ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದನಕೋವಿಯಲ್ಲಿ ತೂಗಲಿ ಅಭಿವೃದ್ಧಿ ತೊಟ್ಟಿಲು

Last Updated 10 ಡಿಸೆಂಬರ್ 2011, 5:55 IST
ಅಕ್ಷರ ಗಾತ್ರ

ಈ ಪುಟ್ಟ ಗ್ರಾಮ ಅಭಿವೃದ್ಧಿಯಲ್ಲಿ ಇನ್ನೂ `ಕಂದ~. ಜಿಲ್ಲೆಯ ಬಹಳಷ್ಟು ಗ್ರಾಮಗಳಲ್ಲಿ ಇರುವಂತೆ ಈ ಊರಿನ ಜನರನ್ನೂ ಫ್ಲೋರೈಡ್ ಸಮಸ್ಯೆ ಕಾಡುತ್ತಿದೆ. ತಾವು ಕುಡಿಯುವ ನೀರು ಶುದ್ಧವಾಗಿಲ್ಲ ಎಂಬ ಅರಿವಿದ್ದರೂ, ಪರ್ಯಾಯ ವ್ಯವಸ್ಥೆಯಾಗದೇ ಪರಿತಪಿಸುತ್ತಿದ್ದಾರೆ. ಜತೆಗೆ ಇತರ ಮೂಲಸೌಲಭ್ಯಗಳಿಂದಲೂ ಈ ಹಳ್ಳಿ ವಂಚಿತವಾಗಿದೆ.

ದಾವಣಗೆರೆ ತಾಲ್ಲೂಕಿನ `ಕಂದನಕೋವಿ~ 1,200 ಜನಸಂಖ್ಯೆ ಇರುವ ಪುಟ್ಟ ಊರು. ಸುಮಾರು 400 ಮನೆಗಳು, 204 ಕುಟುಂಬಗಳಿವೆ. 1,975 ಎಕರೆ ಭೌಗೋಳಿಕ ವಿಸ್ತೀರ್ಣವಿರುವ ಇದು ಮಳೆಯಾಶ್ರಿತ ಪ್ರದೇಶ. ಮೆಕ್ಕೆಜೋಳ ಇಲ್ಲಿನ ಪ್ರಮುಖ ಬೆಳೆಯಾಗಿದ್ದು, ಕೊಳವೆಬಾವಿ ಆಶ್ರಯಿಸಿ ನೀರಾವರಿ ಮಾಡುತ್ತಿರುವ ರೈತರು ಕಬ್ಬು, ಬಾಳೆ ಹಾಗೂ ಅಡಿಕೆ ಬೆಳೆಯುತ್ತಾರೆ. 1,656 ಎಕರೆ ಸಾಗುವಳಿ ಜಮೀನಿದೆ.

`ಕಂದನಕೋವಿ~ ಎಂಬ ಹೆಸರಿನಲ್ಲೇ ಕುತೂಹಲವಿದೆ. ಈ ಹೆಸರು ಹೇಗೆ ಬಂದಿತು ಎನ್ನುವುದಕ್ಕೆ ಯಾರ ಬಳಿಯೂ ಸ್ಪಷ್ಟ ಉತ್ತರವಿಲ್ಲ. ಬಹಳ ಹಿಂದೆ ಈ ಊರಿನಲ್ಲಿ ಪ್ಲೇಗ್ ಮಾರಿಯ ಹಾವಳಿ ಇದ್ದಾಗ ಶಿಶುವೊಂದನ್ನು (ಕಂದ) ಬಲಿ ಕೊಡಲಾಗಿತ್ತು, ಅದರಿಂದಾಗಿಯೇ ಈ ಹೆಸರು ಬಂದಿರಬಹುದು ಎಂದು ಹಿರಿಯರು ಹೇಳಿರುವುದಾಗಿ ಗ್ರಾಮಸ್ಥರು ಮಾಹಿತಿ ನೀಡುತ್ತಾರೆ.

ಆನಗೋಡು-ಅಣಜಿ ಮಾರ್ಗದಲ್ಲಿ ಆನಗೋಡಿಗೆ 5 ಕಿ.ಮೀ. ದೂರವಿರುವ ಈ ಗ್ರಾಮಕ್ಕೆ `ಕನ್ನನಕೋವಿ~ ಎಂದು, ದಾವಣಗೆರೆ ಶಾಸನದಲ್ಲಿ `ಕನ್ನಂಗೋಡು~ ಎಂದು ಹೆಸರಿದೆ ಎಂದು ಲೇಖಕಿ ಟಿ. ಗಿರಿಜಾ ಅವರ `ದಾವಣಗೆರೆ ಇದು ನಮ್ಮ ಜಿಲ್ಲೆ~ ಪುಸ್ತಕದಲ್ಲಿ ಉಲ್ಲೇಖವಿದೆ.

ಕಂದನಕೋವಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮುಡೇನಹಳ್ಳಿ, ಸಿದ್ದನೂರು, ರುದ್ರನಕಟ್ಟೆ, ಕೆಂಚಮ್ಮನಹಳ್ಳಿ, ಪವಾಡ ರಂಗವ್ವನಹಳ್ಳಿ, ಕಾಟನಾಯ್ಕನ ಹೊಸಹಳ್ಳಿ ಗ್ರಾಮಗಳು ಬರುತ್ತವೆ. 3 ಮಂದಿ ಗ್ರಾಮ ಪಂಚಾಯ್ತಿ ಸದಸ್ಯರಿದ್ದು, ಇದು ಗುಡಾಳ್ ತಾಲ್ಲೂಕು ಪಂಚಾಯ್ತಿ ಕ್ಷೇತ್ರ ಮತ್ತು ಆನಗೋಡು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಲಿಂಗಾಯತರು, ಮುಸ್ಲಿಮರು ಗೊಲ್ಲರು ಸೇರಿದಂತೆ ವಿವಿಧ ಜಾತಿ, ಜನಾಂಗದ ಜನರು ವಾಸವಾಗಿದ್ದಾರೆ. ಇಲ್ಲಿ ಆಂಜನೇಯ, ಬಸವೇಶ್ವರ, ಉಡುಸಲಾಂಬಿಕಾ, ದುರ್ಗಮ್ಮ, ಚೌಡಮ್ಮ ದೇವಸ್ಥಾನಗಳಿವೆ. ಹಳೆಯದಾಗಿದ್ದ ಆಂಜನೇಯ ದೇವಸ್ಥಾನದ ಜಾಗದಲ್ಲಿ ಹೊಸ ದೇವಸ್ಥಾನ ನಿರ್ಮಿಸಲಾಗುತ್ತಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ, ಎಎನ್‌ಎಂ ಕೇಂದ್ರ, ವ್ಯವಸಾಯ ಸೇವಾ ಸಹಕಾರ ಸಂಘ, ಪ್ರಗತಿ ಗ್ರಾಮೀಣ ಬ್ಯಾಂಕ್, ಹಾಲು ಉತ್ಪಾದಕರ ಸಹಕಾರ ಸಂಘ, ಗ್ರಂಥಾಲಯ, ಒಂದು ಕಾನ್ವೆಂಟ್ ಶಾಲೆ ಹಾಗೂ ಒಂದು ಅಂಗನವಾಡಿ ಕೇಂದ್ರ, ಪಶು ಆಸ್ಪತ್ರೆ ಇದೆ. ಹೊಸದಾಗಿ ್ಙ 10 ಲಕ್ಷ ವೆಚ್ಚದಲ್ಲಿ ಗ್ರಾಮ ಪಂಚಾಯ್ತಿಯ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. ಕೃಷಿಯೇ ಇಲ್ಲಿನ ಜನರ ಜೀವನಾಧಾರ. 1,300 ಜಾನುವಾರುಗಳಿವೆ.

ಫ್ಲೋರೈಡ್ ಸಮಸ್ಯೆ
ಗ್ರಾಮಕ್ಕೆ ಫ್ಲೋರೈಡ್ ಶಾಪವಾಗಿ ಕಾಡುತ್ತಿದೆ. ಇರುವ 3 ಕೊಳವೆಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ. ಆದರೆ, ಅನೇಕ ವರ್ಷಗಳಿಂದ ಗ್ರಾಮಸ್ಥರು ಇದೇ ನೀರನ್ನು ಕುಡಿಯುತ್ತಿದ್ದು, ಕೀಲುನೋವು, ಮಂಡಿನೋವು, ಹಲ್ಲು ಕಂದು ಬಣ್ಣಕ್ಕೆ ತಿರುಗುವುದು ಮುಂತಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

`ನೀರು ಪೊರೆ ಬಂದಂಗ ಬರ್ತೈತೆ. ಕುಡಿಯೋಕೆ ಸಪ್ಪೆ. ಇದೊಂದು ಸಮಸ್ಯೆ ಐತೆ. ಈಗ ಹೊಸ ಬೋರ್ ಹಾಕಿಸುತ್ತಿದ್ದಾರೆ. ಒಳ್ಳೆ ನೀರು ಬೇಕು ನಮಗೆ~ ಎಂದು ಗ್ರಾಮದ ಯುವ ರೈತ ಶಿವಕುಮಾರ್ ತಮ್ಮೂರಿನ ನೀರಿನ ಸಮಸ್ಯೆಯ ಕುರಿತು ವಿವರಿಸಿದರು.

ಮೂಲಸೌಲಭ್ಯಗಳಿಲ್ಲದೇ ಬಳಲುತ್ತಿರುವ ಕಂದನಕೋವಿಯಲ್ಲಿ ರಸ್ತೆ ಕೆಟ್ಟದಾಗಿದೆ. ಗ್ರಾಮದ ಮೂಲಕ ಹಾದುಹೋಗುವ ಆನಗೋಡು-ಅಣಜಿ ರಸ್ತೆ ಸಂಚಾರಯೋಗ್ಯವಾಗಿಲ್ಲ. `ಈ ರಸ್ತೆ ಸರಿಹೋದರೆ ಸಾಕು. ಎಲ್ಲಿ ನೋಡಿದರೂ ಭಾರೀ ಗುಂಡಿ ಅದಾವ. ಸರ್ಕಾರದವರು ಯಾವಾಗಲೋ ಒಮ್ಮೆ ಗುಂಡಿ ಮುಚ್ಚಿದಂಗೆ ಮಾಡ್ತಾರ. ಆದರೆ, ಮತ್ತೆ ಅದೇ ರೀತಿ ಹಾಳಾಗುತ್ತದೆ. ಮೊದಲು ರೋಡ್ ರಿಪೇರಿ ಆಗಬೇಕು~ ಎಂಬ ಬೇಡಿಕೆ ಇಟ್ಟವರು ಮತ್ತೊಬ್ಬ ಯುವ ರೈತ ರೇವಣಸಿದ್ದೇಶ್.

ಊರ ಮುಂದೊಂದು ಕೆರೆ ಇದೆ. ಆದರೆ ಅದರಿಂದ ರೈತರಿಗೇನೂ ಪ್ರಯೋಜನವಾಗುತ್ತಿಲ್ಲ. ಕೆರೆಯಲ್ಲಿ ನೀರಿಲ್ಲ. ಕೆರೆಯ ಒಡಲು ತುಂಬಿಸಬೇಕು ಎಂಬ ಬಹಳ ದಿನಗಳ ಬೇಡಿಕೆ ಇನ್ನೂ ಈಡೇರಿಲ್ಲ. `22 ಕೆರೆ ಏತನೀರಾವರಿ ಯೋಜನೆ ಜಾರಿಗೆ ಬಂದರೆ ನಮ್ಮ ಊರಿನ ಕೆರೆಗೂ ನೀರು ಬರುತ್ತದೆ. ಆದಷ್ಟು ಬೇಗ ಆ ಯೋಜನೆ ಪೂರೈಸಬೇಕು~ ಎಂದು ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಪರಮೇಶ್ವರಪ್ಪ ಒತ್ತಾಯಿಸಿದರು.

`ಊರಿನಲ್ಲಿ ಒಳ್ಳೇ ರಸ್ತೆಗಳಿಲ್ಲ, ಸಿಮೆಂಟ್ ರಸ್ತೆ ಆಗಬೇಕು. ಆಂಜನೇಯ ದೇವಸ್ಥಾನದ ಹಳೆಯ ಕಟ್ಟಡವಿದ್ದ ಸ್ಥಳದಲ್ಲಿ ಹೊಸ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಆ ಕೆಲಸ ಪೂರ್ಣವಾಗಬೇಕಿದೆ~ ಎಂದು ತಮ್ಮ ಬೇಡಿಕೆಗಳ ಬಗ್ಗೆ ಹೇಳಿಕೊಂಡವರು ಹಿರಿಯರಾದ ಕೆ.ಎಚ್. ಜಯಪ್ಪ. `ಊರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು 3 ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ. ಯಾರೂ ಅದನ್ನು ಈಡೇರಿಸಿಲ್ಲ. ಇಲ್ಲಿನ ನೀರನ್ನು ಪರೀಕ್ಷೆ ಮಾಡಿ ನೋಡಿರುವ ಡಾಕ್ಟರು, ಈ ನೀರು ಕುಡಿಯಲೇಬೇಡಿ ಎಂದು ಹೇಳಿದ್ದಾರೆ. ಆದರೆ ಏನು ಮಾಡುವುದು, ಬೇರೆ ಮಾರ್ಗವೇ ಇಲ್ಲದಂತಾಗಿದೆ. ಗಟ್ಟಿಗರು ಮಾತ್ರ ಪಕ್ಕದೂರಿಗೆ ಹೋಗಿ ನೀರು ತರುತ್ತಾರೆ~ ಎಂದು ವಿವರಿಸಿದ್ದು ಗ್ರಾಮಸ್ಥರಾದ ಕೆಂಚವೀರಪ್ಪ.

ಒಟ್ಟಿನಲ್ಲಿ `ಕಂದ~ನ ಹೆಸರಿನ ಈ ಗ್ರಾಮ ಇನ್ನೂ ಅಭಿವೃದ್ಧಿಯಲ್ಲೂ ಶೈಶವಾವಸ್ಥೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT