ಹುಬ್ಬಳ್ಳಿ: ‘ಶರಣರ ತತ್ವ –ಸಿದ್ಧಾಂತಗಳನ್ನು ಸರಳವಾಗಿ ಜನಮನಕ್ಕೆ ತಲುಪಿಸುವಲ್ಲಿ ಚುಟುಕು ಸಾಹಿತ್ಯದ ಪಾತ್ರ ಮಹತ್ವದ್ದು’ ಎಂದು ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯ ಪ್ರತಿಪಾದಿಸಿದರು.
ವಿದ್ಯಾನಗರದ ಕನಕದಾಸ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ ಧಾರವಾಡ ಜಿಲ್ಲಾ 11ನೇ ಚುಟುಕು ಸಾಹಿತ್ಯ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಅಂದಿನ ಅನುಭವ ಮಂಟಪದ ಸಾಹಿತ್ಯ ಪರಂಪರೆಯನ್ನು ಇಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಪಾಲಿಸಿಕೊಂಡು ಬಂದಿದೆ. ಸರ್ಕಾರದ ಯಾವುದೇ ಸೌಲಭ್ಯ ಇಲ್ಲದೇ ಸಾಹಿತಿಗಳ ಮತ್ತು ಸಾಹಿತ್ಯಾಸಕ್ತರ ಪ್ರೀತಿ-ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ’ ಎಂದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕನಕದಾಸ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ಶಾಂತಣ್ಣ ಕಡಿವಾಳ, ‘ಸಾಹಿತ್ಯವು ನಿತ್ಯ ಹರಿಯುವ ಅಮೃತ ಗಂಗೆ. ಅದು ಹರಿದಲ್ಲಿ ಸಂಕುಚಿತ ಮನೋಭಾವ ತೊಳೆದುಹೋಗಬೇಕು’ ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕ ವಿ.ಜಿ. ಪಾಟೀಲ ಅವರನ್ನು ಗೌರವಿಸಲಾಯಿತು.
10ನೇ ಸಮ್ಮೇಳನದ ಅಧ್ಯಕ್ಷರಾಗಿದ್ದ ಪದ್ಮಾ ದೇಸಾಯಿ, ಸ್ವಾಗತ ಸಮಿತಿ ಉಪಾಧ್ಯಕ್ಷ ಜಿ.ವಿ.ಹಿರೇಮಠ, ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಚ್.ವಿ. ಬೆಳಗಲಿ, ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಸುಳ್ಳದ ಪಂಚಗ್ರಹ ಹಿರೇಮಠದ ಶಿವ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿದರು. ಜನಪದ ತಜ್ಞ ಡಾ. ರಾಮೂ ಮೂಲಗಿ, ಚಿಂತಕಿ ಸಂಧ್ಯಾ ದೀಕ್ಷಿತ ಇದ್ದರು. ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಸಮ್ಮೇಳನದ ಠರಾವು ಮಂಡಿಸಿದರು.
ಡಾ. ಎಂ.ಎಸ್. ಹುಲ್ಲೋಳಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಿತು. 25 ಕವಿಗಳು ಕವನ ವಾಚನ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.