ದೌರ್ಬಲ್ಯ ಶಕ್ತಿಯಾಗಿ ಬದಲಿಸಿಕೊಳ್ಳಿ: ನಾರಾಯಣ ತಾತುಸ್ಕರ್‌

7
ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ ಸಹಾಯಧನದ ಚೆಕ್‌ ವಿತರಣೆ

ದೌರ್ಬಲ್ಯ ಶಕ್ತಿಯಾಗಿ ಬದಲಿಸಿಕೊಳ್ಳಿ: ನಾರಾಯಣ ತಾತುಸ್ಕರ್‌

Published:
Updated:
Deccan Herald

ಹುಬ್ಬಳ್ಳಿ: ‘ಪ್ರತಿಯೊಬ್ಬರಲ್ಲಿ ಮಾನವ ಸಹಜ ದೌರ್ಬಲ್ಯಗಳು ಇದ್ದೇ ಇರುತ್ತವೆ. ಅವುಗಳನ್ನೇ ಶಕ್ತಿಯಾಗಿ ಬಳಸಿಕೊಂಡರೆ ಯಶಸ್ಸು ಸಾಧಿಸಬಹುದು’ ಎಂದು ಶಕ್ತಿ ಗ್ರೂಪ್‌ ಆಫ್‌ ಕಂಪನಿಗಳ ಮುಖ್ಯಸ್ಥ ನಾರಾಯಣ ತಾತುಸ್ಕರ್‌ ಹೇಳಿದರು.

ವಿದ್ಯಾಪೋಷಕ ಸಂಸ್ಥೆಯಿಂದ ಬಿವಿಬಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾನುವಾರ ನಡೆದ ಧಾರವಾಡ ಹಾಗೂ ಗದಗ ಜಿಲ್ಲೆಗಳ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸಹಾಯಧನದ ಚೆಕ್‌ ವಿತರಿಸಿ ಅವರು ಮಾತನಾಡಿದರು.

‘ದೊಡ್ಡ ಸಾಧನೆಗೆ ಬದುಕು ಒಂದು ಸುಂದರ ಅವಕಾಶ ಎಂದು ಭಾವಿಸಿ ಸಕಾರಾತ್ಮಕ ಚಿಂತನೆಗಳನ್ನು ರೂಢಿಸಿಕೊಂಡಾಗ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಮುಂದಿನ ಹತ್ತು ವರ್ಷಗಳಲ್ಲಿ ಶೇ 49ರಷ್ಟು ಉದ್ಯೋಗದ ಅವಕಾಶಗಳು ಕಡಿಮೆಯಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಓದಿನ ಜೊತೆಗೆ ಕೌಶಲ ಬೆಳೆಸಿಕೊಳ್ಳಲು ಒತ್ತು ಕೊಡಬೇಕು. ಬದುಕಿನಲ್ಲಿ ಎಲ್ಲದಕ್ಕಿಂತ ಜ್ಞಾನ ಅತ್ಯಂತ ಮಹತ್ವದ್ದು. ನಿರ್ದಿಷ್ಟ ಗುರಿ ಇಟ್ಟುಕೊಂಡು ಅದನ್ನು ಈಡೇರಿಸಿಕೊಳ್ಳಲು ಜೀವನದ ಕೊನೆಯ ತನಕ ಛಲದಿಂದ ಹೋರಾಡಬೇಕು’ ಎಂದು ಸಲಹೆ ನೀಡಿದರು.

ಬಿವಿಬಿ ಸಿಇಟಿ ಅಲುಮ್ನಿ ಸಂಸ್ಥೆ ಕಾರ್ಯದರ್ಶಿ ಪ್ರೊ. ವೀರಮಹಾಂತೇಶ ಸ್ವಾಮಿ ‘ನಾವು ಅಂದುಕೊಂಡಿದ್ದನ್ನು ಸಾಧಿಸಲು ಸಾಕಷ್ಟು ಅವಕಾಶಗಳು ಇವೆ. ಅವುಗಳನ್ನು ಛಲದಿಂದ ಮಾಡಬೇಕು, ಜೀವನದಲ್ಲಿ ಮೌಲ್ಯ ಅಳವಡಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಧರ್ಮ, ಆಚಾರ, ವಿಚಾರಗಳಿಗೂ ಗೌರವ ಕೊಡಬೇಕು’ ಎಂದರು.

ಕೆಎಲ್‌ಇ ಧ್ವನಿ ನಿರ್ದೇಶಕ ಗೋಪಾಲಕೃಷ್ಣ ಹೆಗಡೆ ಮಾತನಾಡಿ ನೀವು ದೊಡ್ಡ ಸಾಧನೆ ಮಾಡಲು ತಲೆ ಗಟ್ಟಿಯಾಗಿರಬೇಕು. ಆದ್ದರಿಂದ ಮೊದಲು ಗಾಡಿ ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು ಎಂದು ಮಾರ್ಮಿಕವಾಗಿ ಹೇಳಿದರು.

‘ನಮ್ಮಲ್ಲಿ ಕಂಡಲ್ಲಿ ಉಗಳುವ ರೋಗ ಬಹಳಷ್ಟು ಜನರಲ್ಲಿದೆ. ಆದರೆ, ಇದು ಸರಿಯಲ್ಲ. ಶಿಸ್ತು, ಸ್ವಚ್ಛತೆಯಿಂದ ಇದ್ದರೆ ಜೀವನ  ಮತ್ತು ಸುತ್ತಮುತ್ತಲಿನ ಪರಿಸರ ಸುಂದರವಾಗಿರುತ್ತದೆ’ ಎಂದರು.

ಧಾರವಾಡ ಜಿಲ್ಲೆಯ 52 ಮತ್ತು ಗದಗ ಜಿಲ್ಲೆಯ 31 ವಿದ್ಯಾರ್ಥಿಗಳಿಗೆ ಗಣ್ಯರು ಸಹಾಯಧನದ ಚೆಕ್‌ ವಿತರಿಸಿದರು. ಪ್ರೊ. ಸಿ.ಸಿ. ದೀಕ್ಷಿತ್‌, ವಿದ್ಯಾ ಪೋಷಕದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಉಮೇಶ, ದಾನಿಗಳಾದ ಪ್ರಕಾಶ ಕುಲಕರ್ಣಿ, ಎಸ್.ಎಂ. ಚಿಲ್ಲೂರ ಮಾತನಾಡಿದರು.

ಅಂಧರಿಗಾಗಿ ವಾಕಿಂಗ್ ಸ್ಟಿಕ್ ಸಿದ್ಧಪಡಿಸಿದ ರಜತ್ ಅವರನ್ನು ಗೌರವಿಸಲಾಯಿತು. ವಿದ್ಯಾಪೋಷಕ ಸಂಸ್ಥೆಯಿಂದ ಪಡೆದುಕೊಂಡ ಸಹಾಯಧನದಿಂದ ಚೆನ್ನಾಗಿ ಓದಿ ಭವಿಷ್ಯದಲ್ಲಿ ಮತ್ತೊಂದು ವಿದ್ಯಾರ್ಥಿಯ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುತ್ತೇನೆ ಎಂದು ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !