ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Womens Day: ಆಯುರ್ವೇದ ತಜ್ಞೆ ವಿಜಯಲಕ್ಷ್ಮಿ

Published 8 ಮಾರ್ಚ್ 2024, 6:49 IST
Last Updated 8 ಮಾರ್ಚ್ 2024, 6:49 IST
ಅಕ್ಷರ ಗಾತ್ರ
ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಸ್ವ–ಉದ್ಯೋಗ ಕೈಗೊಳ್ಳಲು ಆರ್ಥಿಕ ಸಹಾಯ, ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದು, ಆ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ನೆರವಾಗುವುದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ (ಎನ್‌ಆರ್‌ಎಲ್‌ಎಂ) ಮುಖ್ಯ ಧ್ಯೇಯ. ರಾಜ್ಯದಲ್ಲಿ ಸಂಜೀವಿನಿ ಹೆಸರಿನಲ್ಲಿ ಕಾರ್ಯಕ್ರಮ ಅನುಷ್ಠಾನಗೊಂಡಿದ್ದು, ದಾವಣಗೆರೆ ಜಿಲ್ಲಾ ಪಂಚಾಯಿತಿ ಮಾರ್ಗದರ್ಶನದಲ್ಲಿ ಮಹಿಳೆಯರನೇಕರು ಉತ್ತಮ ಸಾಧನೆ ತೋರಿದ್ದಾರೆ. ಅಂತಹ ಆಯ್ದ ಮಹಿಳೆಯರ ಯಶೋಗಾಥೆಗಳು ಮಾರ್ಚ್‌–8 ಅಂತರರಾಷ್ಟ್ರೀಯ ದುಡಿಯುವ ಮಹಿಳೆಯರ ದಿನಾಚರಣೆ ಅಂಗವಾಗಿ ಇಲ್ಲಿವೆ.

ಅಪರೂಪದ ಕಾಯಿಲೆಗಳಿಗೆ ಗಿಡಮೂಲಿಕೆಗಳಿಂದ ಔಷಧ ತಯಾರಿಸಿಕೊಡುವಲ್ಲಿ ಸಿದ್ಧಹಸ್ತರು ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿ ಸಮೀಪದ ನೀಲಾನಹಳ್ಳಿಯ ವಿಜಯಲಕ್ಷ್ಮಿ ಆನಂದ ಲಕ್ಷ್ಮಣಗೌಡರ್‌. ಮಾವ (ಪತಿಯ ತಂದೆ) ಚಂದ್ರೇಗೌಡ ಇವರಿಗೆ ಗುರು.

ಭಾರತದ ವೈದ್ಯಕೀಯ ಪದ್ಧತಿಗಳಲ್ಲಿ ಅತ್ಯಂತ ಪುರಾತನವಾದ ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಇಡೀ ಕುಟುಂಬಕ್ಕೆ ಅಪಾರವಾದ ನಂಬಿಕೆ. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ 50 ವರ್ಷಗಳ ಅನುಭವ ಹೊಂದಿರುವ ಮಾವ ಚಂದ್ರೇಗೌಡರಿಂದ ಬಹಳಷ್ಟು ಕಲಿತಿರುವ ವಿಜಯಲಕ್ಷ್ಮಿ, ಇದೀಗ ಸ್ವತಂತ್ರವಾಗಿ ಚಿಕಿತ್ಸಾ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ಪತಿ ಆನಂದ, ಮಗ ಪ್ರತೀಕ ಅವರ ಸಹಕಾರವೂ ಇದೆ.

ಸಕ್ಕರೆ ಕಾಯಿಲೆ, ಗ್ಯಾಸ್ಟ್ರಿಕ್‌, ಕಿಡ್ನಿ ಸ್ಟೋನ್‌, ಕೆಮ್ಮು, ನರದ ದೌರ್ಬಲ್ಯ, ಸಂಧಿವಾತ, ಮೂಲವ್ಯಾಧಿ, ಹಿಮ್ಮಡಿ ಬಿರುಕು, ತಲೆ ಹೊಟ್ಟು, ಎದೆಹಾಲಿನ ಕೊರತೆ ಮುಂತಾದ ಸಮಸ್ಯೆಗಳಿಗೆ ಗಿಡಮೂಲಿಕೆಗಳಿಂದ ಔಷಧಗಳನ್ನು ತಯಾರಿಸುತ್ತಿದ್ದು, ಇದಕ್ಕೆ ರಾಜ್ಯದ ವಿವಿಧೆಡೆಗಳಿಂದ ಸಾಕಷ್ಟು ಬೇಡಿಕೆ ಇದೆ. ಕೆಲ ಔಷಧೀಯ ಗಿಡಗಳನ್ನು ಮನೆಯ ಸುತ್ತಮುತ್ತ ಬೆಳೆಸಿದ್ದು, ಬಹಳಷ್ಟನ್ನು ವಿವಿಧೆಡೆಯಿಂದ ಸಂಗ್ರಹಿಸಿ ತರುತ್ತಾರೆ.

ಇವರು ತಯಾರಿಸುವ ಹಲವು ಔಷಧಗಳಲ್ಲಿ ಕಮಲದ ಹೂವಿನ ಗುಲ್ಕನ್‌ ಅತ್ಯಂತ ವಿಶೇಷವಾದುದು. ಇದಕ್ಕಾಗಿ ಕೆರೆಗಳಿಗೆ ಹೋಗಿ ತಾವರೆಹೂಗಳನ್ನು ಕಿತ್ತು ತಂದು, ದಳಗಳನ್ನು ಬಿಡಿಸಿ, ಚೆನ್ನಾಗಿ ತೊಳೆದು, ಬೇಯಿಸಿ, ಬೆಲ್ಲ, ಏಲಕ್ಕಿ, ಜಾಜಿ ಕಾಯಿ ಹಾಕಿ ಹದ ಬರುವವರೆಗೆ ಕುದಿಸಿ ಡಬ್ಬಿಗೆ ತುಂಬುವುದರಿಂದ ಆರು ತಿಂಗಳುಗಳವರೆಗೆ ಇಟ್ಟುಕೊಂಡು ತಿನ್ನಬಹುದು.

ಹಿಮೋಗ್ಲೊಬಿನ್‌ ಕೊರತೆ ಇರುವವರಿಗೆ ಇದು ಉಪಯುಕ್ತ ಔಷಧ. ಹೊಟ್ಟೆಗೆ ಸಂಬಂಧಿಸಿದ ಏನೇ ತೊಂದರೆಗಳಿದ್ದರೂ ನಿವಾರಣೆಯಾಗುತ್ತದೆ. ಕೆಲ ಬಾಣಂತಿಯರಿಗೆ ಎದೆಹಾಲು ಬರುವುದಿಲ್ಲ. ಅಂತಹ ಸಂದರ್ಭದಲ್ಲಿ ಶತಾವರಿ ಗಿಡದ ಬೇರನ್ನು ತೊಳೆದು ರುಬ್ಬಿ, ಸೋಸಿ ಅದರ ಹಾಲನ್ನು ಕುಡಿಯುವುದರಿಂದ ವಾರದೊಳಗೆ ಎದೆಹಾಲು ಉತ್ಪತ್ತಿಯಾಗುತ್ತದೆ. ಇಂತಹ ಸಮಸ್ಯೆ ಇರುವವರು ಮನೆಗೇ ಬಂದು ಚಿಕಿತ್ಸೆ ಪಡೆದುಕೊಂಡು ಹೋಗುತ್ತಾರೆ ಎಂದು ವಿಜಯಲಕ್ಷ್ಮಿ ಹೇಳುತ್ತಾರೆ.

‘ಹಿಂದೆ ನಮ್ಮ ಮಾವನವರ ತಂದೆಯವರಿಗೆ ಅನಾರೋಗ್ಯ ಇತ್ತು. ಎಲ್ಲಿ ತೋರಿಸಿದರೂ ಹುಷಾರಾಗಿರಲಿಲ್ಲ. ಆಗ ಗಿಡಮೂಲಿಕೆಗಳಿಂದ ಔಷಧ ತಯಾರಿಸಿ ಕೊಟ್ಟಾಗ ಕಾಯಿಲೆ ವಾಸಿಯಾಯಿತು. ಅಂದಿನಿಂದ ಇಂದಿನವರೆಗೂ ವೃತ್ತಿ ಮುಂದುವರಿಸಿಕೊಂದು ಬಂದಿದ್ದಾರೆ. ಮುಂದೆ ನಮ್ಮನ್ನೂ ತರಬೇತುಗೊಳಿಸಿದ್ದಾರೆ. ಬೆಂಗಳೂರಿನ ಮುತ್ತಿನಕಂತಿ ಮಠದ ಪಂಡಿತ ಶಿವಕುಮಾರಸ್ವಾಮಿ ಅವರು ರಚಿಸಿರುವ ‘ಆರೋಗ್ಯ ದರ್ಪಣ’ ಪುಸ್ತಕ ಔಷಧ ತಯಾರಿಕೆಗೆ ಸಹಕಾರಿಯಾಗಿದೆ. ಶ್ರೀ ಆದಿಶಕ್ತಿ ಸಂಜೀವಿನಿ ಮಹಿಳಾ ಸ್ವ–ಸಹಾಯ ಸಂಘಕ್ಕೆ ಸೇರಿಕೊಂಡ ನಂತರದಲ್ಲಿ ಔಷಧಗಳ ಮಾರಾಟ ಸುಲಭವಾಗಿದೆ. ವಿವಿಧ ಜಿಲ್ಲೆಗಳಲ್ಲಿ ಸರ್ಕಾರ ಮೇಳಗಳನ್ನು ಆಯೋಜಿಸಿದಾಗ ನಮಗೆ ಸ್ಟಾಲ್‌ ಒದಗಿಸುತ್ತಾರೆ. ವಸತಿ, ಊಟದ ವ್ಯವಸ್ಥೆ ಕಲ್ಪಿಸುತ್ತಾರೆ. ಔಷಧ ಮಾರಾಟದಿಂದ ಬಂದ ಲಾಭದಲ್ಲಿ ಪ್ರತಿವರ್ಷ 500 ತೆಂಗಿನಗಿಡಗಳನ್ನು ನೆಡುವಂತೆ ಜನರಿಗೆ ಕೊಡುತ್ತೇವೆ. ಬೇರೆ ಗಿಡಗಳನ್ನು ಜನರು ಕಡಿದುಹಾಕುವ ಸಾಧ್ಯತೆ ಇರುತ್ತದೆ. ಆದರೆ, ತೆಂಗಿನಮರವನ್ನು ಕಡಿಯುವುದಿಲ್ಲ. ಇದು ನಮ್ಮ ಸಾಮಾಜಿಕ ಬದ್ಧತೆ ಎಂದು ಅವರು ಹೇಳುತ್ತಾರೆ.

ಗಿಡಮೂಲಿಕೆಗಳಿಂದ ಔಷಧ ತಯಾರಿಕೆ ಜತೆಗೆ ಸಿರಿಧಾನ್ಯ ಹಾಗೂ ಡ್ರೈ ಫ್ರೂಟ್ಸ್‌ಗಳಿಂದ ಉಂಡೆಗಳು, ವಿವಿಧ ತರಕಾರಿಗಳಿಂದ ಹಪ್ಪಳ–ಸಂಡಿಗೆ, ಚಟ್ನಿ ಪುಡಿಗಳು ಸೇರಿದಂತೆ ಆಹಾರ ಪದಾರ್ಥಗಳನ್ನೂ ತಯಾರಿಸುವಲ್ಲಿ ನಿರತರಾಗಿದ್ದಾರೆ ವಿಜಯಲಕ್ಷ್ಮಿ.

ಸಂಪರ್ಕ ಸಂಖ್ಯೆ: 8184047534

ಮಗ ಪ್ರತೀಕ್‌ ಹಾಗೂ ಪತಿ ಆನಂದ ಅವರೊಂದಿಗೆ ವಿಜಯಲಕ್ಷ್ಮಿ ಲಕ್ಷ್ಮಣಗೌಡರ್‌
ಮಗ ಪ್ರತೀಕ್‌ ಹಾಗೂ ಪತಿ ಆನಂದ ಅವರೊಂದಿಗೆ ವಿಜಯಲಕ್ಷ್ಮಿ ಲಕ್ಷ್ಮಣಗೌಡರ್‌
ಕೆರೆಯಿಂದ ತಾವರೆಗಳನ್ನು ಕೀಳುತ್ತಿರುವ ಆನಂದ
ಕೆರೆಯಿಂದ ತಾವರೆಗಳನ್ನು ಕೀಳುತ್ತಿರುವ ಆನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT