ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಮನವಿ ಸ್ವೀಕರಿಸದ ಸಿ.ಎಂ ಬೊಮ್ಮಾಯಿ ವಿರುದ್ಧ ಆಕ್ರೋಶ

Last Updated 26 ಜನವರಿ 2023, 5:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣಕ್ಕೆ ಬುಧವಾರ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಿಲ್ದಾಣ ಬಳಿ ಕಾಯುತ್ತಿದ್ದ ರೈತ ಹಾಗೂ ಕಾರ್ಮಿಕ ಸಂಘಟನೆಗಳ ಸದಸ್ಯರಿಂದ ಮನವಿ ಸ್ವೀಕರಿಸದೆ, ಗಣ್ಯರ ಪ್ರವೇಶದ್ವಾರದಿಂದ ತೆರಳಿದ್ದಕ್ಕೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾವೇರಿಯ ಹಿರೆಕೇರೂರಿನಿಂದ ಮುಖ್ಯಮಂತ್ರಿ ಸಂಜೆ 5ಕ್ಕೆ ನಿಲ್ದಾಣಕ್ಕೆ ಬರುತ್ತಾರೆಂಬ ಮಾಹಿತಿ ತಿಳಿದ ಧಾರವಾಡದ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ, ಬಂಡಿವಾಡದ ಸಿದ್ದಯ್ಯಜ್ಜ ರೈತ ಉತ್ಪಾದಕರ ಸಂಘ ಮತ್ತು ಮಾರ್ಕೊಪೋಲೊ ಕ್ರಾಂತಿಕಾರಿ ಕಾರ್ಮಿಕ ಸಂಘಟನೆ ಸದಸ್ಯರು, ಮಧ್ಯಾಹ್ನ 3ಕ್ಕೆ ನಿಲ್ದಾಣದಲ್ಲಿ ಜಮಾಯಿಸಿದ್ದರು.

ಸಿ.ಎಂ.ಗೆ ಮನವಿ ಪತ್ರ ಸಲ್ಲಿಸಿ, ಸಾಧ್ಯವಾದರೆ ಸಿಎಂ ಜೊತೆ ಐದು ನಿಮಿಷ ಚರ್ಚಿಸಬಹುದು ಎಂದುಕೊಂಡಿದ್ದರು. ಆದರೆ, 5 ಗಂಟೆ ಸುಮಾರಿಗೆ ಹೆಲಿಕಾಪ್ಟರ್‌ನಲ್ಲಿ ಬಂದ ಸಿ.ಎಂ, ನೇರವಾಗಿ ಗಣ್ಯರ ಪ್ರವೇಶ ದ್ವಾರದಿಂದ ಹೊರಗೆ ಬಂದು, ಆದರ್ಶನಗರದ ನಿವಾಸಕ್ಕೆ ತೆರಳಿದರು. ಇದರಿಂದ ಮುಖಂಡರಿಗೆ ನಿರಾಸೆಯಾಯಿತು.

‘ಹತ್ತಿ ಬೆಲೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಹತ್ತಿ ಬೆಳೆದ ರೈತರು ಅತಂತ್ರರಾಗುತ್ತಿದ್ದಾರೆ. ಸಮಸ್ಯೆಯನ್ನು ಮುಖ್ಯಮಂತ್ರಿ ಎದುರು ತೋಡಿಕೊಂಡು, ಬೆಂಬಲ ಬೆಲೆ ನಿಗದಿ ಹಾಗೂ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಮನವಿ ಸಲ್ಲಿಸಬೇಕೆಂದು ಧಾರವಾಡದಿಂದ ಬಂದು, ಎರಡು ತಾಸು ಕಾಯುತ್ತ ನಿಂತಿದ್ದೆವು. ಆದರೆ, ಅವರು ನಮ್ಮ ಮನವಿ ಸ್ವೀಕರಿಸದೆ ಮತ್ತೊಂದು ದ್ವಾರದ ಮೂಲಕ ಓಡಿ ಹೋದರು’ ಎಂದು ರೈತ ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಜಡಗಣ್ಣವರ ಆಕ್ರೋಶ ವ್ಯಕ್ತಪಡಿಸಿದರು.

ಅದಕ್ಕೂ ಪೂರ್ವ, ರೈತರು ಹಾಗೂ ಕಾರ್ಮಿಕರು ಪೊಲೀಸ್‌ ಇನ್‌ಸ್ಪೆಕ್ಟರ್‌ ಜೆ.ಎಂ. ಕಾಲಿಮಿರ್ಚಿ ಎದುರು ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT