ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವೆ: ಮೇಯರ್ ಆರ್. ಜಯಮ್ಮ

ಮಹಾನಗರ ಪಾಲಿಕೆ ಮೇಯರ್ ಆರ್. ಜಯಮ್ಮ ಗೋಪಿನಾಯ್ಕ ಭರವಸೆ
Last Updated 24 ಸೆಪ್ಟೆಂಬರ್ 2022, 4:54 IST
ಅಕ್ಷರ ಗಾತ್ರ

ದಾವಣಗೆರೆ: ‘ಪೌರಕಾರ್ಮಿಕರಿದ್ದರೆ ಮಾತ್ರ ನಗರದಲ್ಲಿ ಸ್ವಚ್ಛತೆ ಇರುತ್ತದೆ. ಅವರು ಇರದಿದ್ದರೆ ಸಾರ್ವಜನಿಕರು ಯಾರೂ ಆರೋಗ್ಯದಿಂದ ಇರಲು ಸಾಧ್ಯವಿಲ್ಲ. ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇವೆ’ ಎಂದು ಮಹಾನಗರ ಪಾಲಿಕೆ ಮೇಯರ್
ಆರ್. ಜಯಮ್ಮ ಗೋಪಿನಾಯ್ಕ ಹೇಳಿದರು.

ಮಹಾನಗರ ಪಾಲಿಕೆಯಿಂದ ಶುಕ್ರವಾರ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪೌರಕಾರ್ಮಿಕರು ಮಾಡುವ ಉತ್ತಮ ಕೆಲಸದಿಂದಾಗಿಯೇ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಾಗೂ ಊರಿಗೆ ಒಳ್ಳೆಯ ಹೆಸರು ಬರುತ್ತದೆ’ ಎಂದು ಹೇಳಿದರು.

‘ನೇರ ಪಾವತಿ ಪೌರ ಕಾರ್ಮಿಕರ ಸೇವೆ ಕಾಯಂ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದರಿಂದ ಅನೇಕ ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಇದರೊಂದಿಗೆ ಹಲವು ವರ್ಷಗಳ ಹೋರಾಟ ಫಲ ನೀಡಿದಂತಾಗಿದೆ. ಪೌರ ಕಾರ್ಮಿಕರ ಇನ್ನುಳಿದ ಬೇಡಿಕೆಗಳನ್ನೂ ಸರ್ಕಾರ ಹಂತ ಹಂತವಾಗಿ ಈಡೇರಿಸಲಿದೆ’ ಎಂದು ಮಾಜಿ ಮೇಯರ್ ಎಸ್.ಟಿ. ವೀರೇಶ್ ಹೇಳಿದರು.

‘ಪೌರ ಕಾರ್ಮಿಕರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಇತ್ತೀಚಿನ ದಿನಗಳಲ್ಲಿ ಪೌರಕಾರ್ಮಿಕರ ಮಕ್ಕಳು ಎಂಜಿನಿಯರ್, ವೈದ್ಯರಾಗಿದ್ದಾರೆ, ಐ.ಎ.ಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಅಂಥವರ ಸಂಖ್ಯೆ ಹೆಚ್ಚಾಗಬೇಕು’ ಎಂದು ಆಶಿಸಿದರು.

‘ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು’ ಎಂದು ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ್ ಹೇಳಿದರು. ‘ಪೌರ ಕಾರ್ಮಿಕರ ಸೇವೆ ಕಾಯಂ ಆದೇಶ ಇನ್ನೊಂದು ವಾರದೊಳಗೆ ಬರಬಹುದು’ ಪಾಲಿಕೆ ಸದಸ್ಯ ಎಲ್.ಡಿ. ಗೋಣೆಪ್ಪ ಹೇಳಿದರು.

ಉಪ ಮೇಯರ್ ಗಾಯತ್ರಿಬಾಯಿ ಖಂಡೋಜಿರಾವ್, ಸ್ಥಾಯಿ ಸಮಿತಿಯ ಅಧ್ಯಕ್ಷ ಉದಯಕುಮಾರ್, ಸದಸ್ಯರಾದ ಪ್ರಸನ್ನಕುಮಾರ್, ಎ. ನಾಗರಾಜ, ಸುಧಾ, ರೇಖಾ, ಶಿವಾನಂದ, ಗಣೇಶ್, ಮರುಳಪ್ಪ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜ್, ಮುಖಂಡ ನೀಲಗಿರಿಯಪ್ಪ ಇದ್ದರು. ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸ್ವಾಗತಿಸಿದರು.

ರಾಜ್ಯದಲ್ಲಿ 33,000 ಪೌರ ಕಾರ್ಮಿಕರಿದ್ದು ಅವರಲ್ಲಿ 11,000 ಜನರಿಗೆ ಮಾತ್ರ ಸೇವೆ ಕಾಯಂ ಮಾಡಲು ಸರ್ಕಾರ ನಿರ್ಧರಿಸಿದೆ. ಇಷ್ಟಾದರೂ ಆಗಿರುವುದು ಸಮಾಧಾನದ ವಿಷಯ. ಉಳಿದವರನ್ನೂ ಕಾಯಂ ಮಾಡಬೇಕು.

ಚಮನ್ ಸಾಬ್, ಪಾಲಿಕೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT