ಭಾನುವಾರ, ಅಕ್ಟೋಬರ್ 2, 2022
20 °C
ಶಾಸಕರ ಎದುರು ಅಳಲು ತೋಡಿಕೊಂಡ ಪಾಲಿಕೆ ಆಟೊ ಟಿಪ್ಪರ್‌ ಚಾಲಕರು

ಪ್ರಶ್ನಿಸಿದ್ರ ಕೆಲ್ಸದಿಂದ ತೆಗಿತೀನಿ ಅಂತಾರ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಕೈಗೆ ಬರೋದೆ ₹14 ಸಾವಿರ ಸಂಬಳ, ಅದ್ರಲ್ಲಿ ಗುತ್ತಿಗೆದಾರರಿಗೆ ₹3 ಸಾವಿರ ಕೊಡ್ಬೇಕು. ಕೊಟ್ಟಿಲ್ಲಾಂದ್ರ ಮುಂದಿನ ತಿಂಗಳ ಸಂಬಳ ಕಟ್‌ ಮಾಡಿ ಕೊಡ್ತಾರ. ಏನಾದ್ರ ಪ್ರಶ್ನೆ ಮಾಡಿದ್ರೆ, ಕೆಲ್ಸದಿಂದಲೇ ತೆಗ್ದ ಹಾಕೋ ಮಾತಾಡಿ, ಬೆದರಿಸ್ತಾರ...’

ಹುಬ್ಬಳ್ಳಿ ಮಹಾನಗರ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ಸೋಮವಾರ ಆಟೊ ಟಿಪ್ಪರ್‌ ಚಾಲಕರ, ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಚಾಲಕರು ಶಾಸಕರ ಎದುರು ತಮ್ಮ ಅಳಲು ತೋಡಿಕೊಂಡಿದ್ದು ಹೀಗೆ.

‘ಮೂರು ವರ್ಷಗಳಿಂದ ನಾವು ಈ ಸಂಕಷ್ಟ ಅನುಭವಿಸುತ್ತಿದ್ದೇವೆ. ಮೇಲಧಿಕಾರಿಗಳಿಗೆ ಅಥವಾ ಶಾಸಕರಿಗೆ ತಿಳಿಸಿದರೆ ಕೆಲಸ ಹೋಗುತ್ತದೆ ಎನ್ನುವ ಭಯದಿಂದ ಇಷ್ಟು ವರ್ಷ ಸುಮ್ಮನಿದ್ದೆವು. ಇತ್ತೀಚೆಗೆ ಟಿಪ್ಪರ್‌ ಚಾಲಕ ರುದ್ರಪ್ಪ ಅವರು ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಮೃತಪಟ್ಟಾಗ, ತಾಳ್ಮೆ ಕಟ್ಟೆ ಒಡೆದು ಆಕ್ರೋಶ ಹೊರ ಬಂದಿದೆ. ಅದು ಶಾಸಕ ಪ್ರಸಾದ ಅಬ್ಬಯ್ಯ ಗಮನಕ್ಕೆ ಬಂದಾಗ, ಸಮಸ್ಯೆ ಹೇಳಿಕೊಂಡಿದ್ದೇವೆ’ ಎಂದು ಚಾಲಕ ಚಂದ್ರಶೇಖರ ಶಿರಗುಪ್ಪಿ ಹೇಳಿದರು.

‘ಗುತ್ತಿಗೆ ಪಡೆದ ಆದರ್ಶ ಎಂಟರ್‌ಪ್ರೈಸೆಸ್‌ ಅವರು ಆಟೊ ಟಿಪ್ಪರ್‌ ದುರಸ್ತಿಗೆ ಬಂದರೆ ನೀವೇ ಸರಿ ಮಾಡಿಸಿಕೊಳ್ಳಿ ಎನ್ನುತ್ತಾರೆ. ಆಕ್ಷೇಪ ವ್ಯಕ್ತಪಡಿಸಿದರೆ ಚಾವಿ ನೀಡಿ ಮನೆಗೆ ಹೋಗಿ ಎಂದು ಬೆದರಿಸುತ್ತಾರೆ. ಪ್ರತಿ ತಿಂಗಳ ವೇತನದಲ್ಲಿ ಅವರಿಗೆ ಕಮಿಷನ್ ನೀಡಿಲ್ಲವೆಂದು 16 ಮಂದಿಯನ್ನು ಕೆಲಸದಿಂದ ತೆಗೆದಿದ್ದಾರೆ’ ಎಂದು ಸಭೆಯ ಗಮನಕ್ಕೆ ತಂದರು.

‘ಎಲ್ಲ ಚಾಲಕರು ಒಗ್ಗಟ್ಟಿನಿಂದ ಇದ್ದು, ಸಮಸ್ಯೆ ಎದುರಿಸಬೇಕು. ಒಬ್ಬನೇ ಒಬ್ಬ ಚಾಲಕನನ್ನು ಕೆಲಸದಿಂದ ತೆಗೆದರೆ, ಎಲ್ಲರೂ ವಾಹನದ ಚಾವಿ ನೀಡಿ ಹೊರಬನ್ನಿ. ನಿಯತ್ತಾಗಿ ದುಡಿದ ನಿಮ್ಮ ವೇತನದಲ್ಲಿ ಅವರಿಗೆ ಯಾಕೆ ನೀಡುತ್ತೀರಿ? ಅವರಿಗೆ ಎಷ್ಟು ಅಹಂಕಾರ, ಹಣದ ಮದ ಇದೆ ಎಂದು ನೋಡೋಣ. ಯಾವ ಗುತ್ತಿಗೆದಾರರಿಗೂ ಹೆದರುವ ಅಗತ್ಯವಿಲ್ಲ’ ಎಂದು ಚಾಲಕರಿಗೆ ಧೈರ್ಯ ತುಂಬಿದ ಶಾಸಕ ಪ್ರಸಾದ ಅಬ್ಬಯ್ಯ, ‘ಪಾಲಿಕೆ ಆರೋಗ್ಯ ನಿರೀಕ್ಷಕರು ಹಾಗೂ ಎಸ್‌ಡಬ್ಲ್ಯುಎಂ ಅಧಿಕಾರಿಗಳು ಚಾಲಕರ ಪರವಾಗಿರಬೇಕೇ ಹೊರತು, ಗುತ್ತಿಗೆದಾರರ ಪರವಲ್ಲ. ಅಧಿಕಾರಿಗಳಿಗೆ ಹಣ ನೀಡಬೇಕು ಎಂದು ಗುತ್ತಿಗೆದಾರರು ಚಾಲಕರಿಂದ ಹಣ ಪಡೆಯುತ್ತಾರೆ ಎಂದರೆ ಏನರ್ಥ? ನೀವು ಅಧಿಕಾರಿಗಳೇ? ಬಿಲ್ ಪಾವತಿಸುವುದೊಂದೇ ನಿಮ್ಮ ಕೆಲಸವೇ?’ ಎಂದು ಗರಂ ಆದರು.

ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆಯುಕ್ತ ಬಿ. ಗೋಪಾಲಕೃಷ್ಣ, ‘ಘನತ್ಯಾಜ್ಯ ಮತ್ತು ನಿರ್ವಹಣೆ ವಿಭಾಗದಲ್ಲಿ ಆಟೊ ಟಿಪ್ಪರ್‌ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರ ಮೇಲೆ ಗುತ್ತಿಗೆದಾರರು ದಬ್ಬಾಳಿಕೆ ನಡೆಸಿ, ವೇತನವನ್ನು ಕಡಿತಗೊಳಿಸಿ ನೀಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ತನಿಖೆ ನಡೆಸಿ, ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಅಧಿಕಾರಿಗಳು ಹಣ ಪಡೆಯುತ್ತಿರುವ ಆರೋಪದ ಬಗ್ಗೆ ತನಿಖೆ ನಡೆಸಲಾಗುವುದು. ಸಾಕ್ಷ್ಯಾಧಾರಗಳಿಲ್ಲದೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಪಾಲಿಕೆಯಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರಕ್ಕೆ ಅವಕಾಶವಿಲ್ಲ’ ಎಂದರು.

‘ಬೇಕಾದರೆ ಸಿ.ಎಂ ಬಳಿ ಹೋಗಿ ಅಂತಾರೆ’

‘ಎರಡು ಸಾವಿರಕ್ಕಿಂತ ಹೆಚ್ಚು ಆಟೊ ಟಿಪ್ಪರ್‌ ಚಾಲಕರಿದ್ದು, 55 ಏಜೆನ್ಸಿಗಳು ಗುತ್ತಿಗೆ ಪಡೆದಿವೆ. ಅವುಗಳಲ್ಲಿ ಎರಡು–ಮೂರು ಏಜೆನ್ಸಿಗಳು ಮಾತ್ರ ಚಾಲಕರಿಗೆ ದೊರೆಯುವ ವೇತನದಲ್ಲಿ ಕಮಿಷನ್‌ ಅಂತ ಪಡೆಯುತ್ತಿವೆ. ಚಾಲಕರು ಅವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರೆ, ಶಾಸಕರಲ್ಲ, ಮುಖ್ಯಮಂತ್ರಿ ಬಳಿ ಬೇಕಾದರೂ ಹೋಗಿ ಎಂದು ಬೆದರಿಸುತ್ತಿದ್ದಾರೆ. ಅವರಿಗೆ ರಾಜಕಾರಣಿಗಳ ನೇರ ಸಂಪರ್ಕ ಹಾಗೂ ಬೆಂಬಲ ಇರುವುದರಿಂದ ಹೀಗೆ ವರ್ತಿಸುತ್ತಿದ್ದಾರೆ. ವಿಷಯ ಗಮನಕ್ಕೆ ಬಂದಾಗ ಆಯುಕ್ತರ ಜೊತೆ ಸಭೆ ನಡೆಸಿ ಚರ್ಚಿಸಿದ್ದೇವೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು