ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ನಗರದಲ್ಲಿ ಮುಂದುವರಿದ ನಗದು ಸಮಸ್ಯೆ

ಬಹುತೇಕ ಎಟಿಎಂ ಕೇಂದ್ರಗಳಲ್ಲಿ ‘ನೋ ಕ್ಯಾಶ್‌’ ಫಲಕ: ಗ್ರಾಹಕರ ಪರದಾಟ
ಅಕ್ಷರ ಗಾತ್ರ

ದಾವಣಗೆರೆ: ‘ನೋ ಕ್ಯಾಶ್‌’, ‘ಔಟ್‌ ಆಫ್‌ ಆರ್ಡರ್‌’–ನಗರದ ಬಹುತೇಕ ಎಟಿಎಂ ಕೇಂದ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣಸಿಗುವ ಸಾಮಾನ್ಯ ಫಲಕಗಳಿವು.

ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳ ಬಹುತೇಕ ಎಟಿಎಂ ಕೇಂದ್ರಗಳಲ್ಲಿ ನಗದು ಸಮಸ್ಯೆ ಉಂಟಾಗಿದ್ದು, ಕೇಂದ್ರದ ಭದ್ರತಾ ಸಿಬ್ಬಂದಿ ಗ್ರಾಹಕರಿಗೆ ‘ನೋ ಕ್ಯಾಶ್‌’ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಕೆಲ ಕೇಂದ್ರಗಳಲ್ಲಿ ಷಟರ್‌ಗಳನ್ನು ಅರ್ಧಕ್ಕೆ ಹಾಕಿರುವುದು ಕಂಡುಬರುತ್ತಿದೆ.

ವಿದ್ಯಾನಗರ, ನಿಜಲಿಂಗಪ್ಪ ಬಡಾವಣೆ, ಹದಡಿ ರಸ್ತೆ, ವಿದ್ಯಾರ್ಥಿ ಭವನ, ಡೆಂಟಲ್‌ ಕಾಲೇಜು ರಸ್ತೆ, ಎವಿಕೆ ಕಾಲೇಜು ರಸ್ತೆ ಒಳಗೊಂಡಂತೆ ನಗರದ ಪ್ರಮುಖ ರಸ್ತೆಗಳಲ್ಲಿನ ಕೆಲ ಎಟಿಎಂ ಕೇಂದ್ರಗಳಲ್ಲಿ ಅರ್ಧಕ್ಕೆ ಷಟರ್‌ ಹಾಕಲಾಗಿದೆ. ಇನ್ನೂ ಕೆಲ ಎಟಿಎಂ ಕೇಂದ್ರಗಳಲ್ಲಿ ‘ನೋ ಕ್ಯಾಶ್‌’ ಫಲಕ ಹಾಕಲಾಗಿದೆ.

ನಗದು ಪೂರೈಕೆ ಕೊರತೆ: ‘ರಿಸರ್ವ್‌ ಬ್ಯಾಂಕ್‌ನಿಂದ ಬ್ಯಾಂಕ್‌ಗಳಿಗೆ ನಿರೀಕ್ಷಿತ ಮಟ್ಟದಲ್ಲಿ ನಗದು ಪೂರೈಕೆಯಾಗುತ್ತಿಲ್ಲ. ಇದಕ್ಕೆ ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಕೂಡ ಕಾರಣವಿರಬಹುದು. ಹೀಗಾಗಿ ಎಟಿಎಂಗಳಿಗೆ ಅಗತ್ಯ ನಗದು ಭರ್ತಿ ಮಾಡಲು ಆಗುತ್ತಿಲ್ಲ’ ಎಂದು ಎಸ್‌ಬಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

‘ಗ್ರಾಹಕರು ಬ್ಯಾಂಕ್‌ಗಳಲ್ಲಿ ₹ 2,000 ಹಾಗೂ ₹ 500 ನೋಟುಗಳನ್ನು ಡ್ರಾ ಮಾಡಿದ ನಂತರ ಮತ್ತೆ ಆ ನೋಟುಗಳು ವಾಪಸ್ ಬ್ಯಾಂಕ್‌ಗೆ ಬರುತ್ತಿಲ್ಲ. ಆರ್‌ಬಿಐ ಕೂಡ ₹ 2,000 ಬೆಲೆಯ ನೋಟುಗಳ ಮುದ್ರಣ ನಿಲ್ಲಿಸಿದೆ’ ಎನ್ನುತ್ತಾರೆ ಅವರು.

ಡಿಜಿಟಲ್‌ ಬ್ಯಾಂಕಿಂಗ್‌ ಸಿಸ್ಟಮ್‌ಗೆ ಆದ್ಯತೆ: ‘ಕೇಂದ್ರ ಸರ್ಕಾರವು 2023ರೊಳಗೆ ದೇಶದ ಬ್ಯಾಂಕಿಂಗ್‌ ವಹಿವಾಟನ್ನು ಶೇ 60ರಷ್ಟು ಡಿಜಿಟಲ್‌ ಬ್ಯಾಂಕಿಂಗ್ ಸಿಸ್ಟಮ್‌ಗೆ ಒಳಪಡಿಸುವ ಚಿಂತನೆ ನಡೆಸಿದೆ. ಹೀಗಾಗಿ ಆರ್‌ಬಿಐನಿಂದ ನಿರೀಕ್ಷಿತ ಮಟ್ಟದಲ್ಲಿ ಹಣದ ಪೂರೈಕೆಯಾಗುತ್ತಿಲ್ಲ. ಎಟಿಎಂಗಳಿಗೂ ನಗದು ಭರ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿಯೇ ಎಟಿಎಂ ನಿರ್ವಹಣೆ ಮಾಡುವುದು ಬ್ಯಾಂಕ್‌ಗಳಿಗೆ ಕಷ್ಟವಾಗುತ್ತಿದೆ’ ಎಂದು ಹೇಳುತ್ತಾರೆ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಯರ‍್ರಿಸ್ವಾಮಿ.

ಗರಿಷ್ಠ ಮೊತ್ತ ಡ್ರಾ ಮಾಡಿಕೊಳ್ಳುತ್ತಿರುವ ಗ್ರಾಹಕರು: ‘ಗ್ರಾಹಕರು ಗರಿಷ್ಠ ಮೊತ್ತವನ್ನು ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಎಟಿಎಂಗಳಲ್ಲಿ ಹಣ ಭರ್ತಿ ಮಾಡಿದ 2–3 ದಿನಗಳಲ್ಲಿಯೇ ಎಲ್ಲವೂ ಖಾಲಿಯಾಗುತ್ತದೆ. ಅನಿವಾರ್ಯವಾಗಿ ನೋ ಕ್ಯಾಶ್‌ ಫಲಕ ಹಾಕುತ್ತಿದ್ದೇವೆ’ ಎಂದು ವಿದ್ಯಾನಗರದ ಎಟಿಎಂ ಕೇಂದ್ರದ ಭದ್ರತಾ ಸಿಬ್ಬಂದಿ ವಾಸ್ತವ ಸ್ಥಿತಿ ವಿವರಿಸುತ್ತಾರೆ.

‘ಬ್ಯಾಂಕ್‌ ಖಾತೆಯಲ್ಲಿ ಹಣವಿದೆ. ಆದರೆ, ಎಟಿಎಂನಲ್ಲಿ ನಗದು ಸಮಸ್ಯೆಯಿಂದಾಗಿ ನನ್ನ ಖಾತೆಯಲ್ಲಿನ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ. ನಿತ್ಯ ವೈದ್ಯಕೀಯ ಚಿಕಿತ್ಸೆಗೆ ಹಣದ ಅಗತ್ಯವಿದೆ. ಸಂಬಂಧಪಟ್ಟ ಅಧಿಕಾರಿ ಗಳು ಎಟಿಎಂನಲ್ಲಿ 24X7 ಹಣ ಇರುವಂತೆ ನೋಡಿಕೊಳ್ಳಬೇಕು’ ಎಂದು ತರಳಬಾಳು ಬಡಾವಣೆಯ ನಿವಾಸಿ ನಿವೃತ್ತ ಪ್ರಾಂಶುಪಾಲ ಶಿವಯೋಗಪ್ಪ ತಮ್ಮ ಸಮಸ್ಯೆ ಹೇಳಿಕೊಂಡರು.

*
ಎಟಿಎಂ ಕೇಂದ್ರದಲ್ಲಿ ನಗದು ಸಮಸ್ಯೆಯಿಂದಾಗಿ ಗ್ರಾಹಕರಿಗೆ ತೊಂದರೆಯಾಗಿದೆ. ಇದು ಬ್ಯಾಂಕ್‌ ನೌಕರರ ಕೆಲಸದ ಮೇಲೆಯೂ ಪರಿಣಾಮ ಬೀರಿದೆ.
–ರಾಘವೇಂದ್ರ ನಾಯರಿ, ಬ್ಯಾಂಕ್‌ ನೌಕರರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT