ಶನಿವಾರ, ಫೆಬ್ರವರಿ 4, 2023
28 °C
ಸುಚಿರಾಯು ಆಸ್ಪತ್ರೆಯ ವೈದ್ಯರ ತಂಡದ ಸಾಧನೆ

ಕಪ್ಪು ಶಿಲೀಂಧ್ರ: ಮಿದುಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯ ವ್ಯಕ್ತಿಯೊಬ್ಬರಿಗೆ ಕೋವಿಡ್‌ ನಂತರ ಕಪ್ಪು ಶಿಲೀಂಧ್ರ(ಬ್ಲ್ಯಾಕ್ ಫಂಗಸ್) ಕಾಣಿಸಿಕೊಂಡು ಮಿದುಳಿನ ಭಾಗದಲ್ಲಿ ಉಂಟಾಗಿದ್ದ ಹಾನಿಯನ್ನು ಇಲ್ಲಿನ ಸುಚಿರಾಯು ಆಸ್ಪತ್ರೆಯ ವೈದ್ಯರ ತಂಡವು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಿದೆ.

62 ದಿನಗಳ ನಿರಂತರ ಚಿಕಿತ್ಸೆ ಹಾಗೂ ಮೂರು ಬಾರಿ ಶಸ್ತ್ರಚಿಕಿತ್ಸೆಯನ್ನು ವೈದ್ಯರು ನಡೆಸಿದ್ದಾರೆ. ವ್ಯಕ್ತಿಯು ಈಗ ಸಂಪೂರ್ಣ ಗುಣಮುಖರಾಗಿದ್ದು, ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆ ಎಂದು ವೈದ್ಯರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಆಸ್ಪತ್ರೆಯ ಡಾ.ರಾಜು ಕದಂ ಮಾತನಾಡಿ, ‘ಕೋವಿಡ್‌ ನಂತರ ಕಪ್ಪು ಶಿಲೀಂಧ್ರ ಸಾಮಾನ್ಯವಾಗಿದೆ. ತೊಂದರೆಗೆ ಒಳಗಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಮಿದುಳಿಗೆ ಶಿಲೀಂಧ್ರ ತಗುಲಿದರೆ ರೋಗಿ ಬದುಕುವುದು ಕಠಿಣ. ಅಂತಹ ಒಬ್ಬರಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ’ ಎಂದು ಹೇಳಿದರು.

‘ಕಪ್ಪು ಶಿಲೀಂಧ್ರ ಬಾಯಿಯಿಂದ ಮೂಗಿಗೆ, ಕಣ್ಣಿಗೆ, ಬಳಿಕ ದೇಹದ ಹಲವು ಭಾಗಗಳಿಗೆ ಹರಡುತ್ತದೆ. ಮಿದುಳಿನಲ್ಲಿ ಕಾಣಿಸಿಕೊಂಡರೆ ರೋಗಿಯ ಸ್ಥಿತಿ ಗಂಭೀರವಾಗುತ್ತದೆ. ಹರಪನಹಳ್ಳಿಯ ವ್ಯಕ್ತಿಯೂ ಇಂಥದ್ದೇ ಸ್ಥಿತಿಯಲ್ಲಿದ್ದರು’ ಎಂದರು.

‘ಇಂತಹ ರೋಗಿಗೆ ಮೊದಲ ಬಾರಿಗೆ ನಾವು ಚಿಕಿತ್ಸೆ ನೀಡಿದ್ದೇವೆ. ಸಾವು–ಬದುಕಿನ ಮಧ್ಯೆ ಹೋರಾಡುತ್ತಿದ್ದ ರೋಗಿಗೆ ಉತ್ತಮ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಿದ್ದೇವೆ’ ಎಂದರು.

‘ಇವರು ಕೊಪ್ಪಳದಲ್ಲಿ ಕೋವಿಡ್‌ಗೆ ಚಿಕಿತ್ಸೆ ಪಡೆದುಕೊಂಡಿದ್ದರು. ಕಪ್ಪುಶಿಲೀಂಧ್ರ ಪತ್ತೆಯಾದ ನಂತರ ದಾವಣಗೆರೆಯ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿನ ವೈದ್ಯರ ಶಿಫಾರಸ್ಸಿನ ಮೇರೆಗೆ ಸುಚಿರಾಯು ಆಸ್ಪತ್ರೆಗೆ ಬಂದಿದ್ದರು. ಅವರ ದಂತ ಹಾಗೂ ನೇತ್ರದ ಭಾಗಕ್ಕೂ ಅಪಾಯ ಆಗಿತ್ತು. ದೇಹದಲ್ಲಿ ಸಕ್ಕರೆಯ ಅಂಶವೂ ಅಧಿಕವಾಗಿತ್ತು. ಇದನ್ನೆಲ್ಲ ನಿಯಂತ್ರಣಕ್ಕೆ ತಂದಿದ್ದೇವೆ’ ಎಂದು ತಿಳಿಸಿದರು.

ಡಾ.ಮಂಜುನಾಥ ದಂಡಿ, ಡಾ.ನೀಲಕಮಲ್ ಹಳ್ಳೂರ, ಡಾ.ಲಕ್ಷ್ಮಿ, ಡಾ.ಚೇತನಕುಮಾರ್ ಮುದ್ರಬೆಟ್ಟ, ಡಾ.ತೇಜಸ್, ಡಾ.ಸಾಗರ್, ಡಾ. ಆನಂದ ಅವರನ್ನು ಒಳಗೊಂಡ ತಂಡವು ಚಿಕಿತ್ಸೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು