ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸ್ಕಾಂ, ಪಾಲಿಕೆ ಅಧಿಕಾರಿಗಳ ಜಾಣ ಕುರುಡು: ಕೇಬಲ್‌ ಅವಾಂತರ; ಓಡಾಟಕ್ಕೆ ಸಂಕಷ್ಟ

ಬಿ.ಜೆ.ಧನ್ಯಪ್ರಸಾದ್‌
Published 16 ಜನವರಿ 2024, 7:23 IST
Last Updated 16 ಜನವರಿ 2024, 7:23 IST
ಅಕ್ಷರ ಗಾತ್ರ

ಧಾರವಾಡ: ವಿವಿಧ ನೆಟ್‌ವರ್ಕ್‌ (ಒಎಫ್‌ಸಿ, ಎಫ್‌ಟಿಟಿಎಚ್‌, ಫೋನ್‌, ಟಿ.ವಿ...) ಕೇಬಲ್‌ಗಳು ನಗರದ ಹಲವೆಡೆ ಪಾದಚಾರಿ ಮಾರ್ಗದಲ್ಲಿ ನೆಲಕ್ಕೆ ತಾಗಿವೆ. ಕೆಲವೆಡೆ ತುಂಡಾಗಿದ್ದು, ಇನ್ನು ಕೆಲವೆಡೆ ಕೈಗೆಟುಕುವ ಅಂತರದಲ್ಲಿವೆ. ಬಹುತೇಕ ಕಡೆ ವಿದ್ಯುತ್‌ ಕಂಬಗಳು, ಬಡಾವಣೆಯ ರಸ್ತೆ ಫಲಕಗಳಲ್ಲಿ ಕೇಬಲ್‌ ಸಿಂಬೆಗಳು ಜೋತುಬಿದಿದ್ದು, ಜನರಿಗೆ ಓಡಾಡುವುದಕ್ಕೆ ತೊಡಕಾಗಿವೆ.

ನಗರದ ಡಿ.ಸಿ ಕಂಪೌಂಡ್‌ ಸುತ್ತಮುತ್ತ, ಜಯನಗರ, ಸಪ್ತಾಪೂರ, ಸಹಿತ ಬಹಳಷ್ಟು ಕಡೆ ಪಾದಚಾರಿ ಮಾರ್ಗಗಳಲ್ಲಿ ಈ ಸಮಸ್ಯೆ ಇದೆ. ಬಿಆರ್‌ಟಿಎಸ್‌ ವಿಭಜಕದಲ್ಲಿ ಅಳವಡಿಸಿರುವ ಬೇಲಿಯಲ್ಲೂ ಕೆಲವೆಡೆ ಕೇಬಲ್‌ ಆವಾಂತರ ಇದೆ.

ಡಿ.ಸಿ.ಕಂಪೌಂಡದಲ್ಲಿನ ನೀರಾವರಿ ಎಂಜಿನಿಯರ್‌ ಕಚೇರಿ ಕಾಂಪೌಂಡ್‌ ಬದಿ, ಎದುರಿನ ಕಚೇರಿಯ ಕಾಂಪೌಂಡ್‌ ಬದಿ, ಈ ಪ್ರದೇಶದಲ್ಲಿನ ಮರಗಳಲ್ಲಿ ಕೇಬಲ್‌ಗಳು ಬಿದ್ದಿವೆ. ಬಿಡಾಡಿ ರಾಸು, ಪಾದಚಾರಿಗಳು ಕೇಬಲ್‌ ತುಳಿದು–ಎಡವಿ ಬಿದ್ದಿರುವ ನಿದರ್ಶನಗಳು ಇವೆ. ಕೆಲವು ಕಡೆ ರಸ್ತೆಯಲ್ಲಿ ಅಡ್ಡಲಾಗಿಯೂ (ಒಂದು ಬದಿ ಮರ–ಕಂಬದಿಂದ ಮತ್ತೊಂದು ಬದಿಯ ಮರ–ಕಂಬಕ್ಕೆ ಅಳವಡಿಕೆ) ಕೆಲವು ಕಡೆ ಕೇಬಲ್‌ ಅಳವಡಿಸಲಾಗಿದೆ.

‘ಮಳೆ, ಗಾಳಿ ಸಂದರ್ಭದಲ್ಲಿ ಯಾವ ವಾಹನ, ವ್ಯಕ್ತಿಯ ಮೇಲೆ ಕೇಬಲ್‌ಗಳು ಬೀಳುತ್ತದೆ ಎಂದು ಹೇಳಲಾರದ ಸ್ಥಿತಿ ಇದೆ. ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ ಮತ್ತು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯವರು ಜಾಣ ಕುರುಡು ಪ್ರದರ್ಶಿಸುತ್ತಾರೆ. ಪಾದಚಾರಿ ಮಾರ್ಗದಲ್ಲಿ ಕೇಬಲ್‌ಗಳ ಸಮಸ್ಯೆ ಗೊತ್ತಿದ್ದರೂ ಅದನ್ನು ನಿವಾರಿಸಲು ಕ್ರಮ ವಹಿಸಿಲ್ಲ’ ಎಂದು ಪಿಯು ಉಪನ್ಯಾಸಕಿ ರೂಪಾ ಟಿ.ಪಾಟೀಲ್‌ ದೂರುತ್ತಾರೆ.

ಹೆಚ್ಚು ಕೇಬಲ್‌ ಹಾಕಿರುವ, ಸಿಂಬೆ ಜೋತು ಹಾಕಿರುವ ಕೆಲವು ವಿದ್ಯುತ್‌ ಕಂಬಗಳು ಕೊಂಚ ವಾಲಿರುವುದು ಕೆಲವು ಕಡೆ ಇದೆ. ಶಿಥಿಲವಾಗಿರುವ ಕಂಬಗಳಲ್ಲಿನ ಸಿಂಬೆಗಳು ರಭಸದ ಮಳೆ, ಜೋರು ಗಾಳಿ ಸಂದರ್ಭದಲ್ಲಿ ಜೋಲಾಡುತ್ತವೆ. ಜನರು ಪಾದಚಾರಿ ಮಾರ್ಗದಲ್ಲಿ ಅಪಾಯದ ಮಗ್ಗುಲಿನಲ್ಲಿ ನಡೆದಾಡುವಂತಾಗಿದೆ.

‘ರಸ್ತೆ ಬದಿ ಪಾದಚಾರಿ ಮಾರ್ಗದ ವೃಕ್ಷಗಳು, ಕಟ್ಟಡಗಳ ಕಾಪೌಂಡ್‌ಗಳು ಸಹಿತ ಎಲ್ಲೆಂದರಲ್ಲಿ ಕೇಬಲ್‌ ಅಳವಡಿಸಬಾರದು. ಅವಾಂತರಗಳಿಗೆ ಪಾಲಿಕೆ ಮತ್ತು ಹೆಸ್ಕಾಂನವರ ಬೇಜವಾಬ್ದಾರಿತನ ಕಾರಣ. ಈ ಬಗ್ಗೆ ಹಲವು ಬಾರಿ ಪಾಲಿಕೆಯವರಿಗೆ ದೂರು ನೀಡಿದರೂ ಸರಿಯಾಗಿ ಕ್ರಮ ವಹಿಸಿಲ್ಲ. ನಿಯಮಿತವಾಗಿ ಮಾರ್ಗ ನಿರ್ವಹಣೆ ಮಾಡಬೇಕು. ಅನಧಿಕೃತ ಕೇಬಲ್‌ ತೆರವಿಗೆ ಸಂಸ್ಥೆಗಳು ಕ್ರಮ ವಹಿಸಬೇಕು’ ಎಂದು ಹುಬ್ಬಳ್ಳಿ–ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಒತ್ತಾಯಿಸುತ್ತಾರೆ.

ಧಾರವಾಡದ ಮಿಚಿಗನ್‌ ಕಂಪೌಂಡದ ರಸ್ತೆಯೊಂದರ ಬದಿ ಕೇಬಲ್ ಬಿದ್ದಿರುವುದು ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಧಾರವಾಡದ ಮಿಚಿಗನ್‌ ಕಂಪೌಂಡದ ರಸ್ತೆಯೊಂದರ ಬದಿ ಕೇಬಲ್ ಬಿದ್ದಿರುವುದು ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಧಾರವಾಡದ ಜಯನಗರದಲ್ಲಿ ರಸ್ತೆ ಬದಿ ಫಲಕದಲ್ಲಿ ಕೇಬಲ್‌ ಸಿಂಬೆ ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಧಾರವಾಡದ ಜಯನಗರದಲ್ಲಿ ರಸ್ತೆ ಬದಿ ಫಲಕದಲ್ಲಿ ಕೇಬಲ್‌ ಸಿಂಬೆ ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಧಾರವಾಡದ ಮಾಳಮಡ್ಡಿಯಲ್ಲಿನ ವಿದ್ಯುತ್‌ ಕಂಬವೊಂದರಲ್ಲಿ ಜೋತುಬಿದ್ದಿರುವ ಕೇಬಲ್‌ ಸಿಂಬೆಗಳು ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಧಾರವಾಡದ ಮಾಳಮಡ್ಡಿಯಲ್ಲಿನ ವಿದ್ಯುತ್‌ ಕಂಬವೊಂದರಲ್ಲಿ ಜೋತುಬಿದ್ದಿರುವ ಕೇಬಲ್‌ ಸಿಂಬೆಗಳು ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಹಲವು ಕಡೆ ವಿದ್ಯುತ್‌ ಕಂಬಗಳಿಗೆ ಫೋನ್‌ ನೆಟ್‌ವರ್ಕ್‌ ಕೇಬಲ್‌ ಅಳವಡಿಸಿದ್ಧಾರೆ. ಅನಧಿಕೃತವಾಗಿ ಅಳವಡಿಸಿರುವವರಿಗೆ ನೋಟಿಸ್‌ ನೀಡುತ್ತೇವೆ. ಆನಂತರ ತೆರವುಗೊಳಿಸಲು ಕ್ರಮ ವಹಿಸುತ್ತೇವೆ
ಎಂ.ಎಂ.ನದಾಫ್‌ ಕಾರ್ಯನಿರ್ವಾಹಕ ಎಂಜಿನಿಯರ್‌ ಹೆಸ್ಕಾಂ ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT