ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲೇವಾರಿಯಾಗದ ಕಸ, ಹಂದಿಗಳೊಂದಿಗೆ ಬದುಕು

ಶೋಚನೀಯ ಸ್ಥಿತಿಯಲ್ಲಿ ಎಸ್‌ಜೆಎಂ ನಗರ, ಸೇವಾದಳ ಕಾಲೊನಿ, ಎಸ್‌.ಎಂ. ಕೃಷ್ಣ ನಗರ, ಅಶೋಕ ನಗರ
ಅಕ್ಷರ ಗಾತ್ರ

ದಾವಣಗೆರೆ: ನಾಯಿ, ಹಂದಿ ಮನೆ ಮುಂದೆ ಸತ್ತು, ಕೊಳೆತು ದುರ್ನಾತ ಬರುತ್ತಿದ್ದರೂ ಅವನ್ನು ತೆಗೆದುಹಾಕುವವರು ಇಲ್ಲಿ ಇಲ್ಲ.  ಬಾಯಿ ತೆರೆದುಕೊಂಡ ಬೃಹತ್‌ ಚರಂಡಿಗಳ ಬದಿಯಲ್ಲೇ ಸಾಲು ಸಾಲು ಆಶ್ರಯ ಮನೆಗಳು. ರಸ್ತೆ ನಡುವೆಯೇ ಕೊಳಚೆ ನೀರಿನ ಗುಂಡಿಗಳು. ಅವುಗಳ ಪಕ್ಕದಲ್ಲೇ ಮಕ್ಕಳು ಊಟ ಮಾಡುವುದನ್ನು, ಆಡುವುದನ್ನು ನೋಡಿದರೆ ಸೋಜಿಗವಾಗುತ್ತದೆ. ಕಣ್ಣಾಡಿಸಿದ ಕಡೆಯೆಲ್ಲಾ ಎದ್ದುಕಾಣುವ ತ್ಯಾಜ್ಯದ ರಾಶಿ ಇಲ್ಲಿನ ವಾತಾವರಣ ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ ಹಿಡಿಯುತ್ತವೆ. ಪಾಲಿಕೆ ವ್ಯಾಪ್ತಿಯ ವಾರ್ಡ್‌ ನಂ. 1ರಲ್ಲಿ ಸುತ್ತು ಹಾಕಿದರೆ ಕಾಣುವ ಚಿತ್ರಣ ಇದು.

ದಾವಣಗೆರೆ ಹಳೆ ಪ್ರದೇಶದ ಶ್ರೀ ಜಗದ್ಗುರು ಮುರುಘರಾಜೇಂದ್ರ ನಗರ (ಎಸ್‌ಜೆಎಂ ನಗರ), ನೇಕಾರ ಕಾಲೊನಿ, ಯರಗುಂಟೆ, ಕರೂರು, ಸೇವಾದಳ ಕಾಲೊನಿ, ಅಶೋಕ ನಗರ ಹಾಗೂ ಎಸ್‌.ಎಂ. ಕೃಷ್ಣ ನಗರದ ಕೆಲ ಭಾಗಗಳು ವಾರ್ಡ್‌ ನಂ. 1ರ ವ್ಯಾಪ್ತಿಗೆ ಒಳಪಡುತ್ತವೆ. ಈ ವಾರ್ಡ್‌ನಲ್ಲಿರುವ ಬಹುತೇಕರು ಕಟ್ಟಡ ಕೂಲಿ ಕಾರ್ಮಿಕರು, ಶಿಲ್ಪಿಗಳು ಹಾಗೂ ಗುತ್ತಿಗೆ ಪೌರಕಾರ್ಮಿಕರು. ಪರಿಶಿಷ್ಟ ಜಾತಿ, ಪಂಗಡ, ಮುಸ್ಲಿಂ, ಲಿಂಗಾಯತ, ಕುರುಬ, ಕ್ರಿಶ್ಚಿಯನ್‌ ಹೀಗೆ ವಿವಿಧ ಸಮುದಾಯಕ್ಕೆ ಸೇರುವ 10 ಸಾವಿರಕ್ಕೂ ಅಧಿಕ ಜನರು ಇಲ್ಲಿ ಜೀವನ ಮಾಡುತ್ತಿದ್ದಾರೆ.

ಎಸ್‌.ಎಂ. ಕೃಷ್ಣ ನಗರ, ಸೇವಾದಳ ಕಾಲೊನಿ, ಎಸ್‌ಜೆಎಂ ನಗರಗಳಲ್ಲಿನ ಜನರು 20x30 ಅಳತೆಯಲ್ಲಿ ಒಂದಕ್ಕೊಂದು ತಾಗಿಕೊಂಡಂತೆ ನಿರ್ಮಿಸಿರುವ ಆಶ್ರಯ ಮನೆಗಳಲ್ಲಿ ಜೀವನ ಮಾಡುತ್ತಿದ್ದು, ಇಲ್ಲಿನ ಬಹುತೇಕ ಮನೆಗಳಿಗೆ ಶೌಚಾಲಯಗಳಿಲ್ಲ. ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಶೌಚಕ್ಕಾಗಿ ಮನೆ ಬಳಿಯ ಬಯಲು ಪ್ರದೇಶದಲ್ಲಿನ ಜಾಲಿ ಪೊದೆಗಳನ್ನೇ ಆಶ್ರಯಬೇಕು.

ಶೌಚ ಮಾಡಲು ಹೋದಾಗ ಮಕ್ಕಳು ಹಾಗೂ ಮಹಿಳೆಯರ ಮೇಲೆ ಹಂದಿಗಳು ದಾಳಿ ನಡೆಸುತ್ತವೆ. ಇಲ್ಲಿನ ಜನರ ನಿತ್ಯಜೀವನ ಆರಂಭವಾಗುವುದೇ ಹಂದಿಗಳ ಜೊತೆಯಲ್ಲಿಯಂತೂ ಪರಿಸ್ಥಿತಿ ಹೇಳತೀರದು. ಕೆಸರು ಗದ್ದೆಯಂತಾಗುವ ರಸ್ತೆಗಳ ಜೊತೆಗೇ ಬದುಕಬೇಕು.

ಎಸ್‌.ಎಂ. ಕೃಷ್ಣ ನಗರದ ಕೆಲ ಭಾಗಗಳಲ್ಲಿ ಬಾಕ್ಸ್‌ ಚರಂಡಿಯ ಕಾಮಗಾರಿ ಆರಂಭವಾಗಿದ್ದರೂ ಅದು ಪೂರ್ಣಗೊಂಡಿಲ್ಲ. ಮಕ್ಕಳು, ಮಹಿಳೆಯರು ನಿತ್ಯ ಅದನ್ನು ದಾಟಿಕೊಂಡೇ ಮನೆ ಸೇರಬೇಕಾಗುತ್ತದೆ. ಮಳೆ ಬಂದರಂತೂ ಚರಂಡಿ ಕಾಣುವುದೇ ಇಲ್ಲ. ಚರಂಡಿ ದಾಟುವ ವೇಳೆ ಮಕ್ಕಳು ಹಾಗೂ ಮಹಿಳೆಯರು ಚರಂಡಿಯಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡಿರುವ ಉದಾಹರಣೆಗಳಿವೆ.

ಕರೂರು, ಯರಗುಂಟೆ  ಹಾಗೂ ಅಶೋಕ ನಗರ ಪ್ರದೇಶಗಳು ಸಹ ಈ ಸಮಸ್ಯೆಗಳಿಂದ ಹೊರತಾಗಿಲ್ಲ. ಮೂಲಸೌಲಭ್ಯಗಳ ಕೊರತೆ ಕೂಡ ಇಲ್ಲಿ ಎದ್ದುಕಾಣುತ್ತದೆ.

ವಾರ್ಡ್‌ ಅಭಿವೃದ್ಧಿಗಾಗಿ ಈಗಾಗಲೇ  ₹ 4 ಕೋಟಿ ವೆಚ್ಚದಲ್ಲಿ ರಸ್ತೆ,  ಒಳಚರಂಡಿ, ಬಾಕ್ಸ್‌ ಚರಂಡಿ ಕಾಮಗಾರಿ ಆರಂಭಿಸಲಾಗಿದೆ. ಹೆಚ್ಚಿನ ಅನುದಾನಕ್ಕಾಗಿ ಜಿಲ್ಲಾಧಿಕಾರಿ ಅವರಲ್ಲಿ ₹ 75 ಲಕ್ಷ , ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ₹ 50 ಲಕ್ಷ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
–ಎಸ್‌.ಬಸಪ್ಪ, ಪಾಲಿಕೆ ಸದಸ್ಯ.
ವಿದ್ಯಾರ್ಹತೆ: 1ನೇ ತರಗತಿ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿ, ನಂತರ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

‘15 ವರ್ಷಗಳಿಂದ ಇಲ್ಲಿ ವಾಸ  ಮಾಡುತ್ತಿದ್ದೇವೆ.  ಇಂದಿಗೂ ಪಾಲಿಕೆ ಅಧಿಕಾರಿಗಳು ರಸ್ತೆ, ಒಳಚರಂಡಿ ಹಾಗೂ ಶೌಚಾಲಯದ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಕಸದ ರಾಶಿ ಮನೆ ಮುಂದೆ ಬಿದ್ದಿದ್ದರೂ ವಿಲೇವಾರಿ ಮಾಡುವುದಿಲ್ಲ. ಮನೆ ಮುಂದೆ ಪಾತ್ರೆ ತೊಳೆಯುವುದು ಕಷ್ಟ. ಹಂದಿಗಳ ಕಾಟ ಹೆಚ್ಚಾಗಿದೆ. ಅಡುಗೆ ಪಾತ್ರೆಗೇ ಅವು ಬಾಯಿ ಹಾಕುತ್ತವೆ.  ಕೆಲವು ಸಲ ಪಾತ್ರೆಗಳನ್ನು ಕಚ್ಚಿಕೊಂಡು ಓಡುತ್ತವೆ. ಅವುಗಳ ಹಿಂದೆ ಓಡಿಹೋಗಿ ಪಾತ್ರೆ ಬಿಡಿಸಿಕೊಂಡು ಬರಬೇಕು. ಹಂದಿಗಳನ್ನು ಸ್ಥಳಾಂತರ ಮಾಡಿ ಎಂದು ಪಾಲಿಕೆಯವರಿಗೆ ಸಾಕಷ್ಟು ಸಾರಿ ಹೇಳಿದರೂ ಪ್ರಯೋಜನವಾಗಿಲ್ಲ’ ಎಂದು ಎಸ್‌.ಎಂ.ಕೃಷ್ಣ ನಗರದ ನಾಗರತ್ಮಮ್ಮ ಅಳಲು ತೋಡಿಕೊಂಡರು.
-ನಾಗರತ್ಮಮ್ಮ

‘ಇಲ್ಲಿನ ಬಹುತೇಕ ಆಶ್ರಯ ಮನೆಗಳಿಗೆ ಹಕ್ಕುಪತ್ರ ಕೊಟ್ಟಿಲ್ಲ. ಪತ್ರ ಬಂದಿದೆ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಇಂದಿಗೂ ಕೊಟ್ಟಿಲ್ಲ. ಕಸ ಸಂಗ್ರಹದ ತೊಟ್ಟಿಗಳನ್ನೂ ಇಟ್ಟಿಲ್ಲ. ಹಂದಿಗಳ ಹಾವಳಿಯಿಂದಾಗಿ ಇಡೀ ರಸ್ತೆಯಲ್ಲೆಲ್ಲಾ ಕಸ ಹರಡುತ್ತದೆ. ಅದರಲ್ಲಿಯೇ ಮಕ್ಕಳು ಆಟವಾಡುತ್ತಾರೆ’ ಎನ್ನುತ್ತಾರೆ ಇದೇ ನಗರದ ಬಿ.ಕಾವ್ಯಾ.
-ಬಿ.ಕಾವ್ಯಾ

‘ರಸ್ತೆ ಮಧ್ಯ ಒಳಚರಂಡಿ ಕಾಮಗಾರಿ ಆರಂಭಿಸಿ ಒಂದು ವಾರ ಕಳೆದರೂ ಇನ್ನೂ ಮುಗಿದಿಲ್ಲ. ಮಳೆಗಾಲ ಆರಂಭವಾಗಿದ್ದರಿಂದ ಮಕ್ಕಳು ಚರಂಡಿಯಲ್ಲಿ ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ’ ಎಂದು ಎಸ್‌ಜೆಎಂ ನಗರದ ದಾದಾಪೀರ್‌ ಹಾಗೂ ವಿನಯ್‌ಕುಮಾರ್‌ ದೂರಿದರು.

‘ಮನೆ ಮುಂದೆ ನಾಯಿ ಸತ್ತು, ಕೊಳೆತು ದುರ್ನಾತ  ಬರುತ್ತಿದ್ದರೂ,  ಪಾಲಿಕೆಯವರು ಅದನ್ನು  ತೆಗೆದುಹಾಕಿಲ್ಲ. ಇಲ್ಲಿನ  ದೊಡ್ಡ ಚರಂಡಿಯಲ್ಲಿ  ವೃದ್ಧೆಯೊಬ್ಬರು ಬಿದ್ದು  ಸೊಂಟ ಮುರಿದು  ಕೊಂಡರು. ಮಕ್ಕಳು ಕೂಡ ಬಿದ್ದು ಕೈ ಮುರಿದುಕೊಂಡಿದ್ದಾರೆ. ಮಳೆ ಬಂದಾಗ ಚರಂಡಿ ತುಂಬುತ್ತದೆ. ಆ ಸಮಯದಲ್ಲಿ ಎಲ್ಲಿ ಮಕ್ಕಳು ಕಳೆದುಹೋಗುತ್ತಾರೋ
ಎನ್ನುವ ಭಯ ಇದೆ’ ಎಂದು ಸೇವಾದಳ ಕಾಲೊನಿಯ ಅಭಿಲಾಷಾ ಆತಂಕದಿಂದ ನುಡಿದರು.

-ಅಭಿಲಾಷಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT