ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವರಾಜ ಹೊರಟ್ಟಿ ಮೊದಲ ಬಾರಿಗೆ ವಿಧಾನ ಪರಿಷತ್‌ ಸದಸ್ಯರಾಗಿ ನಾಳೆಗೆ 40 ವರ್ಷ

ನೌಕರರ ಸಂಘದಿಂದ ವರ್ಷಪೂರ್ತಿ ಕಾರ್ಯಕ್ರಮ
Last Updated 29 ಜೂನ್ 2020, 7:37 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜೆಡಿಎಸ್‌ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರು ಮೊದಲ ಬಾರಿಗೆ ವಿಧಾನ ಪರಿಷತ್‌ ಸದಸ್ಯರಾಗಿ ಮಂಗಳವಾರಕ್ಕೆ (ಜೂನ್‌ 30) 40 ವರ್ಷಗಳು ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಬಸವರಾಜ ಹೊರಟ್ಟಿ ಹಿತೈಷಿಗಳ ಬಳಗ 2020–21ರಲ್ಲಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಸಂಘದ ಉಪಾಧ್ಯಕ್ಷ ಎಂ.ಬಿ. ನಾತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ ‘ಮಂಗಳವಾರದಿಂದ ವರ್ಷಪೂರ್ತಿ ಕಾರ್ಯಕ್ರಮಗಳು ಆರಂಭವಾಗಲಿದ್ದು, ಹಾವೇರಿ ಜಿಲ್ಲೆಯ ಹಿರೇಕೆರೂರಿನ ಸಿ.ಎಸ್‌. ಶಿಕ್ಷಣ ಸಂಸ್ಥೆಯಲ್ಲಿ ಬೆಳಿಗ್ಗೆ 9.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘಟನೆಗೆ ಶ್ರಮಿಸಿದ ಹಿರಿಯರಿಗೆ ಗೌರವ ಸಲ್ಲಿಸಲಾಗುವುದು. ಕೊರೊನಾ ಸೋಂಕು ಇರುವ ಕಾರಣ ಕಡಿಮೆ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಲಿದ್ದಾರೆ. ಈ ಒಂದು ವರ್ಷದ ಅವಧಿಯಲ್ಲಿ ಸೋಂಕು ಕಡಿಮೆಯಾಗಿದ್ದರೆ ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ಸಮಾವೇಶ ಮಾಡಲಾಗುವುದು’ ಎಂದು ವಿವರಿಸಿದರು.

ಹೊರಟ್ಟಿ ಅವರ ನಾಲ್ಕು ದಶಕಗಳ ಹೋರಾಟದ ಹಾದಿಯ ‘ಆ ದಿನಗಳು’ ಕುರಿತು ಚಿಂತನ–ಮಂಥನ, ಅಂದು–ಇಂದು ಹೋರಾಟಗಳ ಕುರಿತು ಆತ್ಮಾವಲೋಕನ, ಸಂಘಟನೆ ಹೋರಾಟ–ಹೋರಾಟಗಳಿಂದ ಆಗುವ ಅನುಕೂಲತೆಗಳ ಕುರಿತು ವಿಮರ್ಶೆ, ವಿವಿಧ ತಾಲ್ಲೂಕುಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ರಕ್ತದಾನ ಶಿಬಿರ, ಅಂಗವಿಕಲ ಹಾಗೂ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ದತ್ತು ಪಡೆಯುವುದು, ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ ಮತ್ತು ಹೊರಟ್ಟಿ ಅವರ ಸಾಕ್ಷ್ಯ ಚಿತ್ರ ಹಾಗೂ ಆತ್ಮ ಚರಿತ್ರೆ ಗ್ರಂಥ ಪ್ರಕಟಿಸುವ ಕಾರ್ಯಕ್ರಮವನ್ನು ಒಂದು ವರ್ಷದ ಅವಧಿಯಲ್ಲಿ ಮಾಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಹೊರಟ್ಟಿ ಅವರ ನಾಲ್ಕು ದಶಕಗಳ ಸಾಧನೆ, ಹೋರಾಟದ ಹಾದಿಗಳನ್ನು ಒಳಗೊಂಡ ಮಾಹಿತಿಯ ಪೋಸ್ಟರ್‌ ಬಿಡುಗಡೆ ಮಾಡಲಾಯಿತು.

ಜೆಡಿಎಸ್‌ ಮುಖಂಡ ರಾಜಣ್ಣ ಕೊರವಿ, ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್‌. ಭಟ್‌, ಸಂಯೋಜಕ ಡಾ. ಬಸವರಾಜ ಧಾರವಾಡ, ಪ್ರಮುಖರಾದ ಜಗದೀಶ ದ್ಯಾವಪ್ಪನವರ, ಎನ್‌.ಪಿ. ಬಣಕಾರ, ಎನ್‌.ಎನ್‌. ಕುಂದೂರ, ಎಸ್‌.ವಿ. ಪಟ್ಟಣಶೆಟ್ಟಿ ಮತ್ತು ಬಿ.ಕೆ. ಮಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT