ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಹಾಶ್ಮಿ

Published 26 ಜನವರಿ 2024, 21:11 IST
Last Updated 26 ಜನವರಿ 2024, 21:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್‌) ಸರ್ವಾಧಿಕಾರಿ ಹಿಟ್ಲರ್‌ ನೀತಿ ಅನುಸರಿಸುತ್ತಿದ್ದು, ಇದರಿಂದ ದೇಶವನ್ನು ರಕ್ಷಿಸಬೇಕಿದೆ. ಎಲ್ಲೆಡೆ ಆವರಿಸಿರುವ ಅಘೋಷಿತ ತುರ್ತು ಪರಿಸ್ಥಿತಿ ಹೋಗಲಾಡಿಸಬೇಕಿದೆ’ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ಶಬನಂ ಹಾಶ್ಮಿ ಹೇಳಿದರು.

ಸಂವಿಧಾನ ಸುರಕ್ಷಾ ಸಮಿತಿಯಿಂದ ಶುಕ್ರವಾರ ನಡೆದ ‘ಭಾರತದ ಪ್ರಸ್ತುತ ಪರಿಸ್ಥಿತಿ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗಣರಾಜ್ಯೋತ್ಸವದ ಸಂದರ್ಭದಲ್ಲಿ ಎಲ್ಲೆಡೆ ತಿರಂಗ ಧ್ವಜ ಕಾಣುತ್ತಿದ್ದೆವು. ಆದರೆ, ಕೆಲ ದಿನಗಳಿಂದ ದೇಶದಲ್ಲೆಡೆ ತಿರಂಗದ ಬದಲು ಬೇರೆಯದ್ದೇ ಧ್ವಜ ಹೆಚ್ಚು ಕಾಣುತ್ತಿದ್ದೇವೆ’ ಎಂದು ಹೇಳಿದರು.

‘ದೇಶದಲ್ಲಿ ಕೆಲವರ ಧ್ವನಿ ಮಾತ್ರ ಕೇಳುತ್ತಿದೆ. ಅಪಾಯಕಾರಿ ಬೆಳವಣಿಗೆಗಳ ವಿರುದ್ಧ ಮಾತನಾಡಿದರೆ, ಇ.ಡಿ, ಐ.ಟಿ ದಾಳಿ ನಡೆಸಲಾಗುತ್ತಿದೆ. ನಾವೇನು ಧರಿಸಬೇಕು, ಯಾವ ಆಹಾರ ಸೇವಿಸಬೇಕು, ಯಾರೊಂದಿಗೆ ಮದುವೆ ಆಗಬೇಕು, ಯಾರನ್ನು ಪ್ರೀತಿಸಬೇಕು ಎಂಬುದನ್ನು ಯಾರೋ ನಿರ್ಧರಿಸುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗುಜರಾತ್‌ನಲ್ಲಿ ಮೂಡಿಸಲಾದ ಭಯದ ವಾತಾವರಣವನ್ನು ದೇಶದಾದ್ಯಂತ ವಿಸ್ತರಿಸಲು ಯೋಜನೆ ರೂಪಿಸಲಾಗುತ್ತಿದೆ. ಈಗಲೂ ಅಲ್ಲಿ ಭಯದ ವಾತಾವರಣವಿದೆ’ ಎಂದು ಕಳವಳ ವ್ಯಕ್ತಪಡಿಸಿದರು. 

ಅಭಿಯಾನ: ‘ಫೆಬ್ರುವರಿ 21ರಂದು ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರಿನ ಕೋಟೆ ಬಳಿ ರಾಷ್ಟ್ರಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕೋಟೆವರೆಗೆ ಮೆರವಣಿಗೆ ನಡೆಸಲಾಗುವುದು. ರಾಣಿ ಚನ್ನಮ್ಮ ಅಭಿಯಾನದ ಮೂಲಕ ಮಹಿಳಾ ಸಂಘಟನೆಗಳನ್ನು ಒಗ್ಗೂಡಿಸಲಾಗುವುದು’ ಎಂದು ಹೇಳಿದರು.

ಸಮಿತಿಯ ಸಂಚಾಲಕರಾದ ಮಹೇಶ ಪತ್ತಾರ, ಅಶ್ರಫ್ ಅಲಿ ಬಶೀರ್‌ ಮತ್ತು ಅನ್ವರ್‌ ಮುದೋಳ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT