ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕರ್ಷಕ ಶಿಲ್ಪಕಲಾ ಕೆತ್ತನೆಯ ಬಸದಿ

Last Updated 18 ಜೂನ್ 2011, 6:50 IST
ಅಕ್ಷರ ಗಾತ್ರ

ಜೈನ ಧರ್ಮದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಹೆಗ್ಗೆರೆಯಲ್ಲಿ ಇರುವ ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಬಸದಿ ಆಕರ್ಷಕ ಶಿಲ್ಪಕಲಾ ಕೆತ್ತನೆಗಳನ್ನೊಳಗೊಂಡಿದೆ.
ಸುಮಾರು 1,200 ವರ್ಷಗಳ ಈ ಬಸದಿ ತನ್ನದೇ ಆದ ವಿಶಿಷ್ಟವನ್ನೊಳಗೊಂಡಿದೆ. ಅಪರೂಪದ ಶಿಲ್ಪಕಲಾ ಸಂಪತ್ತಿನ `1,008 ಸುಪಾರ್ಶ್ವನಾಥ ಬಸದಿ~ ಬಳಪದ ಕಲ್ಲಿನಿಂದ ನಿರ್ಮಾಣಗೊಂಡಿದ್ದು, ಶಿಲಾ ಶಾಸನಗಳಲ್ಲಿ `ಚನ್ನಪಾರ್ಶ್ವ ದೇವರ ಬಸದಿ~ ಎಂದು ಕರೆಯುತ್ತಾರೆ.

ಈ ಬಸದಿ ಹೊಂದಿರುವ ಕಲಾತ್ಮಕತೆಯ ಜತೆಗೆ ನವರಂಗ, ಗರ್ಭಗುಡಿ, ಸುಕನಾಸಿಯ ಏಕೈಕ ಬಸದಿಯಾಗಿದೆ. ಬಸದಿಯ ಒಳ ಮತ್ತು ಹೊರಭಾಗಗಳಲ್ಲಿ, ಒಳಛಾವಣಿ, ಸ್ತಂಭಗಳು, ಅಡ್ಡತೊಲೆಗಳ ಮೇಲೆ ಕಮಲದ ಹೂವು ಕೆತ್ತನೆ ಮಾಡಿರುವುದು ವಿಶೇಷ. ಈ ಬಸದಿಯಲ್ಲಿ ಸುಮಾರು 500 ಕಮಲಗಳ ಕೆತ್ತನೆ ಮಾಡಿರುವುದನ್ನು ನೋಡಿದರೆ ಜೈನಧರ್ಮದ ನೀತಿಯೊಂದನ್ನು ಸಾರಲಾಗಿದೆ ಎನಿಸುತ್ತದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ.

ಗರ್ಭಗುಡಿಯಲ್ಲಿ ದೊಡ್ಡ ಕಮಲಪೀಠ ನಿರ್ಮಾಣ ಮಾಡಲಾಗಿದೆ. ಪೀಠದ ಮೇಲೆ ಏಳನೇ ತೀರ್ಥಂಕರರಾದ ಸುಪಾರ್ಶ್ವನಾಥ ಸ್ವಾಮಿ ವಿಗ್ರಹ ಇದೆ. ಕುದುರೆ ಮೇಲೆ ಆಸೀನವಾಗಿರುವ ಬ್ರಹ್ಮಯಕ್ಷ ದೇವರು ಹಾಗೂ ಸುಪಾರ್ಶ್ವನಾಥ ಸ್ವಾಮಿಯ ಲೋಹದ ಮೂರ್ತಿಗಳನ್ನು ಗರ್ಭಗುಡಿಯಲ್ಲಿ ಇಡಲಾಗಿದೆ.

ನೆಲಮಟ್ಟದಿಂದ ಸುಮಾರು ಮೂರು ಅಡಿ ಎತ್ತರದಲ್ಲಿ ನಿರ್ಮಿಸಲಾಗಿರುವ ಬಸದಿಯ ಹೊರಭಾಗ ನಕ್ಷತ್ರಾಕಾರದ ವಿನ್ಯಾಸ ಹೊಂದಿದೆ. ಆದರೆ, ಬೇಲೂರು ಮತ್ತು ಹಳೇಬೀಡಿನಲ್ಲಿ ಇರುವ ದೇವಾಲಯಗಳಂತೆ ನಕ್ಷತ್ರಾಕಾರದ ಜಗಲಿಗಳನ್ನು ನಿರ್ಮಿಸಲಾಗಿಲ್ಲ. ಬಸದಿಯ ಆವರಣದಲ್ಲಿ ಜಿನಶಾಸನ ಮತ್ತು ಎರಡು ನಿಷದಿ ಶಾಸನಗಳೂ ಇವೆ.

ಬಸದಿಯ ಪೂರ್ವಕ್ಕೆ ಸ್ಪಲ್ಪದೂರದಲ್ಲಿ ಕಂಡುಬರುವ ಪುರಾತನ ಶೈಲಿಯ ಮಹಾದ್ವಾರ ಬಸದಿ ನಿರ್ಮಾಣವಾದಾಗ ನೂರಾರು ಅಡಿಗಳಷ್ಟು ಅಗಲವಾದ  ವಿಶಾಲ ಪ್ರಾಂಗಣ ಇತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ.
 
ಪ್ರಾಂಗಣದ ಸುತ್ತಲೂ ಇದ್ದ ಪುರಾತನ ಕಾಲದ ರಕ್ಷಣಾಗೋಡೆ ಕುಸಿದುಹೋಗಿದೆ ಎನ್ನುವುದಕ್ಕೆ ಅನೇಕ ಕುರುಹುಗಳು ಇವೆ. ಪ್ರಸ್ತುತ ಬಸದಿಯ ಸುತ್ತಲೂ ಇರುವ ರಕ್ಷಣಾಗೋಡೆಯನ್ನು 1960ರಲ್ಲಿ ನಿರ್ಮಿಸಲಾಗಿದೆ ಎಂದು ಸುಪಾರ್ಶ್ವನಾಥ ಸ್ವಾಮಿ ಜಿನ ಚೈತ್ಯಾಲಯ ಟ್ರಸ್ಟ್‌ನ ಧರ್ಮದರ್ಶಿ ತಿಳಿಸುತ್ತಾರೆ.

ಬೂದಿಹಾಳು (ಈಗಿನ ಶ್ರೀರಾಂಪುರ) ಸೀಮೆಗೆ ಸೇರಿದ್ದ ಹೆಗ್ಗೆರೆ ಗ್ರಾಮ ಕೃಷಿ ಕೈಗಾರಿಕೆ ಮತ್ತು ವಾಣಿಜ್ಯ ಕೇಂದ್ರವಾಗಿತ್ತು. ಗ್ರಾಮದ ಸುತ್ತಲೂ ಅನೇಕ ಕೆರೆಗಳು ಇದ್ದುದರಿಂದ ವಿಸ್ತಾರವಾದ ಪ್ರದೇಶಗಳಲ್ಲಿ ಗದ್ದೆಗಳು ಇದ್ದವು. ಹೊಯ್ಸಳರ ರಾಜ ವಲ್ಲಭರಾಜ ದೇವ ಕೆಲವು ಗದ್ದೆಗಳನ್ನು ದತ್ತಿ ಬಿಟ್ಟು ಬಸದಿಯ ಜೀರ್ಣೋದ್ದಾರ ಮಾಡಿಸಿದ್ದ. 15ನೇ ಶತಮಾನದಲ್ಲಿ ಬೂದಿಹಾಳು ಸೀಮೆಯ ಸಿರುಮನಾಯಕನ ತಮ್ಮ ಮಲ್ಲನಾಯಕ ಬಸದಿಗಾಗಿ ಕೆಲವು ಗದ್ದೆಗಳನ್ನು ದತ್ತಿನೀಡಿದ್ದ ಎನ್ನುವುದು ಶಾಸನಗಳಿಂದ ತಿಳಿದುಬರುತ್ತದೆ.

ರಕ್ಷಣೆ: ಸುಣ್ಣಬಳಿದುಕೊಂಡು ಸೌಂದರ್ಯವನ್ನು ಕಳೆದುಕೊಂಡಿದ್ದ ಬಸದಿಯ ಶಿಲ್ಪಕಲಾ ಕೆತ್ತನೆಗಳನ್ನು ಸುಮಾರು 17 ವರ್ಷಗಳ ಹಿಂದೆ ಪ್ರಾಚ್ಯವಸ್ತು ಇಲಾಖೆಯಿಂದ ರಾಸಾಯನಿಕ ಸಿಂಪಡಣೆ ಮಾಡಿ ಸ್ವಚ್ಛಗೊಳಿಸಲಾಗಿದೆ. ಇದರಿಂದಾಗಿ ಸುಣ್ಣದ ಮರೆಯಲ್ಲಿದ್ದ ಸುಂದರ ಶಿಲ್ಪಕಲಾ ಕೆತ್ತನೆ  ಮತ್ತೆ ಮೂಲ ಸೌಂದರ್ಯವನ್ನು ಪಡೆದುಕೊಂಡಿವೆ. ಮಳೆಗಾಲದಲ್ಲಿ ಸೋರುತ್ತಿದ್ದ ಮೇಲ್ಛಾವಣಿಯನ್ನೂ ಸಹ ದುರಸ್ತಿಗೊಳಿಸುವ ಕೆಲಸ ನಡೆದಿದೆ ಎಂದು ಟ್ರಸ್ಟ್‌ನ ಧರ್ಮದರ್ಶಿ ಮಾಹಿತಿ ನೀಡುತ್ತಾರೆ.

ಜೈನ ಧರ್ಮದವರ ಪುಣ್ಯಕ್ಷೇತ್ರವಾಗಿರುವ ಹೆಗ್ಗೆರೆ ಬಸದಿಯಲ್ಲಿರುವ ಸುಪಾರ್ಶ್ವನಾಥ ಸ್ವಾಮಿ ಹಾಗೂ ಬ್ರಹ್ಮಯಕ್ಷ ದೇವರುಗಳ ವಾರ್ಷಿಕ ವಿಶೇಷ ಪೂಜಾ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಲಾಗುತ್ತದೆ.  ರಾಜ್ಯದ ವಿವಿಧ ಭಾಗಗಳಿಂದ ಆಪಾರ ಸಂಖ್ಯೆಯ ಭಕ್ತರು ಆಗಮಿಸಿ ಶ್ರದ್ಧಾಪೂರ್ವಕವಾಗಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಐತಿಹಾಸಿಕ, ಧಾರ್ಮಿಕ ಹಾಗೂ ಶಿಲ್ಪಕಲಾ ದೃಷ್ಟಿಯಿಂದ ಮಹತ್ವವೆನಿಸುವ ಅಪರೂಪದ ಹೆಗ್ಗೆರೆಯ ಸುಪಾರ್ಶ್ವನಾಥ ಸ್ವಾಮಿ ಬಸದಿ ಸಹಸ್ರಾರು ವರ್ಷಗಳ ಸುದೀರ್ಘ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT