ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಜಿ+3 ಮಾದರಿ ಮನೆ ನಿರ್ಮಾಣಕ್ಕೆ ಸಚಿವ ಜೋಶಿ ಭೂಮಿಪೂಜೆ

Last Updated 27 ಮಾರ್ಚ್ 2023, 12:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಧಾರವಾಡ ಜಿಲ್ಲೆಯಲ್ಲಿ ₹179 ಕೋಟಿ ಹೂಡಿಕೆ ಮಾಡಿ ಎಲೆಕ್ಟ್ರಾನಿಕ್‌ ಸಾಮಗ್ರಿಗಳ ಉತ್ಪಾದನಾ ಘಟಕ ಆರಂಭಿಸಲು ಕೈಗಾರಿಕೆಗಳು ಮುಂದೆ ಬಂದಿದ್ದು, ಮುಂಬರುವ ದಿನಗಳಲ್ಲಿ 17 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ’ ಎಂದು ಕೇಂದ್ರ ಸಚವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ತಾರಿಹಾಳ ಬ್ರಿಜ್ ಬಳಿ ಜಿ+3 ಮಾದರಿಯ ಮನೆಗಳ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ಧಾರವಾಡ ಜಿಲ್ಲೆಯಲ್ಲಿ ನಿರೀಕ್ಷಿಸಿದಷ್ಟು ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಉದ್ಯಮಿಗಳನ್ನು ಕರೆತರುವ ಪ್ರಯತ್ನ ಸರ್ಕಾರ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಸಾಕಷ್ಟು ಕಂಪನಿಗಳು ಇಲ್ಲಿ ಕಾರ್ಯ ನಿರ್ವಹಿಸಲಿವೆ’ ಎಂದರು.

‘ಲೋಹಿಯಾ ನಗರದಲ್ಲಿ ₹180 ಕೋಟಿ ವೆಚ್ಚದಲ್ಲಿ ಕ್ರೀಡಾ ಸಮುಚ್ಛಯ ನಿರ್ಮಾಣ ಮಾಡಿ, ಕ್ರೀಡಾ ಗ್ರಾಮವನ್ನಾಗಿ ಮಾಡಲಾಗುವುದು. ಸಮುಚ್ಛಯದ ಪಕ್ಕವೇ ನಾಲ್ಕು ಎಕರೆ ಜಾಗವಿದ್ದು, ಅಲ್ಲಿ ಕ್ರೀಡಾ ವಸತಿ ನಿಲಯ, ಕ್ರೀಡಾ ಶಾಲೆ ನಿರ್ಮಾಣ ಮಾಡುವ ಯೋಜನೆಯಿದ್ದು, ಐದು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.

‘ಸೂರಿಲ್ಲದ ಕುಟುಂಬ ಇರಬಾರದು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ. ಮನೆಯಿಲ್ಲದ ಪ್ರತಿಯೊಬ್ಬರಿಗೂ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡಲಾಗುತ್ತಿದೆ. ತಾರಿಹಾಳದಲ್ಲಿ 1,200ಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗುತ್ತಿದ್ದು, ಕನಿಷ್ಠ ಸೌಲಭ್ಯ ಒದಗಿಸಲು ಮುಂದಾಗಬೇಕು. ಕಿರಾಣಿ‌ ಅಂಗಡಿ, ಹೇರ್‌ ಕಟಿಂಗ್‌ ಶಾಪ್ ನಿರ್ಮಾಣವಾದರೆ, ಬರುವ ಬಾಡಿಗೆಯನ್ನು ಇತರ ಉದ್ದೇಶಕ್ಕೆ ಬಳಸಿಕೊಳ್ಳಬಹುದು. ಸರ್ಕಾರವೇ ಮನೆ ನಿರ್ಮಿಸಿಕೊಡಲಿದ್ದು, ಯಾರೇ ಹಣ ಕೇಳಿದರು ನೀಡಬಾರದು. ಕಾಂಗ್ರೆಸ್‌ ಏಜೆಂಟ್‌ರ ಪಕ್ಷವಾಗಿದ್ದು, ಈ ಹಿಂದೆ ಹಣ ನೀಡಿದವರಿಗಷ್ಟೇ ಮನೆ ಹಂಚಿ ಮಾಡುತ್ತಿತ್ತು’ ಎಂದು ಆರೋಪಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ, ‘ಕ್ಷೇತ್ರದ ಬಡ ಜನರಿಗೆ ಮನೆ ನಿರ್ಮಿಸಿಕೊಡುವ ಕೆಲಸಕ್ಕೆ ಇಂದು ಚಾಲನೆ ನೀಡಲಾಗಿದೆ. ಎರಡು ವರ್ಷಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದ್ದು, ತಾಂತ್ರಿಕತೆ ಬಳಸಿಕೊಂಡು ಗುಣಮಟ್ಟದ ಕಾಮಗಾರಿ‌ ನಡೆಯಲಿದೆ. ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಏಳುಸಾವಿರ ಮನೆಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಕ್ಷೇತ್ರದಲ್ಲಿ 6,900 ಕುಟುಂಬಗಳು 63 ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿವೆ. 3 ಸಾವಿರ ಕುಟುಂಬಗಳಿಗೆ‌ ಅಡಮಾನ ಋಣಮುಕ್ತ ಪತ್ರ ನೀಡುವ ಯೋಜನೆಯಿದೆ’ ಎಂದು ತಿಳಿಸಿದರು.

ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರಿ, ಸತೀಶ ಹಾನಗಲ್, ಬಸವರಾಜ ಗರಗ, ಹನಮಂತ ಹರಿವಾಣ, ಅಶೋಕ ವಾಲಿಕಾರ, ಮಹೇಶ ಚಂದರಗಿ, ಸೀಮಾ‌ ಶೆಟ್ಟಿ, ರೂಪಾ‌ ಮಂಗಾಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT