ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಸೇತುವೆ ನಿರ್ಮಾಣ ಕಾಮಗಾರಿ: ಮೂರು ಬಿಆರ್‌ಟಿಎಸ್‌ ತಂಗುದಾಣಕ್ಕೆ ಕುತ್ತು

ಪ್ರಾಧಿಕಾರದಿಂದ ಪರ್ಯಾಯ ವ್ಯವಸ್ಥೆ ಭರವಸೆ
Last Updated 14 ಅಕ್ಟೋಬರ್ 2022, 21:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಹೃದಯ ಭಾಗವಾದ ಚನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲ್ಸೇತುವೆ (ಟ್ರಾಫಿಕ್ ಐಲ್ಯಾಂಡ್) ಕಾಮಗಾರಿಯಿಂದಾಗಿ, ಹುಬ್ಬಳ್ಳಿ–ಧಾರವಾಡ ಸಂಪರ್ಕಿಸುವ ಬಿಆರ್‌ಟಿಎಸ್‌ನ ಮೂರು ಬಸ್ ತಂಗುದಾಣಗಳಿಗೆ ಕುತ್ತು ಬಂದಿದೆ.

ಸುಮಾರು ₹298 ಕೋಟಿ ವೆಚ್ಚದ ಮೇಲ್ಸೇತುವೆ ನಿರ್ಮಾಣ ಮಾರ್ಗದಲ್ಲಿರುವ ಹೊಸೂರು, ಹಳೇ ಬಸ್ ನಿಲ್ದಾಣ ಹಾಗೂ ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಎದುರು, ತಲಾ ₹1.5 ಕೋಟಿ ವೆಚ್ಚದಲ್ಲಿ ಬಿಆರ್‌ಟಿಎಸ್ ನಿರ್ಮಿಸಿದ್ದ ತಂಗುದಾಣಗಳನ್ನು ತೆರವುಗೊಳಿಸಲಾಗುತ್ತಿದೆ.

ಪರ್ಯಾಯ ವ್ಯವಸ್ಥೆ: ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲ್ಸೇತುವೆ ಯೋಜನೆಯ ಪಿಲ್ಲರ್‌ಗಳು ಬಿಆರ್‌ಟಿಎಸ್ ತಂಗುದಾಣವಿರುವ ಸ್ಥಳದಲ್ಲಿ ಬರುತ್ತವೆ. ಅವುಗಳನ್ನು ತೆರವುಗೊಳಿಸುವ ಬಗ್ಗೆ ಈಗಾಗಲೇ ಪ್ರಾಧಿಕಾರ ನಮ್ಮೊಂದಿಗೆ ಚರ್ಚಿಸಿತ್ತು’ ಎಂದು ಬಿಆರ್‌ಟಿಎಸ್ ಸಿವಿಲ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ರಮೇಶ ಗುಡ್ರಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಂಗುದಾಣ ಉಳಿಯುವಂತೆ ಯೋಜನೆಯಲ್ಲಿ ಮಾರ್ಪಾಡು ಮಾಡಬಹುದೇ ಅಥವಾ ಪರ್ಯಾಯ ವ್ಯವಸ್ಥೆ ಮಾಡಬಹುದೇ ಎಂದು ಪರಿಶೀಲಿಸುವಂತೆ ನಾವು ಕೋರಿದ್ದೆವು. ಅದಕ್ಕೆ ಅಧಿಕಾರಿಗಳು ಒಪ್ಪಿದ್ದಾರೆ. ತಂಗುದಾಣಗಳಿರುವ ಸ್ಥಳದಿಂದ ಸ್ವಲ್ಪ ಮುಂದೆ, ಹೊಸ ತಂಗುದಾಣ ನಿರ್ಮಿಸಿ ಕೊಡಲಿದ್ದಾರೆ. ಹಳೇ ಬಸ್ ನಿಲ್ದಾಣದ ಎದುರು ಇರುವ ತಂಗುದಾಣದ ಉದ್ದ ಕಡಿಮೆಯಾಗಲಿದೆ’ ಎಂದರು.

ಸ್ಥಳಾಂತರ: ‘ಮೂರು ತಂಗುದಾಣಗಳ ಪೈಕಿ, ಮಹಾನಗರ ಪಾಲಿಕೆ ಎದುರಿನ ತಂಗುದಾಣವನ್ನು ತೆರವುಗೊಳಿಸಿ, ಅಲ್ಲಿಂದ ಸ್ವಲ್ಪ ಮುಂದಕ್ಕೆ ಕೃಷ್ಣಭವನ ಹೋಟೆಲ್ ಎದುರಿಗೆ ತಂಗುದಾಣ ನಿರ್ಮಿಸಿ ಕೊಡಲಾಗುವುದು. ಹೊಸೂರು ತಂಗುದಾಣವನ್ನು ಸಹ ಮುಂದಕ್ಕೆ ಸ್ಥಳಾಂತರಿಸಿ, ಹೊಸದನ್ನು ನಿರ್ಮಿಸಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಗಂಗಾಧರ ಚಳಗೇರಿ ಹೇಳಿದರು.

‘ಹಳೇ ಬಸ್ ನಿಲ್ದಾಣದ ಎದುರಿಗೆ ಇದ್ದ ತಂಗುದಾಣವನ್ನು ಸ್ಥಳಾಂತರಿಸುವ ಬದಲು, ಅದರ ಉದ್ದವನ್ನು ಕಡಿಮೆ ಮಾಡಲಾಗುವುದು. ಸದ್ಯ ಒಂದೇ ಸಲ ಎರಡು ಬಸ್‌ಗಳು ನಿಲ್ಲುವ 80 ಮೀಟರ್ ಜಾಗವಿದೆ. ಅದನ್ನು 50 ಮೀಟರ್‌ಗೆ ಕಡಿತಗೊಳಿಸಲಾಗುವುದು’ ಎಂದು ತಿಳಿಸಿದರು.

ಮಹತ್ವಾಕಾಂಕ್ಷಿ 1.53 ಕಿ.ಮೀ. ಉದ್ದದ ಮೇಲ್ಸೇತುವೆಯು ಚನ್ನಮ್ಮ ವೃತ್ತದಿಂದ ಕವಲೊಡೆಯಲಿದೆ. ಗದಗ ರಸ್ತೆಯ ಕೊಪ್ಪಿಕರ ರಸ್ತೆ ಕ್ರಾಸ್, ವಿಜಯಪುರ ರಸ್ತೆಯ ದೇಸಾಯಿ ವೃತ್ತ, ಹೊಸೂರು ಬಳಿಯ ಧಾರವಾಡ ರಸ್ತೆ ಹಾಗೂ ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕ ಕಲ್ಪಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT