ಹುಬ್ಬಳ್ಳಿ: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಕೃಷ್ಣ ಕಲ್ಯಾಣ ಮಂಟಪದಲ್ಲಿ ಮಂಗಳವಾರ ವಿಟ್ಲಪಿಂಡಿ ಉತ್ಸವ ಹಾಗೂ ಕೃಷ್ಣನ ಲೀಲೋತ್ಸವಗಳಲ್ಲಿ ಪ್ರಮುಖ ಆಕರ್ಷಣೆಯಾದ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮ ನಡೆಯಿತು.
ಮೊಸರು ಕುಡಿಕೆ ಒಡೆಯುವ ಸಡಗರವನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷ ಸಾಕಷ್ಟು ಸಂಖ್ಯೆಯಲ್ಲಿ ಕೃಷ್ಣನ ಭಕ್ತರು ಸೇರುತ್ತಿದ್ದರು. ಕೋವಿಡ್ ಕಾರಣದಿಂದ ಪ್ರತಿವರ್ಷದಷ್ಟು ಈ ಸಲ ಜನ ಇರಲಿಲ್ಲ. ಕೃಷ್ಣನ ಮೂರ್ತಿಗೆ ತುಳಸಿ ಹಾಗೂ ವಿವಿಧ ಹೂವುಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗಿತ್ತು. ಹುಲಿ ವೇಷ ತೊಟ್ಟು ತುಳಸಿಕಟ್ಟೆ ಮುಂದೆ ಪ್ರದರ್ಶಿಸಿದ ನೃತ್ಯ ಗಮನ ಸೆಳೆಯಿತು.
ಕಲ್ಯಾಣ ಮಂಟಪದ ಸಭಾಂಗಣ ಹಾಗೂ ದೇವಸ್ಥಾನದ ಮುಂಭಾಗದಲ್ಲಿ ಮೊಸರು ಕುಡಿಕೆ ಒಡೆಯಲಾಯಿತು. ದೇಶಪಾಂಡೆ ನಗರದ ನೇತ್ರಾವತಿ ಭಜನಾ ಮಂಡಳಿಯ ಮಹಿಳಾ ಸದಸ್ಯರು ಭಜನೆ ಹಾಗೂ ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿದರು.
70 ಕೆ.ಜಿ. ಕೇಕ್: ಇಸ್ಕಾನ್ ದೇವಸ್ಥಾನದಲ್ಲಿ ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದ ಅವರ 125ನೇ ಜನ್ಮದಿನದ ಅಂಗವಾಗಿ 70 ಕೆ.ಜಿ. ತೂಕದ ಕೇಕ್ ಮಾಡಲಾಗಿತ್ತು. 400 ವಿವಿಧ ಅಡುಗೆ ಖಾದ್ಯಗಳನ್ನು ತಯಾರಿಸಿ ಪ್ರಭುಪಾದ ಅವರಿಗೆ ನೈವೇದ್ಯ ಸಮರ್ಪಿಸಲಾಯಿತು. ಇಲ್ಲಿನ ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನದಾಸ್ ಸೇರಿದಂತೆ ದೇವಸ್ಥಾನದ ಸಿಬ್ಬಂದಿ ಇದ್ದರು.
ಕೃಷ್ಣನ ಪ್ರತಿರೂಪ ವಿಶ್ವೇಶತೀರ್ಥರು: ಕೃಷ್ಣ ಎಂದರೆ ಆಕರ್ಷಣೆ ಮಾಡುವವನು. ವಿಶ್ವೇಶತೀರ್ಥರನ್ನು ನಾವು ಕೃಷ್ಣನ ಪ್ರತಿರೂಪ ಎನ್ನುವಂತೆ ನೋಡುತ್ತಿದ್ದೇವೆ ಎಂದು ಸಮೀರ್ ಆಚಾರ್ಯ ಕಂಠಪಲ್ಲಿ ಹೇಳಿದರು.
ನಗರದ ಹೊರವಲಯದ ಬುಡರಸಿಂಗಿಯಲ್ಲಿರುವ ಕೆಎಸ್‌ಎಸ್‌ಎಸ್ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಕೃಷ್ಣ ಜನ್ಮಾಷ್ಟಮಿ ಮತ್ತು ಮೊದಲ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆಎಸ್‌ಎಸ್‌ಎಸ್ ಗೌರವ ಕಾರ್ಯದರ್ಶಿ ಸತ್ಯಮೂರ್ತಿ ಆಚಾರ್ಯರು ಕೃಷ್ಣನನ್ನು ನಂಬಿದರೆ ಲೋಕಮಾನ್ಯ ಆಗುತ್ತೇವೆ ಎಂದು ನೀತಿಕಥೆಗಳು ಮೂಲಕ ವಿವರಿಸಿ ಹೇಳಿದರು.
ಗೌರವ ಕಾರ್ಯಾಧ್ಯಕ್ಷ ಶ್ರೀಕಾಂತ ಕೆಮ್ತೂರ್, ಕಾಲೇಜಿನ ಆಡಳಿತ ಮಂಡಳಿ ಜಂಟಿ ಕಾರ್ಯದರ್ಶಿ ಗೋವಿಂದ ಮೈಸೂರ, ಸದಸ್ಯರಾದ ಶ್ರೀಪತಿ ಐತಾಳ, ಐ.ಪಿ. ಐತಾಳ ಹಾಗೂ ಪ್ರಾಚಾರ್ಯ ಶಿಶಿರ ಜೋಶಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.