ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೀಠಗಳು ಒಗ್ಗಟ್ಟಾದವು: ಸಮಾಜದವರು ಒಂದಾಗಿ’

29ರಂದು ದಾವಣಗೆರೆಯಲ್ಲಿ ಸಮಾವೇಶ: ವಚನಾನಂದ ಶ್ರೀಗಳು ಭಾಗಿ
Last Updated 27 ಜನವರಿ 2021, 3:24 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ದಾವಣಗೆರೆ: ‘ಪಂಚಮಸಾಲಿ ಸಮಾಜಕ್ಕೆ ‘2ಎ’ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಹರಪನಹಳ್ಳಿಯಲ್ಲಿ ಇಬ್ಬರು ಶ್ರೀಗಳು ವೇದಿಕೆ ಹಂಚಿಕೊಳ್ಳುವ ಮೂಲಕ ಪಂಚಮಸಾಲಿ ಸಮಾಜದ ಪೀಠಗಳು ಒಂದಾಗಬೇಕು ಎಂಬ ಬಹುದಿನದ ಬೇಡಿಕೆ ಈಡೇರಿದಂತಾಗಿದೆ’ ಎಂದುಸ್ವಾಗತ ಸಮಿತಿ ಗೌರವ ಅಧ್ಯಕ್ಷ ಎಚ್.ಎಸ್. ನಾಗರಾಜ್ ತಿಳಿಸಿದರು.

‘ಪಾದಯಾತ್ರೆ ಜ.29ರಂದು ದಾವಣಗೆರೆಗೆ ಬರಲಿದ್ದು, ಅಂದಿನ ಬಹಿರಂಗ ಸಭೆಯಲ್ಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಭಾಗವಹಿಸುವರು.ಅಂದಿನ ಸಭೆಯಲ್ಲಿ ಸರ್ವರೂ ಭಾಗವಹಿಸುವ ಮೂಲಕ ಮುಂದಿನ ಹಂತದ ಹೋರಾಟಕ್ಕೆ ಸಹಕರಿಸಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘28ರಂದು ಹರಿಹರಕ್ಕೆ ಬರುವ ಪಾದಯಾತ್ರೆ 29ರಂದು ಮಧ್ಯಾಹ್ನ ದೊಡ್ಡಬಾತಿ ಬಳಿ ಪಾದಯಾತ್ರೆಗೆ ಭವ್ಯ ಸ್ವಾಗತ ಕೋರಲಾಗುವುದು. ಮಧ್ಯಾಹ್ನ 3ಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಹಿರಂಗ ಸಭೆ ನಡೆಯುವ ಬೀರಲಿಂಗೇಶ್ವರ ದೇವಸ್ಥಾನದ ಮೈದಾನದವರೆಗೆ ಮೆರವಣಿಗೆ ನಡೆಸಲಾಗುವುದು’ ಎಂದು ತಿಳಿಸಿದರು.

‘ಸಂಜೆ 4ಕ್ಕೆ ನಡೆಯುವ ಬಹಿರಂಗ ಸಭೆಯಲ್ಲಿ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರ ಪೀಠದ ವಚನಾನಂದ ಸ್ವಾಮೀಜಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶಪ್ಪನವರ, ವೀಣಾ ಕಾಶಪ್ಪನವರ ಭಾಗವಹಿಸುವರು’ ಎಂದು ತಿಳಿಸಿದರು.

‘ಪಟ್ಟಭದ್ರ ಹಿತಾಸಕ್ತಿಗಳಿಂದ ಗೊಂದಲ ಸೃಷ್ಟಿ’: ‘ಪಂಚಮಸಾಲಿ ಸಮಾಜದಲ್ಲಿ ಗೊಂದಲವೇ ಇಲ್ಲದಿದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸ್ವಾರ್ಥಕ್ಕಾಗಿ ಗೊಂದಲ ಸೃಷ್ಟಿಸಿದ್ದಾರೆ. ಇದಕ್ಕೆ ಉತ್ತರವಾಗಿ ಹರಪನಹಳ್ಳಿಯಲ್ಲಿ ನಡೆದ ಪಾದಯಾತ್ರೆಯ ಬಹಿರಂಗ ಸಭೆಯಲ್ಲಿ ಇಬ್ಬರೂ ಶ್ರೀಗಳು ವೇದಿಕೆ ಹಂಚಿಕೊಳ್ಳುವ ಮೂಲಕ ಪಂಚಮಸಾಲಿ ಸಮಾಜ ಒಗ್ಗಟ್ಟಾಗಿ ಇದೆ. ಮುಂದೆಯೂ ಇರುತ್ತದೆ. ಮೀಸಲಾತಿ ಪಡೆದೇ ಪಡೆಯುತ್ತದೆ ಎಂಬ ಸಂದೇಶ ನೀಡಿದ್ದಾರೆ’ ಎಂದು ತಿಳಿಸಿದರು.

‘ಬಹಿರಂಗ ಸಭೆಗೆ ಹರಿಹರ ಪೀಠದ ಶ್ರೀಗಳನ್ನು ಭೇಟಿ ಮಾಡಿದಾಗ ತುಂಬು ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ಅಂದಿನ ಸಭೆಯಲ್ಲಿ ಸಮಾಜದ ಮುಖಂಡರಾದ ಬಿ.ಸಿ. ಉಮಾಪತಿ, ಬಿ. ಲೋಕೇಶ್, ಎಂ. ದೊಡ್ಡಪ್ಪ ಅವರೂ ಭಾಗವಹಿಸುವರು’ ಎಂದು ತಿಳಿಸಿದರು.

‘ಕೆಲವರು ತಮ್ಮ ವೈಯಕ್ತಿಕ ಅಭಿಪ್ರಾಯ ಹಂಚಿಕೊಂಡಿರಬಹುದು. ಆದರೆ, ಅದು ಸಮಾಜದ ಹೇಳಿಕೆ ಅಲ್ಲ. ಹರಿಹರದಲ್ಲಿನ ಬಹಿರಂಗ ಸಭೆಯಲ್ಲಿ ವಚನಾನಂದಶ್ರೀಗಳು ಪಾಲ್ಗೊಳ್ಳದೇ ಇರುವುದಕ್ಕೆ ಸಂಬಂಧಪಟ್ಟವರನ್ನೇ ಕೇಳಬೇಕು. ನಮ್ಮದು ಏನಿದ್ದರೂ ದಾವಣಗೆರೆ ಸಮಾರಂಭದ ಜವಾಬ್ದಾರಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಭು ಕಲಬುರ್ಗಿ, ವೀಣಾ ಕಾಶಪ್ಪನವರ್, ಮಂಜುಳಾ ಮಹೇಶ್, ಬಾತಿ ನಾಗರಾಜ್, ಹದಡಿ ರವಿ, ತಣ್ಣಿಗೆರೆ ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT