ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಚಾಲನೆ

ಸಚಿವರಾದ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್ ಭೂಮಿ ಪೂಜೆ
Last Updated 23 ಆಗಸ್ಟ್ 2020, 12:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಸ್ಮಾರ್ಟ್ ಸಿಟಿ. ಅವಳಿನಗರದಲ್ಲಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಪೂರ್ಣಗೊಂಡರೆ ನಗರದ ಚಹರೆಯೇ ಬದಲಾಗಲಿದೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಚಿಟಗುಪ್ಪಿ ಆಸ್ಪತ್ರೆ ಅಭಿವೃದ್ಧಿ,ನೆಹರು ಮೈದಾನ, ನ್ಯೂ ಮೇದಾರ ಓಣಿ, ರೈಲು ನಿಲ್ದಾಣ, ಗಣೇಶಪೇಟೆ ಮೀನು ಮಾರುಕಟ್ಟೆ ಹಾಗೂ ಉಣಕಲ್ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ,ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರೊಂದಿಗೆಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘₹26.18 ಕೋಟಿ ವೆಚ್ಚದಲ್ಲಿ ಚಿಟಗುಪ್ಪಿ ಆಸ್ಪತ್ರೆ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಾಲ್ಕು ಹೊಸ ಕಟ್ಟಡಗಳನ್ನು ಇಲ್ಲಿ ನಿರ್ಮಿಸಲಾಗುವುದು. ನೆಹರು ಮೈದಾನವನ್ನು₹20.26 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ತಲೆ ಎತ್ತಲಿರುವ ಜಿ+2 ಕಟ್ಟಡದಲ್ಲಿ ಟೇಬಲ್ ಟೆನ್ನಿಸ್ ಕೋರ್ಟ್, ಸುಸಜ್ಜಿತ ಭಾಂಗಣ, ಸಾಂಸ್ಕೃತಿಕ ಭವನ ಹಾಗೂ ಜಿಮ್ನಾಸ್ಟಿಕ್ ಇರಲಿದೆ’ ಎಂದು ಹೇಳಿದರು.

‘ಸ್ಮಾರ್ಟ್‌ ರಸ್ತೆ ಪ್ಯಾಕೇಜ್ -2ರ ಅಡಿ ರೈಲು ನಿಲ್ದಾಣದ 5.08 ಕಿ.ಮೀ. ರಸ್ತೆಯನ್ನು ₹50.75 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ನೆಹರುಮೈದಾನ ಸುತ್ತಲಿನ ಜೆ.ಸಿ ನಗರ ರಸ್ತೆ, ಕೊಪ್ಪಿಕರ ರಸ್ತೆ, ಕೋಯಿನ್ ರಸ್ತೆ, ವಿಕ್ಟೋರಿಯಾ, ಬ್ರಾಡ್‌ವೇ, ಮರಾಠ ಗಲ್ಲಿ ಹಾಗೂ ಸಿಬಿಟಿ ರಸ್ತೆಗಳು ಸೇರಿವೆ’ ಎಂದು ತಿಳಿಸಿದರು.

‘ಗಣೇಶಪೇಟೆಯ ಮೀನು ಮಾರುಕಟ್ಟೆಯು ₹5.38 ಕೋಟಿ ವೆಚ್ಚದಲ್ಲಿ ಅಭಿವೃದ್ದಿಗೊಳ್ಳಲಿದೆ. ಅದೇ ರೀತಿ ₹4.60 ಕೋಟಿ ವೆಚ್ಚದಲ್ಲಿ ಮೇದಾರ ಓಣಿಯ ಪಾರ್ಕಿಂಗ್ ಹಾಗೂ ಡಿಸ್ಪೆನ್ಸರಿಕಾಮಗಾರಿ ಕೈಗೊಳ್ಳಲಾಗುವುದು’ ಎಂದರು.

‘₹14.83 ಕೋಟಿ ವೆಚ್ಚದಲ್ಲಿ ಉಣಕಲ್ ಕೆರೆ ಅಭಿವೃದ್ಧಿ ಯೋಜನೆ ಭಾಗ- 1ರ ಕಾಮಗಾರಿ ನಡೆಯಲಿದೆ. ಇದರಲ್ಲಿ ಬಯೋರೆಮಿಡಿಯೇಶನ್, ಕೆರೆ ಹೂಳೆತ್ತುವುದು, ನೀರಿನ ಗುಣಮಟ್ಟ, ಫ್ಲೋಟಿಂಗ್ ರ‍್ಯಾಪ್ಟರ್ಸ್ ಅಳವಡಿಕೆ ಸೇರಿದಂತೆ ಇತರ ಅಭಿವೃದ್ದಿ ಕೆಲಸಗಳನ್ನು ಮಾಡಲಾಗುವುದು’ ಎಂದು ವಿವರಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹಮದ್, ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT