಕ್ಟ್ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆಗಳು ನಡೆಯಲಿದ್ದು, ಎಲ್ಲ ಸಿದ್ಧತೆ ನಡೆಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಜುಲೈ 14ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2.30ರವರೆಗೆ ಎಂಟೆಕ್ ಟೈಪ್ ‘ಬಿ’, ಮಧ್ಯಾಹ್ನ 2ರಿಂದ 4.30ರವರೆಗೆ ಎಂ.ಟೆಕ್ ಟೈಪ್ ‘ಎ’ ಕೋರ್ಸ್‌ಗಳಿಗೆ ಸಾಮಾನ್ಯ ಪರೀಕ್ಷೆ ನಡೆಯಲಿದೆ’ ಎಂದರು.

15ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಎಂಸಿಎ, ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ಎಂಬಿಎ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆ ಇದೆ. ಆದರೆ, ಡಿಸಿಇಟಿಗೆ ಮಾತ್ರ 15 ರಂದು ಬೆಳಿಗ್ಗೆ 10.00ರಿಂದ ಮಧ್ಯಾಹ್ನ 1 ರವರೆಗೆ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.

ನಗರದ ಮೋತಿವೀರಪ್ಪ ಸರ್ಕಾರಿ ಕಾಲೇಜು, ಸರ್ಕಾರಿ ಬಾಲಕರ ಪಿಯು ಕಾಲೇಜು, ಸೀತಮ್ಮ ಸರ್ಕಾರಿ ಪಿಯು ಕಾಲೇಜು, ಎಕ್ಸ್-ಮುನ್ಸಿಪಲ್ ಸರ್ಕಾರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.  ವಿದ್ಯಾರ್ಥಿಗಳು ಯಾವುದೇ ರೀತಿಯ ವಾಚ್ ಕಟ್ಟಿಕೊಂಡು ಬರುವಂತಿಲ್ಲ. ಎಲ್ಲಾ ಕೊಠಡಿಗಳಿಗೆ ಗೋಡೆ ಗಡಿಯಾರ ವ್ಯವಸ್ಥೆ ಮಾಡಲಾಗುವುದು. 14ಕ್ಕೆ ನಾನ್ ಪ್ರೋಗ್ರಾಮಬಲ್ ಕ್ಯಾಲ್‌ಕ್ಯುಲೇಟರ್ ಹೊರತುಪಡಿಸಿ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರಲು ಅವಕಾಶವಿಲ್ಲ. 15ಕ್ಕೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶವಿಲ್ಲ. ಮೊಬೈಲ್ ತರುವಂತಿಲ್ಲ. ಪರೀಕ್ಷಾ ಕೊಠಡಿ ಪರಿವೀಕ್ಷಕರು ಕೂಡ ಮೊಬೈಲ್‌ಗಳನ್ನು ಕೇಂದ್ರಕ್ಕೆ ತರುವಂತಿಲ್ಲ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಆಧಾರ್, ಪಾನ್‌ ಕಾರ್ಡ್‌, ಡಿಎಲ್, ಚುನಾವಣಾ ಐಡಿ ಸೇರಿದಂತೆ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಕೇಂದ್ರಕ್ಕೆ ತರಬೇಕು. ಕೊಠಡಿ ಪರಿವೀಕ್ಷಕರಿಗೆ ಸೂಕ್ತ ತರಬೇತಿ ನಿಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಡಿಡಿಪಿಯು ಸಾವಿತ್ರಮ್ಮ ಮಾತನಾಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ

ಜುಲೈ14 ಮತ್ತು 15ರಂದು ಪಿಜಿಸಿಇಟಿ ಪ್ರವೇಶ ಪರೀಕ್ಷೆ ನಡೆಯಲಿರುವ ನಗರದ ನಾಲ್ಕು ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್‌ ಆದೇಶಿಸಿದ್ದಾರೆ.  ಹಾಗೆಯೇ ಪರೀಕ್ಷಾ ಕೇಂದ್ರಗಳ ಸುತ್ತಲಿನ ಜೆರಾಕ್ಸ್ ಅಂಗಡಿಗಳನ್ನೂ ಪರೀಕ್ಷಾ ಅವಧಿಯಲ್ಲಿ ಮುಚ್ಚುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

                                 ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ವಿವರ

ವಿಷಯವಿದ್ಯಾರ್ಥಿಗಳ ಸಂಖ್ಯೆ
ಎಂಟೆಕ್ ಟೈಪ್ ‘ಬಿ’16
ಎಂಟೆಕ್ ಟೈಪ್ ‘ಎ’736
ಎಂಸಿಎ272
ಎಂಬಿಎ1,584
ಡಿಸಿಇಟಿ1,456

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು