ಆದರ್ಶ ಪಾಲನೆ ರಾಮ ಮಂದಿರ ನಿರ್ಮಾಣಕ್ಕೆ ದಾರಿ

7
ಉತ್ತರಾಖಂಡದ ಕಪಿಲಾಶ್ರಮದ ರಾಮಚಂದ್ರ ಭಾರತಿ ಸರಸ್ವತಿ ಸ್ವಾಮೀಜಿ ಪ್ರತಿಪಾದನೆ

ಆದರ್ಶ ಪಾಲನೆ ರಾಮ ಮಂದಿರ ನಿರ್ಮಾಣಕ್ಕೆ ದಾರಿ

Published:
Updated:
Prajavani

ಶಿವಮೊಗ್ಗ: ರಾಮನ ಆದರ್ಶ ಪಾಲಿಸಿದರೆ ಸಾಕು ರಾಮಮಂದಿರ ನಿರ್ಮಾಣವಾಗುತ್ತದೆ ಎಂದು ಉತ್ತರಾಖಂಡದ ಕಪಿಲಾಶ್ರಮದ ರಾಮಚಂದ್ರ ಭಾರತಿ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಸೈನ್ಸ್ ಮೈದಾನದಲ್ಲಿ ಭಾನುವಾರ ಧರ್ಮಜಾಗರಣ ಸಮನ್ವಯ ಹಮ್ಮಿಕೊಂಡಿದ್ದ ಲೋಕ ಕಲ್ಯಾಣಾರ್ಥ ಮಹಾ ಐಕ್ಯಮಂತ್ರ ಹೋಮ ಹಾಗೂ ಸಾಮಾಜಿಕ ಸಾಮರಸ್ಯಕ್ಕಾಗಿ ಸತ್ಯನಾರಾಯಣ ಸ್ವಾಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಧರ್ಮವೆಂದರೆ ನೆನೆಪಾಗುವುದು ಶ್ರೀರಾಮ, ಧರ್ಮವನ್ನು ರಕ್ಷಣೆ ಮಾಡುವುದು ನಮ್ಮ ಗುರಿ. ನಾವೆಲ್ಲರೂ ಒಂದು, ಬಂಧು, ಹಿಂದೂ ಎಂಬ ತತ್ವ ಪಾಲನೆ ಮಾಡುವವನೆ ನಿಜವಾದ ಹಿಂದೂ. ಹಿಂದೂಗಳು ಹಿಂದೂಗಳನ್ನು ವಿಜಯಿಸಬೇಕು ಎನ್ನುವುದಕ್ಕಿಂತ ಹಿಂದುತ್ವ ರಕ್ಷಕರನ್ನು ವಿಜಯಿಸಬೇಕು. ಏಕೆಂದರೆ ರಾಮನ ಹೆಸರಿಟ್ಟುಕೊಂಡು ರಾವಣನಂತೆ ಆಡುವ ಮುಖ್ಯಮಂತ್ರಿಗಳನ್ನು ನಾವು ಕಂಡಿದ್ದೇವೆ ಎಂದು ಕುಟುಕಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯರ್ಶಿ ಬಿ.ಎಲ್.ಸಂತೋಷ್ ಮಾತನಾಡಿ, ನಂಬಿದರೆ ದೇವರು ಒಲಿವ ಎಂದು ದಾಸರು ಹೇಳಿದ್ದಾರೆ. ಹೃದಯ ನಿಷ್ಕಲ್ಮಶ, ನಿರ್ಮಲ ವಾಗಿದ್ದು, ಬೇಡಿದರೆ ದೇವರು ಒಲಿಯುತ್ತಾನೆ. ಅದಕ್ಕೆ ಭಕ್ತ ಸಿರಿಯಾಳ, ಭಕ್ತ ಕನಕದಾಸರು ಸೇರಿ ಅನೇಕ ಮಹನೀಯರು ಸಾಕ್ಷಿ ಎಂದು ಸ್ಮರಿಸಿದರು.

 ಲೋಕ ಕಲ್ಯಾಣ, ಸಾಮಾಜಿಕ ಸಾಮರಸ್ಯಗಳಲ್ಲಿ ತಮ್ಮ ಪಾತ್ರ ಏನು ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ಇಂತಹ ಮನೋಭಾವ ಹಿಂದು ಧರ್ಮ ಕಲಿಸುತ್ತದೆ. ನಮ್ಮ ದೇಶದಲ್ಲಿ ಒಟ್ಟಿಗೆ ಸೇರಿ ಮಾಡುವ ಕೆಲಸಕ್ಕೆ ಬೆಲೆ ಇದೆ. ಒಟ್ಟಿಗೆ ಮಾಡುವ ಕೆಲಸದಲ್ಲಿ ಶಕ್ತಿ ಹೆಚ್ಚಿರುತ್ತದೆ. ಎಲ್ಲಿ ಒಳ್ಳೆಯವರು ಸೇರುತ್ತಾರೆ ಅಂಥ ಕಡೆ ನಾನು ಇರುತ್ತೇನೆ ಎಂದು ಭಗವಾನ್ ಶ್ರೀಕೃಷ್ಣ ಹೇಳುತ್ತಾನೆ. ಇಂತಹ ಸಾಮೂಹಿಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಗವಂತ ಇದ್ದೇ ಇರುತ್ತಾನೆ ಎಂದು ಬಣ್ಣಿಸಿದರು.

ಚಿಕ್ಕೋಡಿಯ ಜೋಡುಕುರುಳಿ ಮಠದ ಚಿದ್ಘಾನಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಸಾಮೂಹಿಕ ಪೂಜೆಯಿಂದ ಶಕ್ತಿ ಹೊಮ್ಮುತ್ತದೆ. ಒಬ್ಬರೆ ಮಾಡುವುದರಿಂದ ಲಕ್ಷ್ಯ ಬೇರೆಡೆ ಹೋಗುತ್ತದೆ. ಸಾಮೂಹಿಕವಾಗಿ ಮಾಡುವುದರಿಂದ ಭಗವಂತನ ಕಡೆ ಧ್ಯಾನ ಹೆಚ್ಚಿರುತ್ತದೆ. ಸಾಮೂಹಿಕ ಆರಾಧನೆ ಶಕ್ತಿಯನ್ನು ಜಾಗೃತ ಮಾಡುತ್ತದೆ ಎಂದರು.

ಸಮನ್ವಯದ ಗೌರವ ಅಧ್ಯಕ್ಷ ಸುರೇಶ ಬಾಳೆಗುಂಡಿ, ಎಚ್.ಕೆ.ಮಹೇಂದ್ರಕುಮಾರ್, ಪ್ರಾಂತ್ಯ ಪ್ರಮುಳ ಮುನಿಯಪ್ಪ, ಜಗದೀಶ್, ಬಿ.ಎ.ರಂಗನಾಥ್ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !