ಬುಧವಾರ, ಆಗಸ್ಟ್ 21, 2019
25 °C
ಅಚ್ಚುಕಟ್ಟು ಪ್ರದೇಶದ ಬೆಳೆಗಾರರಿಗೆ ತಾಂತ್ರಿಕ ತಜ್ಞ ಡಾ. ಕುಮಾರ್‌ ಸಲಹೆ

ಅಲ್ಪಾವಧಿ ಭತ್ತದ ತಳಿ ಬಳಸಿ

Published:
Updated:
Prajavani

ದಾವಣಗೆರೆ: ಸಾಂಪ್ರದಾಯಿಕವಾಗಿ ಭತ್ತ ಬೆಳೆಯಲು ಬಿತ್ತನೆ ಮಾಡುವ ಸಮಯ ದಾಟಿರುವುದರಿಂದ ಅಲ್ಪಾವಧಿ ತಳಿ ಬಳಸಿ ಭತ್ತ ಬೆಳೆಯುವುದು ಉತ್ತಮ ಎಂದು ಕೃಷಿ ಇಲಾಖೆಯ ತಾಂತ್ರಿಕ ಸಲಹೆಗಾರ ಡಾ. ಕುಮಾರ್‌ ಸಲಹೆ ನೀಡಿದರು.

ಕೃಷಿ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಐಸಿಎಆರ್‌–ತರಳಬಾಳು ಕೃಷು ವಿಜ್ಞಾನ ಕೇಂದ್ರ ಮತ್ತು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭದ್ರಾ ಮತ್ತು ತುಂಗಾ ಅಚ್ಚುಕಟ್ಟು ಪ್ರದೇಶದ ಬೆಳೆ ನಿರ್ವಹಣೆ ಕುರಿತು ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗ ಬಿತ್ತನೆ ಮಾಡಿದರೆ ಹೂವು ಬಿಡುವ ಹೊತ್ತಿಗೆ ಚಳಿಗಾಲ ಆರಂಭಗೊಂಡಿರುತ್ತದೆ. ಇದರಿಂದ ತೆನೆ ಕಟ್ಟಲು ತೊಂದರೆಯಾಗುವುದರಿಂದ ಇಳುವರಿ ಕಡಿಮೆಯಾಗುತ್ತದೆ. ಅದಕ್ಕಾಗಿ ಸೆಪ್ಟೆಂಬರ್‌ 15ರ ಒಳಗೆ ಹೂವು ಬಿಡುವ ತಳಿಗಳನ್ನು ಬೆಳೆಯಬೇಕು. ಎಂಟಿವಿ 1001, 1010, ಆರ್‌ಎನ್‌ಆರ್‌ ತಳಿಗಳು ಉತ್ತಮ ಎಂದು ಹೇಳಿದರು.

ಕೂರಿಗೆ ಬಿತ್ತನೆ ಪದ್ಧತಿಯನ್ನೂ ಅಳವಡಿಸಿಕೊಳ್ಳಬಹುದು. ಇದು ಸಾಂಪ್ರದಾಯಿಕ ಪದ್ಧತಿಗಿಂತ ಸುಮಾರು 10 ದಿನ ಬೇಗ ಕೊಯ್ಲಿಗೆ ಬರುತ್ತದೆ. ಅಲ್ಲದೇ ನೀರು ಕೂಡ ಕಡಿಮೆ ಸಾಕಾಗುತ್ತದೆ. ಶ್ರೀಪದ್ಧತಿಯನ್ನೂ ಅಳವಡಿಸಿಕೊಳ್ಳಬಹುದು. ಎಳೆ ಸಸಿಯನ್ನು ನೆಡಬೇಕಾಗುತ್ತದೆ ಎಂದು ತಿಳಿಸಿದರು.

ಈ ಸಭೆಯನ್ನು ಮೊದಲೇ ಮಾಡಬೇಕಿತ್ತು. ಈಗ ತಡವಾಗಿದೆ. ಇನ್ನು ಯಾವಾಗ ಸಸಿ ಮಡಿ ಮಾಡುವುದು ಎಂದು ರೈತರು ಪ್ರಶ್ನಿಸಿದರು. ಸಂವಾದ ಸಭೆ ನಿಗದಿ ಮಾಡುವಾಗ ಮಳೆ ಇರಲಿಲ್ಲ. ಭದ್ರಾ ತುಂಬುವ ಸನ್ನಿವೇಶವೂ ಇರಲಿಲ್ಲ. ಹಾಗಾಗಿ ಭತ್ತಕ್ಕೆ ಪರ್ಯಾಯವಾಗಿ ಏನು ಮಾಡಬಹುದು ಎಂಬುದನ್ನು ಚಿಂತನೆ ನಡೆಸಲು ಈ ಸಂವಾದ ನಿಗದಿ ಮಾಡಲಾಗಿತ್ತು. ಒಂದೇ ವಾರದಲ್ಲಿ ಚಿತ್ರಣವೇ ಬದಲಾಗಿ ಹೋಯಿತು. ಮಳೆ ಬಂದು ಅಣೆಕಟ್ಟು ತುಂಬಿತು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್‌, ಸದಸ್ಯ ತೇಜಸ್ವಿ ಪಟೇಲ್‌ ಸ್ಪಷ್ಟನೆ ನೀಡಿದರು.

‘ಭತ್ತ ಬೆಳೆಯಲು ಈಗ ಬಿತ್ತನೆ ಮಾಡಿ ನಷ್ಟ ಮಾಡಿಕೊಳ್ಳಲು ನಾವು ತಯಾರಿಲ್ಲ. ಎರಡು ತಿಂಗಳು ಕಳೆದ ಮೇಲೆ ಮೆಕ್ಕೆಜೋಳ, ರಾಗಿ ಹಾಕಿದರೆ ನಷ್ಟವಾಗುವುದಿಲ್ಲ’ ಎಂದು ಅಚ್ಚುಕಟ್ಟು ಕೊನೇ ಭಾಗದ ರೈತರು ತಿಳಿಸಿದರು.

ಒಂದು ದಿನ ನೀರು ನಿಂತರೆ ಮೆಕ್ಕೆಜೋಳ ಹಾಳಾಗುತ್ತದೆ. ಅಷ್ಟು ಸೂಕ್ಷ್ಮ ಬೆಳೆ ಅದು. ರಾಗಿ ಇನ್ನಿತರ ದ್ವಿದಳ ಧಾನ್ಯ ಬೆಳೆಯುವಾಗಲೂ ಎಲ್ಲರೂ ಬೆಳೆದರೆ ಸಮಸ್ಯೆ ಆಗುವುದಿಲ್ಲ. ಸುತ್ತಮುತ್ತಲಿನವರು ಭತ್ತ ಬೆಳೆದರೆ ಅದರೆ ಮಧ್ಯದಲ್ಲಿ ಇವು ಚೆನ್ನಾಗಿ ಬೆಳೆಯುವುದಿಲ್ಲ. ಇಳುವರಿ ಸಿಗುವುದಿಲ್ಲ ಎಂದು ಕುಮಾರ್‌ ಎಚ್ಚರಿಸಿದರು.

ರೈತರಾದ ಬಳ್ಳೂರು ರವಿಕುಮಾರ್‌, ಎಲೆಬೇತೂರು ಬಸವರಾಜಪ್ಪ, ಸಂಗಜ್ಜಗೌಡ, ರವಿ ಇನ್ನಿತರ ರೈತರು ಮಾತನಾಡಿದರು.

ಕೀಟರೋಗಗಳ ಬಗ್ಗೆ ವಿಜಯ್‌ ದಾನರೆಡ್ಡಿ, ತಳಿಗಳ ಬಗ್ಗೆ ಸಹಾಯಕ ಕೃಷಿ ಅಧಿಕಾರಿ ದುರ್ಗಪ್ಪ ಮಾಹಿತಿ ನೀಡಿದರು.

ಶಾಸಕ ಎಸ್‌.ಎ. ರವೀಂದ್ರನಾಥ್‌ ಕಾರ್ಯಕ್ರಮ ಉದ್ಘಾಟಿಸಿದರು. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್‌. ಮಹೇಶ್‌, ಸದಸ್ಯೆ ಮಂಜುಳಾ, ಸಿಇಒ ಎಚ್‌. ಬಸವರಾಜೇಂದ್ರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಭದ್ರ ನಾಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ.ಜಿ. ಕೃಷ್ಣಮೂರ್ತಿ, ಡಾ. ನಟರಾಜ್‌, ಶಿವಕುಮಾರ್‌ ಅವರೂ ಇದ್ದರು.

ಉಪ ಕೃಷಿ ನಿರ್ದೇಶಕ ಕೆ.ಎಸ್‌. ಶಿವಕುಮಾರ್‌ ಸ್ವಾಗತಿಸಿದರು. ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ. ಮುದುಗಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಕೃಷಿ ನಿರ್ದೇಶಕಿ ಎಂ.ಆರ್‌. ಹಂಸವೇಣಿ ವಂದಿಸಿದರು. ಉಪ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

Post Comments (+)