ಮುಖ್ಯರಸ್ತೆಯಿಂದ ಸ್ವಲ್ಪ ದೂರ. ದಾವಣಗೆರೆ ಹರಿಹರಕ್ಕೆ ಸುಮಾರು 15 ಕಿಲೋಮೀಟರ್ ಅಂತರ. ಹೇಳಿ ಕೇಳಿ ಕುಗ್ರಾಮ ಅಂದರೂ ತಪ್ಪಲ್ಲ. ರಸ್ತೆ ಡಾಂಬರು ಕಂಡಿಲ್ಲ. ಊರಿಗೆ ಬಸ್ ಬಂದಿಲ್ಲ. ಅಡಿಕೆ ತೋಟ, ಬತ್ತದ ಗದ್ದೆಯ ಹಸಿರು ರಾಶಿಯ ಮಧ್ಯೆ ದ್ವೀಪದಂತೆ ತಣ್ಣಗೆ ಕುಳಿತಿದೆ ಕುಣಿಬೆಳಕೆರೆ.

ಹರಿಹರ ತ್ಲ್ಲಾಲೂಕಿಗೆ ಸೇರುವ ಈ ಗ್ರಾಮ ಇನ್ನೂ ಹೊರಜಗತ್ತಿಗೆ ಸ್ಪಷ್ಟವಾಗಿ ತೆರೆದುಕೊಂಡಿಲ್ಲ. ಕುಣಿಬೆಳಕೆರೆ ಹೆಸರಿನ ಮೂಲ ಏನು ಎಂಬ ಬಗ್ಗೆ ಊರಿನ ಹಿರಿಯ ತಲೆಗಳು ಏನನ್ನೂ ಹೇಳುತ್ತಿಲ್ಲ. ದೇವರ ಬೆಳಕೆರೆಗೆ ಸಮೀಪವಿರುವ ಊರು. ದೇವರಬೆಳಕೆರೆ ಪಿಕ್ಅಪ್ನ ಎಡನಾಲೆ ಈ ಊರಿಗೆ ನೀರಿನ ಜೀವ ಸೆಲೆ. ಮೊದಲು ಈ ಊರಿನಲ್ಲಿ ಕೊಲೆ ಗಲಾಟೆ ಹೆಚ್ಚು ನಡೆಯುತ್ತಿತ್ತು. ಅದಕ್ಕಾಗಿ ಈ ಊರನ್ನು ಖೂನಿಬೆಳಕೆರೆ ಎಂದ ಕರೆಯಲಾಗುತ್ತಿತ್ತು. ಈಗ ಕುಣಿಬೆಳಕೆರೆ ಆಗಿದೆ ಎಂಬುದು ಅವರಿವರು ಹೇಳಿದ ಅಸ್ಪಷ್ಟ ನುಡಿ. ಪಕ್ಕದಲ್ಲೇ ಮಲ್ಲಜ್ಜಿಕೆರೆ, ಕಾನಗೆರೆ ಎಂಬ ಸಣ್ಣ ಕೆರೆಗಳು ಇವೆಯಾದರೂ ಈ ಊರಿಗೂ ಆ ಕೆರೆಗಳಿಗೂ ಇರಬಹುದಾದ ಸಂಬಂಧದ ಬಗ್ಗೆ ಸ್ಪಷ್ಟತೆಯಿಲ್ಲ.

ಹೆಸರಿನ ಮೂಲ ಏನೇ ಇರಲಿ. ಊರಿನ ತುಂಬಾ ದೇವರು ಇದ್ದಾರೆ. ಶಂಭುಲಿಂಗೇಶ್ವರ, ಉಮಾಮಹೇಶ್ವರ, ವಿಷ್ಣು, ಬಹಳ ಅಪರೂಪದ ಸೂರ್ಯದೇವರ ವಿಗ್ರಹ ಇಲ್ಲಿದೆ. ಉಮಾಮಹೇಶ್ವರ ದೇವಸ್ಥಾನದ ಆವರಣದಲ್ಲಿ ಶಿಲಾಶಾಸನವೊಂದು ಇದೆ. ಬೀರಲಿಂಗೇಶ್ವರ ಊರಿನ ದೇವರು. ಊರಿನ ಮಂದಿ ದೇವರ ಜತೆಗೆ ಹಿರಿಯರಿಗೂ ತಲೆಬಾಗಿ ನಡೆದುಕೊಳ್ಳುತ್ತಾರೆ. ದಾವಣಗೆರೆಯಿಂದ ದೇವರಬೆಳಕೆರೆ ಮಾರ್ಗವಾಗಿ ಮಲೇಬೆನ್ನೂರಿಗೆ ಹೋಗುವ ರಸ್ತೆಯಲ್ಲಿ ದೇವರಬೆಳಕೆರೆ ಪಿಕ್ಅಪ್ ಸೇತುವೆ ದಾಟಿದ ಕೂಡಲೇ ಬಲಭಾಗಕ್ಕೆ ಹೋದ ಕಚ್ಚಾರಸ್ತೆಯಲ್ಲಿ ಎರಡು ಕಿಲೋಮೀಟರ್ ಸಾಗಿದರೆ ಕುಣಿಬೆಳಕೆರೆ ಸಿಗುತ್ತದೆ.

ಮಣ್ಣಿನ ರಸ್ತೆಯಲ್ಲಿ ಊರಿಗೆ ಪ್ರವೇಶಿಸುವಾಗಲೇ ಹಳ್ಳವೊಂದು ಸ್ವಾಗತಿಸುತ್ತದೆ. ಟ್ರ್ಯಾಕ್ಟರ್, ಆಪೆ ಆಟೋಗಳ ಡರ್ಬರ್ ಸದ್ದು ಊರಿನ ನಿಶ್ಯಬ್ದತೆಯನ್ನು ಭೇದಿಸುತ್ತದೆ. ಊರಿಗೆ ಕಳಸವಿಟ್ಟಂತೆ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಬಾಪೂಜಿ ವಿದ್ಯಾಸಂಸ್ಥೆಯ ಪ್ರೌಢಶಾಲೆಯಿದೆ. ಎರಡೂ ಸಂಸ್ಥೆಗಳಿಂದಾಗಿ ಊರಿನ ಜನ ಅಕ್ಷರದ ಮುಖ ನೋಡಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಯಂತೂ ಅದ್ಭುತ ಶೈಕ್ಷಣಿಕ ವಾತಾವರಣ ಹೊಂದಿದೆ. ಅಡುಗೆ ಅಮ್ಮಂದಿರಂತೂ ಪಕ್ಕಾವೃತ್ತಿಪರರಂತೆ ತಯಾರಿಸುವ ಅಡುಗೆಗೆ ಮಕ್ಕಳು ಮನಸೋತಿದ್ದಾರೆ. ಅದಕ್ಕೆ ತಕ್ಕಂತೆ ಶೈಕ್ಷಣಿಕ ಪ್ರಗತಿಯನ್ನು ದಾಖಲಿಸುತ್ತಿದೆ.

ಹಿಂದೆ ಹೀಗಿತ್ತು
ಊರಿನಲ್ಲಿ ಸಿಕ್ಕಿದ ಶಾಸನಗಳು, ಅಪರೂಪದ ವಿಗ್ರಹಗಳು, ಉಮಾಮಹೇಶ್ವರ ದೇವಸ್ಥಾನದಲ್ಲಿರುವ ಅಪೂರ್ವ ಕೆತ್ತನೆಗಳನ್ನು ನೋಡಿದರೆ ಈ ಹಿಂದೆ ಊರಿಗೊಂದು ಭವ್ಯವಾದ ಇತಿಹಾಸವಿತ್ತು ಎನ್ನುವುದು ಸ್ಪಷ್ಟ. ಉಮಾಮಹೇಶ್ವರ ದೇವಸ್ಥಾನದ ಆಕರ್ಷಕ ದ್ವಾರ ಕೆತ್ತನೆ, ಒಳಗಿರುವ ವಿಷ್ಣು, ಈಶ್ವರ, ನಂದಿ, ಸೂರ್ಯದೇವರ ವಿಗ್ರಹಗಳ ನಿರ್ಮಾಣದಲ್ಲಿ ಜಕಣಾಚಾರಿಯ ಕೈಚಳಕವಿದೆ ಎನ್ನುತ್ತಾರೆ ಊರಿನ ಹಿರಿಯರು. ಆದರೆ, ಇದನ್ನು ಇತಿಹಾಸ ಸಂಶೋಧಕರು ಸ್ಪಷ್ಟಪಡಿಸಬೇಕಿದೆ. ಬೀರಲಿಂಗೇಶ್ವರ ದೇವಸ್ಥಾನವನ್ನು 1952-53ರಲ್ಲಿ ಆನೆಕೊಂಡದ ಹನುಮಂತಪ್ಪ ಎಂಬುವರ ನೇತೃತ್ವದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಕಟ್ಟಿದರು ಎಂದು ಸ್ಮರಿಸುತ್ತಾರೆ ಪೂಜಾರ್ ಅಜ್ಜಪ್ಪ.

ಅಡಿಕೆ ತೋಟ ಹಿಂದೆ ಚೆನ್ನಾಗಿತ್ತು. ಭದ್ರಾ ನೀರು ಹರಿಯಲಾರಂಭಿಸಿದ ಬಳಿಕ ಬತ್ತ ಬೆಳೆಯಲಾರಂಭಿಸಿದರು. ರೈತಾಪಿ ಜನ ತಮ್ಮ ಮೂಲ ಕಸುಬಿನ ಜತೆಗೆ, ಇತರ ವೃತ್ತಿಗಳನ್ನೂ ಮಾಡುತ್ತಾರೆ ಎಂದರು ಹಿರಿಯರಾದ ಕೆಂಗಸಿದ್ಧಪ್ಪ.

ಗ್ರಾಮ ಸಂಸ್ಕೃತಿ
ಪ್ರತಿ ವರ್ಷ ನವೆಂಬರ್ನಲ್ಲಿ ಬೀರಲಿಂಗೇಶ್ವರ ಜಾತ್ರೆ ನಡೆಯುತ್ತದೆ. ಯುಗಾದಿ ಬಳಿಕ ನವಮಿ ತೇರು. ಕಾರ್ತೀಕೋತ್ಸವ, ನವರಾತ್ರಿ ಪೂಜೆ, ಶ್ರಾವಣ ಮಾಸದಲ್ಲಿ ಪೂಜಾರರ ಊಟ ಎಂಬ ವಿಶೇಷ ಭೋಜನ ನಡೆಸಲಾಗುತ್ತದೆ. ಕರಿಯಮ್ಮ ದೇವಿಗೆ 5ರಿಂದ 9 ವರ್ಷಗಳಿಗೊಮ್ಮೆ ಜಾತ್ರೆ ನಡೆಸಲಾಗುತ್ತದೆ.

ಕರಿಯಮ್ಮನಿಗೆ ಕೋಣಬಲಿಯೂ ನಡೆಯುತ್ತದೆ ಎಂದರು ಪಂಚಾಯ್ತಿ ಮಾಜಿ ಅಧ್ಯಕ್ಷ ಕೆಂಗಸಿದ್ಧಪ್ಪ.
ಉಳಿದಂತೆ ವೀರಗಾಸೆ, ಭಜನೆ ಸೇರಿದಂತೆ ಹಲವಾರು ಪ್ರಕಾರಗಳ ಕಲಾತಂಡಗಳು ಈ ಊರಿನಲ್ಲಿವೆ.
ಯಾರಿದ್ದಾರೆ?

ಹಾಲು ಮತಸ್ಥರು, ಭೋವಿ, ನಾಯಕ ಸಮುದಾಯದವರು, ಪರಿಶಿಷ್ಟರು ಹೆಚ್ಚು ಇದ್ದಾರೆ. ಜಾತಿ ಮತ ಭೇದಕ್ಕೆ ಊರಿನವರು ಅಷ್ಟಾಗಿ ಪ್ರಾಶಸ್ತ್ಯ ಕೊಟ್ಟಿಲ್ಲ. ಎಲ್ಲರೂ ದೇವರ ಮುಂದೆ ಸಮಾನವಾಗಿ ಶರಣಾಗಿ ಸೌಹಾರ್ದದಿಂದ ಬಾಳುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಊರಿನಲ್ಲಿದ್ದ ಮದ್ಯದಂಗಡಿಯನ್ನೂ ತೆರವು ಮಾಡಲಾಗಿದೆ. ಕುಡುಕರಿಗೂ ದೇವರ ಭಯವಿದೆ ಎನ್ನುತ್ತಾರೆ ಅಜ್ಜಪ್ಪ.

ಅಯ್ಯೋ ನೋವು
ಒಂದೆಡೆ ಸಮೃದ್ಧಿಯ ಮುಖ. ಮತ್ತೊಂದೆಡೆ ನೋವಿನ ಛಾಯೆಯಿದೆ. ದೇವರಬೆಳಕೆರೆ ಪಿಕ್ಅಪ್ನಲ್ಲಿ ಶ್ಯಾಗಲೆ ಹಳ್ಳದ ನೀರು ಸಂಗ್ರಹವಾಗುತ್ತದೆ. ಅಲ್ಲಿಗೆ ಕುಕ್ಕವಾಡ ಸಕ್ಕರೆ ಕಾರ್ಖಾನೆಯ ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರು ಸೇರುತ್ತದೆ. ಅದೇ ನೀರು ಕುಣಿಬೆಳಕೆರೆಯಲ್ಲಿ ಕುಡಿಯಲು ಬಳಕೆಯಾಗುತ್ತದೆ. ಅಲ್ಲಿಗೆ ನೇರವಾಗಿ ರಾಸಾಯನಿಕಗಳು ದೇಹ ಪ್ರವೇಶಿಸುತ್ತದೆ. ಮತ್ತೊಂದೆಡೆ ಬೋರ್ ಹೊಡೆಸಿದರೂ ವಿಪರೀತ ಫ್ಲೋರೈಡ್ ಅಂಶದ ನೀರಿನಿಂದಾಗಿ ಅನೇಕರು ಗಂಟು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಕ್ಕಳ ಹಲ್ಲು ಹಳದಿಗಟ್ಟಿದೆ. ್ಙ 25 ಲಕ್ಷ ವೆಚ್ಚದಲ್ಲಿ ಸ್ಥಾಪಿಸಿದ ಫ್ಲೋರೈಡ್ ನೀರು ಶುದ್ಧೀಕರಣ ಘಟಕ ಬಾಗಿಲು ಮುಚ್ಚಿ ವರ್ಷಗಳೇ ಕಳೆದಿವೆ. ಗ್ರಾಮಸ್ಥರ ನೋವಿಗೆ ಯಾರೂ ಸ್ಪಂದಿಸುತ್ತಿಲ್ಲ. ತುಂಗಭದ್ರಾ ನದಿಯಿಂದ ನೀರು ಸರಬರಾಜು ಮಾಡುವ ಯೋಜನೆ, ರಾಜಕೀಯ ಹಾಗೂ ಗುತ್ತಿಗೆದಾರರ ನಡುವಿನ ಗೊಂದಲದಿಂದಾಗಿ ನನೆಗುದಿಗೆ ಬಿದ್ದಿದೆ. ಊರಿನ ಉದ್ಧಾರ, ನೋವಿಗೆ ಸ್ಪಂದಿಸುವ ಮನಸ್ಸು ಯಾವ ಜನಪ್ರತಿನಿಧಿಗೂ ಬೇಕಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಆರಂಭದಲ್ಲೇ ಗ್ರಾಮದ ವಾಸ್ತವ ಚಿತ್ರಣ ತೆರೆದಿಟ್ಟವರು ಮಲ್ಲಪ್ಪ. ಪತ್ರಕರ್ತ ಸುರೇಶ್ ಕುಣಿಬೆಳಕೆರೆ ಅವರೂ ಈ ಮಾತಿಗೆ ಧ್ವನಿಗೂಡಿಸುತ್ತಾರೆ.
ಗ್ರಾಮದಲ್ಲಿ ವೈದ್ಯಕೀಯ ಸೌಲಭ್ಯ ಇಲ್ಲ. ಸ್ವಚ್ಛತೆ ಮಾಯ. ಕಚ್ಚಾರಸ್ತೆಯಿದೆ. ಜಲ್ಲಿ ಹೊದ್ದುಕೊಂಡ ರಸ್ತೆ, ಡಾಂಬರು ಕಾಣಲು ಎಷ್ಟು ವರ್ಷಗಳು ಬೇಕೋ ಗೊತ್ತಿಲ್ಲ. ಅಂತೂ ಇದೇ ನಮ್ಮ ಬದುಕು ಎಂದು ಪಾಲಿಗೆ ಬಂದದ್ದನ್ನು ಮೌನವಾಗಿ ಅನುಭವಿಸುತ್ತಾ ಕುಣಿಬೆಳಕೆರೆ ಗ್ರಾಮಸ್ಥರ ಮೈಯ ಮೂಳೆಗಳು ಫ್ಲೋರೈಡ್ ನೀರಿಗೆ ಕರಗಿ ಹೋಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.