ಭಾನುವಾರ, ಏಪ್ರಿಲ್ 18, 2021
32 °C

ನ್ಯಾಮತಿಯಲ್ಲೂ ಕಂಪನ ಅನುಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯಾಮತಿ: ಶಿವಮೊಗ್ಗ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ನ್ಯಾಮತಿ ತಾಲ್ಲೂಕಿನ ಸುತ್ತಮುತ್ತಲ ಕೆಲವು ಗ್ರಾಮಗಳ ಜನತೆಗೂ ಇದೇ ರೀತಿಯ ಅನುಭವವಾಗಿದೆ.

‘ಚೀಲೂರು ಗ್ರಾಮದಲ್ಲಿ ಸಣ್ಣದಾಗಿ ಶಬ್ದ ಕೆಲವರಿಗೆ ಕೇಳಿಸಿದೆ. ಗ್ರಾಮೀಣ ಪ್ರದೇಶ ಹಾಗೂ ಚಳಿಗಾಲ ಇರುವುದರಿಂದ ಜನರು ನಿದ್ರೆಗೆ ಜಾರಿದ್ದಾರೆ. ಎಚ್ಚರವಿದ್ದ ಕೆಲವರಿಗೆ ಶಬ್ದ ಕೇಳಿ ಬಂದಿದೆ’ ಎಂದು ಚೀಲೂರು ಆಶಾ ಕಾರ್ಯಕರ್ತೆ ಮಂಜಮ್ಮ ಅನುಭವ ಹಂಚಿಕೊಂಡರು.

ಸಾಮಾಜಿಕ ಕಾರ್ಯಕರ್ತ ಚೀಲೂರು ಪುರುವಂತರ ಪರಮೇಶ್ವರಪ್ಪ ಅವರು, ‘ರಾತ್ರಿ ಮನೆಯ ಮೇಲೆ ಏನು ಬಿದ್ದ ಅನುಭವವಾಯಿತು. ನಾವು ವಿದ್ಯುತ್ ಪರಿವರ್ತಕ ಶಬ್ದವಿರಬಹುದು ಎಂದು ಭಾವಿಸಿದ್ದೆವು. ಗ್ರಾಮದ ಸೇಂದಿ ರಾಜಪ್ಪ ಎಂಬುವರ ಮನೆಯ ಮುಚ್ಚಿದ ಕಿಟಕಿ ಬಾಗಿಲುಗಳು ಭೂಮಿ ಕಂಪನಕ್ಕೆ ಅಲುಗಾಡಿದವು’ ಎಂದು ಮಾಹಿತಿ ನೀಡಿದರು.

‘ರಾತ್ರಿ 10 ಗಂಟೆಯ ಸುಮಾರಿಗೆ ಇಲಾಖೆಗೆ ಸಂಬಂಧಿಸಿದ ವಸತಿಗೃಹದಲ್ಲಿ ಬರವಣಿಗೆಯಲ್ಲಿ ತೊಡಗಿದ್ದಾಗ, ಭೂಮಿ ಕಂಪಿಸಿದ ಅನುಭವ ಆಯಿತು. ಕಿಟಕಿ ಬಾಗಿಲುಗಳು ಅಲುಗಾಡಿ, ಕಿಟಕಿಗೆ ಹಾಕಿದ್ದ ಗಾಜುಗಳು ಒಡೆದವು’ ಎಂದು ಟಿ. ಗೋಪಗೊಂಡನಹಳ್ಳಿ ಕಿರಿಯ ಆರೋಗ್ಯ ಸಹಾಯಕಿ ಆಶಾ ಅನುಭವಹಂಚಿಕೊಂಡರು.

‘ಸೂರಗೊಂಡನಕೊಪ್ಪ, ಚಿನ್ನಿಕಟ್ಟೆ, ಹೊಸಜೋಗ ಮತ್ತು ಹಳೆಜೋಗ ಗ್ರಾಮಗಳಲ್ಲಿ ಭೂಕಂಪನ ಶಬ್ದ ಗ್ರಾಮಸ್ಥರ ಅನುಭವಕ್ಕೆ ಬಂದಿದ್ದು, ಸೂರಗೊಂಡನಕೊಪ್ಪ ಗ್ರಾಮದಲ್ಲಿ ನಿಲ್ಲಿಸಿದ್ದ ಕೆಲ ಆಟೊಗಳು ಕದಲಿವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ’ ಎಂದು ನ್ಯಾಮತಿ ತಾಲ್ಲೂಕು ಪಂಚಾಯಿತಿ ಪ್ರಾಜೆಕ್ಟ್ ಯೋಜನಾಧಿಕಾರಿ ಜಿ.ಬಿ. ವಿಜಯಕುಮಾರ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು