ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಪರಿಣಾಮ: ಕಹಿಯಾದ ಧಾರವಾಡ ಪೇಢೆ

ಪೇಢೆ ತಯಾರಿಗೆ ಬ್ರೇಕ್
Last Updated 22 ಏಪ್ರಿಲ್ 2020, 1:58 IST
ಅಕ್ಷರ ಗಾತ್ರ

ಧಾರವಾಡ: ಭೌಗೋಳಿಕ ಮಾನ್ಯತೆ ಪಡೆದ ಧಾರವಾಡ ಪೇಢೆಗೂ ಕೊರೊನಾ ಬಿಸಿ ತಗುಲಿದ ಪರಿಣಾಮ, ಉದ್ಯಮಿಗಳ ಪಾಲಿಗೆ ‘ಕಹಿ’ಯಾಗಿ ಪರಿಣಮಿಸಿದೆ.

ಧಾರವಾಡಕ್ಕೆ ಭೇಟಿ ನೀಡುವವರು ಅಥವಾ ಧಾರವಾಡದಿಂದ ಹೋಗುವವರು ತಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ ಕೈಯಲ್ಲೊಂದು ಪೇಢೆ ಡಬ್ಬ ಹಿಡಿದು ಹೋಗುವುದು ಸಂಪ್ರದಾಯ.

ಹೀಗಾಗಿ ಪೇಢಾನಗರಿ ಎಂದೇ ಖ್ಯಾತಿ ಪಡೆದಿರುವ ಧಾರವಾಡದಲ್ಲಿರುವ ಠಾಕೂರ್ ಮತ್ತು ಮಿಶ್ರಾ ಸೇರಿದಂತೆ ಪೇಢೆ ತಯಾರಕರ ಮಳಿಗೆಗಳು ಲಾಕ್‌ಡೌನ್‌ನಿಂದ ಬಾಗಿಲು ಹಾಕಿರುವುದರಿಂದ ಈ ಉದ್ಯಮವೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಹೀಗಾಗಿ ಪೇಢೆಯ ಸವಿಯೂ ಈಗ ಅಪರೂಪವಾಗಿದೆ.

ಈ ಅನಿರೀಕ್ಷಿತ ಬೆಳವಣಿಗೆ ಕುರಿತು ಮಾತನಾಡಿದಮಿಶ್ರಾ ಪೇಢೆ ಮಾಲೀಕ ಸಂಜಯ ಮಿಶ್ರಾ, ‘ಕೇವಲ ಪ್ರವಾಸಿಗರು ಮಾತ್ರವಲ್ಲ, ಸ್ಥಳೀಯರೂ ಪೇಢೆ ಅಪೇಕ್ಷಿಸುತ್ತಿದ್ದರು. ಕೋವಿಡ್–19 ಸೋಂಕು ತಡೆಗಟ್ಟಲು ಏ. 14ರಿಂದ ನಿರಂತರ ಲಾಕ್‌ಡೌನ್‌ನಿಂದ ಉಳಿದ ಪೇಢೆಯನ್ನು ಬಡವರಿಗೆ ಹಂಚಿದ್ದೇವೆ. ಹಂಚಲಾಗದೆ ಉಳಿದದ್ದನ್ನು ಸುಟ್ಟಿದ್ದೇವೆ. ಈಗ ತಯಾರಿಕೆ ಸಂಪೂರ್ಣ ಸ್ಥಗಿತಗೊ
ಳಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ದಿನ ಒಂದಕ್ಕೆ ನಾಲ್ಕು ಕ್ವಿಂಟಲ್‌ ಕೋವಾ ಬಳಸಿ ಮೂರು ಕ್ವಿಂಟಲ್‌ ಪೇಢೆ ತಯಾರಿಸಲಾಗುತ್ತಿತ್ತು. ಮಹಾರಾಷ್ಟ್ರ, ಗೋವಾ, ಕರ್ನಾಟಕ ಸೇರಿದಂತೆ ವಿವಿಧ ಭಾಗಗಳ ಪ್ರಾಂಚೈಸಿಗಳಿಗೆ ಪೇಡೆ ಸರಬರಾಜು ಮಾಡಲಾಗುತ್ತಿತ್ತು. ಇದೀಗ ಲಾಕ್‌ಡೌನ್‌ ಆದಾಗಿನಿಂದ ₹2 ಕೋಟಿಯಷ್ಟು ನಷ್ಟವಾಗಿದೆ’ ಎಂದರು ಸಂಜಯ ಮಿಶ್ರಾ.

ಠಾಕೂರ ಪೇಢೆಯ ದೀಪಕ ಠಾಕೂರ ಮಾತನಾಡಿ, ‘ಪೇಢೆ ರಪ್ತು ಮಾಡುವಂತೆ ಹೊರ ರಾಜ್ಯಗಳು ಹಾಗೂ ವಿದೇಶಗಳಿಂದ ಬೇಡಿಕೆ ಇದೆ. ಆದರೆ, ಲಾಕ್‌ಡೌನ್‌ನಿಂದಾಗಿ ಅವುಗಳಿಗೆ ರಪ್ತು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಹಿವಾಟು ನಿಂತಿದೆ. ಸೋಂಕು ಹರಡದಂತೆ ಸರ್ಕಾರದ ತೆಗೆದುಕೊಂಡಿರುವ ಕ್ರಮ ಬೆಂಬಲಿಸಿ, ನಷ್ಟವಾದರೂ ಉದ್ಯಮವನ್ನು ಸ್ಥಗಿತಗೊಳಿಸಲಾಗಿದೆ’ ಎಂದರು.

‘ಕಿರಾಣಿ ಅಂಗಡಿ, ಬೇಕರಿ ಹಾಗೂ ಠಾಕೂರ ಪೇಢಾಅಂಗಡಿಗಳು ಸೇರಿದಂತೆ ಸುಮಾರು ಮೂರು ಸಾವಿರ ಅಂಗಡಿಗಳಿಗೆ ಪೇಢೆ ರಫ್ತು ಮಾಡುತ್ತಿದ್ದೆವು. ರಾಜ್ಯದಾದ್ಯಂತ ಇರುವ 46 ಪ್ರಾಂಚೈಸಿಗಳು ಬಂದ್‌ ಆಗಿವೆ. ಸಿಹಿ ತಯಾರಿಸಲು ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಮುಂಗಡ ಹಣ ನೀಡಲಾಗಿದೆ. ಇದೀಗ ಪೇಢೆ ತಯಾರಿಸುವುದನ್ನು ನಿಲ್ಲಿಸಿದ್ದೇವೆ’ ಎಂದು ದೀಪಕ ಹೇಳಿದರು.

ಪೇಢೆ ಉದ್ಯಮ ಸ್ಥಗಿತಗೊಂಡಿದ್ದರಿಂದ ಹಾಲು ಉತ್ಪಾದಕರು ನಿತ್ಯ ವಿವಿಧ ಡೈರಿಗಳಿಗೆ ಹಾಲುಗಳನ್ನು ಹಾಕುತ್ತಿದ್ದಾರೆ. ಆ ಮೂಲಕ ಪೇಢೆ ಉದ್ಯಮಕ್ಕೆ ಇವರು ತಾತ್ಕಾಲಿಕ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT