ಶನಿವಾರ, ಜನವರಿ 23, 2021
19 °C
ಲಿಮ್ಕಾ ದಾಖಲೆಗೆ ಸೇರ್ಪಡೆಯಾಗುವ ನಿರೀಕ್ಷೆಯಲ್ಲಿ ರೈಲ್ವೆ ಅಧಿಕಾರಿಗಳು

90 ದಿನಗಳಲ್ಲಿ ಕೆಳಸೇತುವೆ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಲೋಂಡಾದಲ್ಲಿ ಕೇವಲ 90 ದಿನಗಳಲ್ಲಿ ನಿರ್ಮಾಣವಾದ ಕೆಳಸೇತುವೆ ಕಾಮಗಾರಿ ಲಿಮ್ಕಾ ದಾಖಲೆಯ ಪುಸ್ತಕ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.

2020ರ ಸೆಪ್ಟೆಂಬರ್‌ನಲ್ಲಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್‌ ಸಿಂಗ್‌ ಲೋಂಡಾಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಜನ, ಮುಖ್ಯ ಪಟ್ಟಣ ತಲುಪಲು ರಸ್ತೆ ಸಂಪರ್ಕ ಇಲ್ಲ, ರೈಲ್ವೆ ಹಳಿ ಅಥವಾ ಲೋಂಡಾ ಯಾರ್ಡ್‌ ತಲುಪಲು ಸುಮಾರು ಮೂರು ಕಿ.ಮೀ. ದೂರ ಸುತ್ತಿಕೊಂಡು ಹೋಗಬೇಕಾಗಿದೆ. ಆದ್ದರಿಂದ ಕೆಳಸೇತುವೆ ನಿರ್ಮಿಸಿ ಕೊಡುವುದು ತುರ್ತು ಅಗತ್ಯವಿದೆ ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೆಳಸೇತುವೆ ನಿರ್ಮಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಿಂಗ್‌ ಅಧಿಕಾರಿಗಳಿಗೆ ಸೂಚಿಸಿದ್ದರು.

’ಐದು ರೈಲ್ವೆ ಹಳಿಗಳ ಕೆಳಸೇತುವೆ ಕಾಮಗಾರಿಯನ್ನು ಅಧಿಕಾರಿಗಳು 90 ದಿನಗಳಲ್ಲಿ ಪೂರ್ಣಗೊಳಿಸಿದ್ದಾರೆ. ಇದಕ್ಕಾಗಿ ₹6.12 ಕೋಟಿ ವೆಚ್ಚ ಮಾಡಲಾಗಿದೆ. ಸಾಮಾನ್ಯವಾಗಿ ಒಂದು ಕೆಳಸೇತುವೆ ನಿರ್ಮಾಣಕ್ಕೆ 18ರಿಂದ 24 ತಿಂಗಳು ಬೇಕಾಗುತ್ತದೆ’ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಈ. ವಿಜಯಾ ತಿಳಿಸಿದ್ದಾರೆ.

ಸಿಂಗ್‌, ಈಚೆಗೆ ಕೆಳಸೇತುವೆ ಕಾರ್ಯ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಅವರು ಹುಬ್ಬಳ್ಳಿ–ಲೋಂಡಾ ಮಾರ್ಗದ ಜೋಡಿ ಮಾರ್ಗ ಮತ್ತು ವಿದ್ಯುದ್ದೀಕರಣ ಕಾಮಗಾರಿಯನ್ನು ’ವಿಂಡೊ ಟ್ರೇಲಿಂಗ್‌’ ಮೂಲಕ ನಡೆಸಿದರು. ಪ್ರಧಾನ ಮುಖ್ಯ ಎಂಜಿನಿಯರ್‌ ವಿಫುಲ್‌ ಕುಮಾರ್, ಮುಖ್ಯ ಪರಿಚಾಲನಾ ವ್ಯವಸ್ಥಾ‍ಪಕ ಎಚ್‌.ಎಸ್‌. ವರ್ಮಾ, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಳಖೇಡೆ, ಪ್ರಧಾನ ಸುರಕ್ಷತಾ ಅಧಿಕಾರಿ ಎಂ.ಎ.ವಿ. ರಾಮಾನುಜಮ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.