ಪತ್ರಿಕೆ ಓದಿನಿಂದ ಇಂಗ್ಲಿಷ್ ಕಲಿಕೆ ವೃದ್ಧಿ: ಒಲಿವರ್ ಲೆಸ್ಲಿ

7
‘ಡೆಕ್ಕನ್‌ ಹೆರಾಲ್ಡ್’ ವತಿಯಿಂದ ವಿದ್ಯಾರ್ಥಿಗಳಿಗೆ ಪರಿಚಯ ಕಾರ್ಯಕ್ರಮ

ಪತ್ರಿಕೆ ಓದಿನಿಂದ ಇಂಗ್ಲಿಷ್ ಕಲಿಕೆ ವೃದ್ಧಿ: ಒಲಿವರ್ ಲೆಸ್ಲಿ

Published:
Updated:
Deccan Herald

ರಾಮನಗರ: ‘ಇಂಗ್ಲಿಷ್ ಒಂದು ಸಂವಹನ ಭಾಷೆಯಾಗಿ ಅತಿ ಮುಖ್ಯವಾಗಿದೆ. ದಿನಪತ್ರಿಕೆಗಳ ಓದಿನಿಂದ ನಮ್ಮಲ್ಲಿನ ಭಾಷೆ ಕೌಶಲವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ’ ಎಂದು ದಿ ಪ್ರಿಂಟರ್ಸ್ ಮೈಸೂರು ಪ್ರೈ.ಲಿ. ಕಂಪನಿಯ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಒಲಿವರ್ ಲೆಸ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಗುರುವಾರ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್’ ಸಹಯೋಗದಲ್ಲಿ ಆಯೋಜಿಸಿದ್ದ ಪರಿಚಯ ಕಾರ್ಯಕ್ರಮದಲ್ಲಿ ಅವರು ‘ವಿದ್ಯಾರ್ಥಿಗಳ ಕಲಿಕೆಯಲ್ಲಿ ಮಾಧ್ಯಮದ ಪಾತ್ರ’ ಕುರಿತು ಉಪನ್ಯಾಸ ನೀಡಿದರು. ‘ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯು ಕಳೆದ ಏಳು ದಶಕಗಳಿಂದ ರಾಜ್ಯದ ಜನರ ನೆಚ್ಚಿನ ಇಂಗ್ಲಿಷ್ ಪತ್ರಿಕೆಯಾಗಿ ಮನೆಮಾತಾಗಿದೆ. ಇಂಗ್ಲಿಷ್ ಅನ್ನು ಕಲಿಯಬಯಸುವ ಸ್ಪರ್ಧಾತ್ಮಕ ಮನಸ್ಸುಗಳಿಗೆ ದಾರಿದೀಪವೂ ಆಗಿದೆ. ಪತ್ರಿಕೆಯ ಓದಿನಿಂದ ವಿದ್ಯಾರ್ಥಿಗಳು ಖಂಡಿತ ಭಾಷೆಯ ಕಲಿಕೆಯಲ್ಲಿ, ವ್ಯಕ್ತಿತ್ವದಲ್ಲಿ ಪ್ರಗತಿ ಕಾಣಬಹುದಾಗಿದೆ’ ಎಂದರು.

‘ಸರ್ಕಾರಿ ಶಾಲೆ–ಕಾಲೇಜುಗಳಲ್ಲಿಯೇ ಹೆಚ್ಚಿನ ಪ್ರತಿಭಾವಂತರು ಇದ್ದಾರೆ. ಆದರೆ ಇಂಗ್ಲಿಷ್‌ ಕಲಿಕೆಯ ಸಮಸ್ಯೆಯಿಂದಾಗಿ ಅವರೆಲ್ಲ ಅವಕಾಶ ವಂಚಿತರಾಗುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ ಪತ್ರಿಕೆಯು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ’ ಎಂದರು.

‘ಇಂದು ವಿದ್ಯಾರ್ಥಿಗಳಲ್ಲಿ ಅಂಕ ಗಳಿಕೆಯ ಜೊತೆಗೆ ವೃತ್ತಿಗೆ ಅವಶ್ಯವಾದ ಕೌಶಲವೂ ಅಗತ್ಯ. ನಿಮ್ಮ ಹಾವ–ಭಾವ, ನಡವಳಿಕೆಯೂ ನಿಮ್ಮ ಯಶಸ್ಸನ್ನು ನಿರ್ಧರಿಸುತ್ತದೆ. ನೀವು ಯಾವ ಕಾಲೇಜಿನಲ್ಲಿ ಓದಿದ್ದೀರಿ ಎಂಬುದು ಮುಖ್ಯವಲ್ಲ. ಎಷ್ಟು ಬುದ್ಧಿವಂತರಾಗಿದ್ದೀರಿ ಎಂಬುದು ಮುಖ್ಯ. ಇಂದು ಬಿ.ಇ. ಪದವೀಧರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳೂ ಹೇರಳವಾಗಿವೆ. ಮೊದಲ ಎರಡು ವರ್ಷ ಉದ್ಯೋಗದ್ದಲ್ಲಿದ್ದು ಪ್ರಾಯೋಗಿಕ ಅನುಭವ ಪಡೆಯಿರಿ. ನಂತರ ಸ್ವಂತ ಉದ್ದಿಮೆಗೆ ಪ್ರಯತ್ನ ಪಟ್ಟರೆ ಯಶಸ್ಸು ಸಿಗುತ್ತದೆ’ ಎಂದು ಸಲಹೆ ನೀಡಿದರು.

ಜಾಗತಿಕ ಕಂಪನಿಗಳಲ್ಲಿ ಉದ್ಯೋಗ ಪಡೆಯಬಯಸುವವರಿಗೆ, ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವವರಿಗೆ ಇಂಗ್ಲಿಷ್ ಕಲಿಕೆ ಕಡ್ಡಾಯ. ಗ್ರಾಮೀಣ ಭಾಗದಿಂದ ಬಂದಿರುವ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಅದನ್ನೂ ಒಂದು ಕಡ್ಡಾಯ ಭಾಷೆ ಎಂದು ಪರಿಗಣಿಸಿ ಅಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಎಂಜಿನಿಯರಿಂಗ್‌ ಕಾಲೇಜಿನ ಸಿವಿಲ್‌ ವಿಭಾಗದ ಮುಖ್ಯಸ್ಥ ಪ್ರೊ. ನಾಗೇಶ್‌, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಮಧು, ಪ್ರಾಧ್ಯಾಪಕರಾದ ಡಾ. ಸೀನಪ್ಪ, ಚೈತ್ರಾ ಬಾಣಸವಾಡಿ, ಸಿ. ಚನ್ನೇಗೌಡ, ಉಮೇಶ್‌, ಪ್ರಶಾಂತ್‌, ಪತ್ರಿಕೆಯ ಪ್ರಸರಣ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಜಗನ್ನಾಥ ಜೋಯಿಸ್‌, ವ್ಯವಸ್ಥಾಪಕ ಬಸವರಾಜು, ಸಹಾಯಕ ವ್ಯವಸ್ಥಾಪಕ ಕರಿಬಸವಯ್ಯ ಹಿರೇಮಠ ಇದ್ದರು. ಕಾಲೇಜಿನ ನೂರಾರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಪಾಲ್ಗೊಂಡರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !